ನವರಾತ್ರಿ ವೇಳೆ ದೆಹಲಿಯಲ್ಲಿ ಮಾಂಸದಂಗಡಿಗಳು ಬಂದ್; ಮೇಯರ್ ಕಟ್ಟುನಿಟ್ಟಿನ ಆದೇಶ
ಕೆಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ರಂಜಾನ್ ಉಪವಾಸದ ತಿಂಗಳಿನಲ್ಲಿ ಸಾರ್ವಜನಿಕವಾಗಿ ನೀರು ಕುಡಿಯುವುದನ್ನು ನಿಷೇಧಿಸಿರುವ ಆದೇಶದಂತೆಯೇ ನವರಾತ್ರಿ ವೇಳೆ ಮಾಂಸದ ಅಂಗಡಿಗಳನ್ನು ಮುಚ್ಚುವ ಆದೇಶ ಹೊರಡಿಸಲಾಗಿದೆ.
ನವದೆಹಲಿ: ಭಾರತದಲ್ಲಿ ಈಗ ಜನರು ತಮಗೆ ಇಷ್ಟವಾದ ಆಹಾರ ಪದ್ಧತಿಯನ್ನು ಅನುಸರಿಸುವುದಕ್ಕೂ ಕಷ್ಟವಾಗುತ್ತಿದೆ. ನವರಾತ್ರಿ ವೇಳೆ ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ಕಟ್ಟುನಿಟ್ಟಾಗಿ ಆದೇಶ ಹೊರಡಿಸಲು ದೆಹಲಿ ಮಹಾನಗರ ಪಾಲಿಕೆ ನಿರ್ಧರಿಸಿದೆ. ಪೂರ್ವ ದೆಹಲಿ ಪಾಲಿಕೆಯ ಮೇಯರ್ (Delhi Mayor) ಕೂಡ ಇದೇ ಬೇಡಿಕೆ ಇಟ್ಟಿದ್ದಾರೆ. ಗಾಜಿಯಾಬಾದ್ ಪಾಲಿಕೆಯು ಈಗಾಗಲೇ ಇದೇ ರೀತಿಯ ಆದೇಶ ಹೊರಡಿಸಿ ವಾಪಾಸ್ ಪಡೆದಿದೆ. ಹಿಂದೂಗಳ ಹಬ್ಬವಾದ ನವರಾತ್ರಿಯ (Navaratri) ವೇಳೆ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳಲ್ಲಿ ಮಾಂಸ ಮಾರಾಟ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮೇಯರ್ ಮುಖೇಶ್ ಸೂರ್ಯನ್ ಹೇಳಿದ್ದಾರೆ. ಆದರೆ, ಜನರಿಂದ ದೂರುಗಳು ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ತೀರ್ಮಾನವು ಯಾರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ನಾವು ಎಲ್ಲಾ ಮಾಂಸದ ಅಂಗಡಿಗಳನ್ನು ಕಟ್ಟುನಿಟ್ಟಾಗಿ ಮುಚ್ಚುತ್ತೇವೆ. ಮಾಂಸವನ್ನು ಮಾರಾಟ ಮಾಡದಿದ್ದಾಗ ಜನರು ಮಾಂಸವನ್ನು ತಿನ್ನುವುದಿಲ್ಲ” ಎಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಮುಖೇಶ್ ಸೂರ್ಯನ್ ತಿಳಿಸಿದ್ದಾರೆ. ಕೆಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ರಂಜಾನ್ ಉಪವಾಸದ ತಿಂಗಳಿನಲ್ಲಿ ಸಾರ್ವಜನಿಕವಾಗಿ ನೀರು ಕುಡಿಯುವುದನ್ನು ನಿಷೇಧಿಸಿರುವ ಆದೇಶದಂತೆಯೇ ನವರಾತ್ರಿ ವೇಳೆ ಮಾಂಸದ ಅಂಗಡಿಗಳನ್ನು ಮುಚ್ಚುವ ಆದೇಶ ಹೊರಡಿಸಲಾಗಿದೆ ಎಂದು ಮುಖೇಶ್ ಸೂರ್ಯನ್ ಹೇಳಿದ್ದಾರೆ.
ನಾವು ದೆಹಲಿಯ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜನರು ನನಗೆ ದೂರು ನೀಡಿದ್ದಾರೆ. ಉಪವಾಸ ನಿರತರು, ತೆರೆದ ಮಾಂಸವನ್ನು ಕತ್ತರಿಸುವುದರಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಯಾರ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಲ್ಲ ಎಂದು ಮುಖೇಶ್ ಸೂರ್ಯನ್ ಹೇಳಿದ್ದಾರೆ.
ನಾವು ಮಾಂಸ ನಿಷೇಧದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ಏಪ್ರಿಲ್ 8, 9, 10ರಂದು ನಾವು ಎಲ್ಲಾ ಕಸಾಯಿ ಖಾನೆಗಳನ್ನು ಮುಚ್ಚುತ್ತೇವೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ದೆಹಲಿ ಪಾಲಿಕೆಯ ಮೇಯರ್ ಸೋಮವಾರ ತಮ್ಮ ಪಾಲಿಕೆಯ ಅಡಿಯಲ್ಲಿ ಮಾಂಸದ ಅಂಗಡಿಗಳನ್ನು “ದುರ್ಗಾ ದೇವಿಗೆ ಮೀಸಲಾಗಿರುವ ನವರಾತ್ರಿಯ ಮಂಗಳಕರ ಅವಧಿಯಲ್ಲಿ” ಮುಚ್ಚಬೇಕು ಎಂದು ಘೋಷಿಸಿದ್ದಾರೆ. ಈ ಒಂಬತ್ತು ದಿನಗಳಲ್ಲಿ ಭಕ್ತರು ಮಾಂಸ ಮತ್ತು ಕೆಲವು ಮಸಾಲೆಗಳನ್ನು ತಿನ್ನುವುದನ್ನು ನಿಲ್ಲಿಸುತ್ತಾರೆ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಶ್ಯಾಮ್ ಸುಂದರ್ ಅಗರ್ವಾಲ್ ಕೂಡ ಇದೇ ಬೇಡಿಕೆಯನ್ನು ಇಟ್ಟಿದ್ದಾರೆ. “ಈ ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವುದು ನಮಗೆ ಸಂತೋಷವನ್ನು ನೀಡುತ್ತದೆ” ಎಂದು ಶ್ಯಾಮ್ ಸುಂದರ್ ಅಗರವಾಲ್ ಹೇಳಿದ್ದಾರೆ.
ಇದರಲ್ಲಿ ಏನು ಸಮಸ್ಯೆಯಿದೆ? ಇದರಲ್ಲಿ ಏನು ತಪ್ಪಾಗಿದೆ? ನಾವು ನವರಾತ್ರಿಯ ವೇಳೆ ಮಾತ್ರ ಮಾಂಸದ ಅಂಗಡಿ ಮುಚ್ಚಬೇಕೆಂದು ಕೇಳುತ್ತಿದ್ದೇವೆ ಎಲ್ಲ ದಿನಗಳಲ್ಲೂ ಅಲ್ಲ ಎಂದಿರುವ ಮೇಯರ್ ಈ ಬಗ್ಗೆ “ಸಾರ್ವಜನಿಕ ಅಭಿಪ್ರಾಯ” ತೆಗೆದುಕೊಂಡಿದ್ದೇವೆ ಎಂದು ಒತ್ತಿ ಹೇಳಿದ್ದಾರೆ.
ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಜ್ಞಾನೇಶ್ ಭಾರ್ತಿ ಅವರಿಗೆ ಬರೆದ ಪತ್ರದಲ್ಲಿ, ಮುಖೇಶ್ ಸೂರ್ಯನ್ ಅವರು ಮಾಂಸದ ಅಂಗಡಿಗಳಿಗೆ ಬಂದಾಗ ಅಥವಾ ಅವರು ಹೋಗುವ ದಾರಿಯಲ್ಲಿ ಮಾಂಸದ ದುರ್ವಾಸನೆಯನ್ನು ಅನುಭವಿಸಿದಾಗ “ಧಾರ್ಮಿಕ ನಂಬಿಕೆಗಳು ಮತ್ತು ಭಕ್ತರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ. ನವರಾತ್ರಿಯಲ್ಲಿ ದುರ್ಗಾ ದೇವಿಗೆ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಿ ಜನರು ಉಪವಾಸ ನಡೆಸುತ್ತಾರೆ. ಹೀಗಾಗಿ, ಸಾರ್ವಜನಿಕ ಜನರ ಭಾವನೆಗಳು ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್ 2, 2022ರಿಂದ ಏಪ್ರಿಲ್ 11ವರೆಗೆ ಇರುವ ನವರಾತ್ರಿ ಉತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬಹುದು ಎಂದು ಮುಖೇಶ್ ಸೂರ್ಯನ್ ಪತ್ರ ಬರೆದಿದ್ದಾರೆ.
ದಕ್ಷಿಣ ದೆಹಲಿ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಸುಮಾರು 1,500 ನೋಂದಾಯಿತ ಮಾಂಸದ ಅಂಗಡಿಗಳಿವೆ. ದಕ್ಷಿಣ ದೆಹಲಿಯ ಪಕ್ಕದಲ್ಲೇ ಇರುವ ಉತ್ತರ ಪ್ರದೇಶದ ಗಾಜಿಯಾಬಾದ್ ಪಾಲಿಕೆಯು ಇದೇ ರೀತಿಯಾಗಿ ನವರಾತ್ರಿ ವೇಳೆ ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ಮೊದಲಿಗೆ ಆದೇಶ ಹೊರಡಿಸಿತ್ತು. ಆದರೆ, ಜನರು ನವರಾತ್ರಿ ಉಪವಾಸಕ್ಕೂ, ಮಾಂಸದ ಅಂಗಡಿ ತೆರೆದಿರುವುದ್ಕಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಗಾಜಿಯಾಬಾದ್ ಪಾಲಿಕೆಯು ಮಾಂಸದ ಅಂಗಡಿ ಮುಚ್ಚಬೇಕೆಂಬ ಆದೇಶವನ್ನು ಹಿಂಪಡೆದಿತ್ತು. ಈಗ ದಕ್ಷಿಣ ದೆಹಲಿ ಪಾಲಿಕೆಯು ಅದೇ ರೀತಿಯ ಆದೇಶ ಹೊರಡಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಮೇಯರ್ ಸುಖೇಶ್ ಸೂರ್ಯನ್ ಮಾಂಸದ ಅಂಗಡಿ ಮುಚ್ಚುವ ಬಗ್ಗೆ ಮಾಂಸದ ಅಂಗಡಿ ವರ್ತಕರಿಗೆ ಮನವಿ ಮಾಡುವುದಾಗಿ ಹೇಳಿದ್ದರು. ಆದರೇ ಈಗ ಕಟ್ಟುನಿಟ್ಟಾಗಿ ಆದೇಶ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಹೊಸತೊಡಕು ದಿನ ಬೆಂಗಳೂರಿನ ಮುಸ್ಲಿಂ ಮಾಂಸದಂಗಡಿಗಳಲ್ಲಿ ವ್ಯಾಪಾರ ಅರ್ಧದಷ್ಟು ಕುಸಿದಿತ್ತು!
Halal Cut vs Jhatka Cut Row: ಹಲಾಲ್ V/S ಜಟ್ಕಾ ಕಟ್ ಮಾಂಸ ಮಾರಾಟ; ಯಾವುದಕ್ಕೆ ಬೇಡಿಕೆ?