ಬುಚಾದಲ್ಲಿ ನಡೆದ ಹತ್ಯೆಯನ್ನು ಭಾರತ ಖಂಡಿಸುತ್ತದೆ, ಕೂಡಲೇ ಯುದ್ಧ ನಿಲ್ಲಲಿ: ಕೇಂದ್ರ ಸಚಿವ ಎಸ್​.ಜೈಶಂಕರ್​

| Updated By: Lakshmi Hegde

Updated on: Apr 06, 2022 | 2:15 PM

ಜಾಗತಿಕವಾಗಿ ಅಥವಾ ರಾಷ್ಟ್ರಮಟ್ಟದಲ್ಲಿ ಯಾವುದೇ ರೀತಿಯ ಸಂಕೀರ್ಣ ಪರಿಸ್ಥಿತಿ ಎದುರಾದಾಗ ಪ್ರತಿ ದೇಶಗಳೂ ತಮ್ಮದೇ ಆದ ಒಂದು ನೀತಿಯನ್ನು ಅಳವಡಿಸಿಕೊಳ್ಳುತ್ತವೆ. ಅದು ಆಯಾ ದೇಶದ ಜನರ ಸುರಕ್ಷತೆಗೆ ಪೂರಕವಾಗಿರುವಂಥದ್ದಾಗಿರುತ್ತದೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಬುಚಾದಲ್ಲಿ ನಡೆದ ಹತ್ಯೆಯನ್ನು ಭಾರತ ಖಂಡಿಸುತ್ತದೆ, ಕೂಡಲೇ ಯುದ್ಧ ನಿಲ್ಲಲಿ: ಕೇಂದ್ರ ಸಚಿವ ಎಸ್​.ಜೈಶಂಕರ್​
ಎಸ್​.ಜೈಶಂಕರ್​
Follow us on

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರಿ 39ದಿನಗಳೇ ಕಳೆದು ಹೋಗಿವೆ. ಅಲ್ಲಿನ ಪರಿಸ್ಥಿತಿ ಭೀಕರ. ರಷ್ಯಾ ಸೈನಿಕರಿಗೆ ಉಕ್ರೇನ್​ ಸೇನೆ, ನಾಗರಿಕರು, ಬೇರೆ ದೇಶಗಳ ಕೆಲವು ಸ್ವಯಂಸೇವಕರು ತೀವ್ರ ಪ್ರತಿರೋಧವನ್ನೂ ಒಡ್ಡುತ್ತಿದ್ದಾರೆ. ಹಾಗಿದ್ದಾಗ್ಯೂ ಉಕ್ರೇನ್​ನಲ್ಲಿ ಆಗುತ್ತಿರುವ ಹಾನಿ, ನಷ್ಟ ಅಪಾರ.  ಅದರಲ್ಲೂ ಕೀವ್​​ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬುಚಾ ನಗರವಂತೂ ಯುದ್ಧ ಭೀಕರತೆಗೆ ಸಾಕ್ಷಿಯಾಗಿ ನಿಂತಿದೆ.  ಬಾಂಬ್​, ಶೆಲ್ಲಿಂಗ್​ ದಾಳಿಗೆ ಸುಟ್ಟು ಕರಕಲಾಗಿ ನಿಂತ ವಾಹನಗಳು ಇಲ್ಲಿ ರಸ್ತೆಯುದ್ದಕ್ಕೂ ಕಾಣುತ್ತವೆ.  ರಸ್ತೆಯ ಮೇಲೆಲ್ಲ ಹೆಣಗಳು ಬಿದ್ದಿವೆ. ನೀರಿಲ್ಲ, ಗ್ಯಾಸ್​ ಸಂಪರ್ಕವಿಲ್ಲ. ಜನರ ಪಡಿಪಾಟಲಂತೂ ಹೇಳತೀರದ್ದು. ಬುಚಾದಲ್ಲಿ 400ಕ್ಕೂ ಅಧಿಕ ನಾಗರಿಕರ ಹತ್ಯೆಯಾಗಿದ್ದಾಗಿ ವರದಿಯಾಗಿದೆ.

ಬುಚಾ ನಗರದಲ್ಲಿ ನಡೆಯುತ್ತಿರುವ ದಾಳಿ, ಸರಣಿ ಸಾವನ್ನು ಭಾರತದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್ ಖಂಡಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಉಕ್ರೇನ್​ನ ಬುಚಾ ನಗರದಲ್ಲಿ ನಡೆಯುತ್ತಿರುವ ಹತ್ಯೆಯನ್ನು ಭಾರತ ತೀವ್ರವಾಗಿ ವಿರೋಧಿಸುತ್ತದೆ. ಯುದ್ಧದ ಹೆಸರಲ್ಲಿ ನಡೆಯುತ್ತಿರುವ ಈ ಕೊಲೆಗಳ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.  ರಷ್ಯಾ ಮತ್ತು ಉಕ್ರೇನ್​ ನಡುವಿನ ಮಾತುಕತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ. ತಕ್ಷಣವೇ ಯುದ್ಧ ನಿಲ್ಲಬೇಕು. ಈ ವಿಚಾರದಲ್ಲಿ ಭಾರತ ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧ. ಇದನ್ನು ರಷ್ಯಾದ ವಿದೇಶಾಂಗ ಇಲಾಖೆ ಸಚಿವ ಲಾರ್ವೋವ್​ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೂಡ ಹೇಳಲಾಗಿದೆ ಎಂದು ಜೈಶಂಕರ್​ ತಿಳಿಸಿದರು.

ಜಾಗತಿಕವಾಗಿ ಅಥವಾ ರಾಷ್ಟ್ರಮಟ್ಟದಲ್ಲಿ ಯಾವುದೇ ರೀತಿಯ ಸಂಕೀರ್ಣ ಪರಿಸ್ಥಿತಿ ಎದುರಾದಾಗ ಪ್ರತಿ ದೇಶಗಳೂ ತಮ್ಮದೇ ಆದ ಒಂದು ನೀತಿಯನ್ನು ಅಳವಡಿಸಿಕೊಳ್ಳುತ್ತವೆ. ಅದು ಆಯಾ ದೇಶದ ಜನರ ಸುರಕ್ಷತೆಗೆ ಪೂರಕವಾಗಿರುತ್ತದೆ. ಹಾಗೇ ಭಾರತವೂ ತನ್ನ ಹಿತಾಸಕ್ತಿ ಏನೆಂಬುದನ್ನು ನಿರ್ಧರಿಸಿಕೊಂಡಿದೆ.  ಭಾರತದ ಜನರಿಗೆ ಕೆಡುಕಾಗದ ರೀತಿಯಲ್ಲಿ ನಾವು ನಮ್ಮ ನೀತಿಯನ್ನು ರೂಪಿಸಿಕೊಳ್ಳುತ್ತೇವೆ. ಭಾರತದ ಈ ಪರಿಕಲ್ಪನೆಗೆ ಇನ್ನೂ ಹಲವು ದೇಶಗಳು ಬೆಂಬಲ ನೀಡಿವೆ. ನಮ್ಮೊಂದಿಗೆ ಜತೆಯಾಗುವ ಭರವಸೆ ನೀಡಿವೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಬುಚಾದಲ್ಲಿ ನಡೆದ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿಯವರೂ ಖಂಡಿಸಿದ್ದಾರೆ. ಯುಎನ್​​ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಉಕ್ರೇನ್​ನ ಬುಚಾದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆನ್ನು ನಾವು ಖಂಡಿಸುತ್ತೇವೆ. ಇದನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದ್ದರು. ಉಕ್ರೇನ್​ನಲ್ಲಿ ಭದ್ರತಾ ಕ್ರಮಗಳೆಲ್ಲ ವ್ಯರ್ಥವಾಗುತ್ತಿವೆ. ಮಾನವೀಯ ಕಾರಿಡಾರ್​ ರಚನೆಗೆ ಹಿನ್ನಡೆಯಾಗುತ್ತಿದೆ. ಅದರಲ್ಲೂ ಬುಚಾದಲ್ಲಿ ನಡೆದ ಘಟನೆ ನಿಜಕ್ಕೂ ಖೇದಕರ ಎಂದಿದ್ದರು.

ಇದನ್ನೂ ಓದಿ: PPF Benefits: ವರ್ಷದ ಈ ತಿಂಗಳ ಇಂಥ ದಿನಾಂಕದ ಮಧ್ಯೆ ಹೂಡಿಕೆ ಮಾಡಿದಲ್ಲಿ ಪಿಪಿಎಫ್​ನಿಂದ ಹೆಚ್ಚಿನ ಅನುಕೂಲ