ಹಣೆಗೆ ತಿಲಕವಿಟ್ಟು ಶಾಲೆಗೆ ಹೋಗಿದ್ದ ಬಾಲಕಿಗೆ ಹೊಡೆದ ಶಿಕ್ಷಕ; ಅಮಾನತು ಮಾಡಿ ಆದೇಶ ಹೊರಡಿಸಿದ ಹಿರಿಯ ಅಧಿಕಾರಿ
ಹಿಂದೂಗಳ ಪವಿತ್ರ ಚೈತ್ರ ನವರಾತ್ರಿ ಹಬ್ಬ ನಡೆಯುತ್ತಿದೆ. ಹೀಗಾಗಿ ದಿನವೂ ಹಿಂದುಗಳ ಮನೆಯಲ್ಲೂ ಪೂಜೆ ನಡೆಯುತ್ತದೆ. ಅಂತೆಯೇ ಮನೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡ ಬಾಲಕಿ, ಹಣೆಗೆ ತಿಲಕವನ್ನಿಟ್ಟು ಶಾಲೆಗೆ ಹೋಗಿದ್ದಳು.
ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿವಾದ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಸಂಬಂಧಪಟ್ಟು ತೀರ್ಪು ಕೂಡ ಹೊರಬಿದ್ದಿದ್ದು, ಶಿಕ್ಷಣ ಸಂಸ್ಥೆಗಳು ವಿಧಿಸಿರುವ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು. ಅದರ ಮೇಲೆ ಹಿಜಾಬ್ ಹಾಕುವಂತಿಲ್ಲ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಆದರೆ ಈ ತೀರ್ಪಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಾದರೂ ಹಿಜಾಬ್ ವಿವಾದ ಪೂರ್ತಿ ಶಮನವಾಗಿಲ್ಲ. ಈ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಹಿಂದು ವಿದ್ಯಾರ್ಥಿನಿಯೊಬ್ಬಳು ತಿಲಕ ಇಟ್ಟು ಕೊಂಡು ಹೋಗಿದ್ದಕ್ಕೆ ಶಿಕ್ಷಕ ಆಕೆಗೆ ಹೊಡೆದಿದ್ದಾರೆ ಎಂದು ವರದಿಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಕುಟುಂಬದವರು ಈ ಆರೋಪ ಮಾಡಿದ್ದಾರೆ. ಸದ್ಯ ಅಲ್ಲಿ ಹಿಂದೂಗಳ ಪವಿತ್ರ ಚೈತ್ರ ನವರಾತ್ರಿ ಹಬ್ಬ ನಡೆಯುತ್ತಿದೆ. ಹೀಗಾಗಿ ದಿನವೂ ಹಿಂದುಗಳ ಮನೆಯಲ್ಲೂ ಪೂಜೆ ನಡೆಯುತ್ತದೆ. ಅಂತೆಯೇ ಮನೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡ ಬಾಲಕಿ, ಹಣೆಗೆ ತಿಲಕವನ್ನಿಟ್ಟು ಶಾಲೆಗೆ ಹೋಗಿದ್ದಳು. ಆದರೆ ಆಕೆ ಹಣೆಗೆ ತಿಲಕ ಇಟ್ಟು ಬಂದಿದ್ದಕ್ಕೆ ಶಿಕ್ಷಕ ನಿಸಾರ್ ಅಹ್ಮದ್ ಅವಳಿಗೆ ಹೊಡೆದಿದ್ದಾರೆ. ಈ ಬಗ್ಗೆ ಪಾಲಕರು ದೂರು ನೀಡುತ್ತಿದ್ದಂತೆ ರಾಜೌರಿ ಜಿಲ್ಲೆಯ ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ. ಘಟನೆಯನ್ನು ತನಿಖೆ ಮಾಡುವಂತೆ ಆದೇಶವನ್ನೂ ನೀಡಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಕಿಯ ತಂದೆ, ಇಂಥ ಘಟನೆಗಳು ಸಮಾಜಕ್ಕೆ ಮಾರಕ. ಸಾಮಾನ್ಯ ಜನರೂ ಕೂಡ ಧರ್ಮದ ವಿಚಾರಕ್ಕೆ ಕಿತ್ತಾಡುವಂತೆ ಮಾಡುತ್ತವೆ. ಧರ್ಮದ ಹೆಸರಿನಲ್ಲಿ ಹೀಗೆಲ್ಲ ಮಾಡುತ್ತ ಹೋದರೆ, ಮುಂದೊಂದು ದಿನ ಪರಸ್ಪರರ ಕುತ್ತಿಗೆ ಕತ್ತರಿಸಿಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಯುಎಸ್ ವಾಯುಸೇನೆಯಲ್ಲಿ ಇರುವ ಭಾರತೀಯ ಮೂಲದ ಯೋಧನೊಬ್ಬನಿಗೆ ಕರ್ತವ್ಯದ ವೇಳೆ ಹಣೆಗೆ ತಿಲಕವಿಡಲು ಸೇನಾಡಳಿತ ಅನುಮತಿ ಕೊಟ್ಟಿತ್ತು. ಅವರ ಹೆಸರು ದರ್ಶನ್ ಶಾ ಎಂದಾಗಿದ್ದು, ತಮಗೆ ತಿಲಕವಿಡಲು ಸೇನೆ ಅನುಮತಿ ಕೊಟ್ಟಿದ್ದನ್ನು ತಿಳಿಸಿ, ಸಂತೋಷ ವ್ಯಕ್ತಪಡಿಸಿದ್ದರು. ಯುಎಸ್ನ ವ್ಯೋಮಿಂಗ್ ಎಂಬಲ್ಲಿರುವ ಎಫ್ಇ ವಾರೆನ್ ಏರ್ಫೋರ್ಸ್ ನೆಲೆಯಲ್ಲಿ ಏರ್ಮ್ಯಾನ್ ಆಗಿರುವ ಭಾರತ ಮೂಲದ ದರ್ಶನ್ ಶಾ, ತಾವು ಕರ್ತವ್ಯದಲ್ಲಿದ್ದಾಗಲೂ ಹಣೆಗೆ ಚಾಂಡ್ಲೋ ತಿಲಕ ಇಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಚಾಂಡ್ಲೋ ತಿಲಕವೆಂದರೆ ಇಂಗ್ಲಿಷ್ ಅಕ್ಷರ U ಆಕಾರದಲ್ಲಿ ಇದ್ದು, ಮಧ್ಯೆ ಬೊಟ್ಟು ಇರುತ್ತದೆ. ಇದು ವೈಷ್ಣವರು ಇಡುವ ಧಾರ್ಮಿಕ ಆಚರಣೆಯ ತಿಲಕ. ಅದಕ್ಕೆ ಹಿರಿಯ ಅಧಿಕಾರಿಗಳು ಅನುಮತಿ ಕೊಟ್ಟಿದ್ದರು. ಆದರೆ ಈಗಿಲ್ಲಿ ಶಾಲೆಗೆ ತಿಲಕವಿಟ್ಟು ಹೋದ ಹುಡುಗಿಗೆ ಶಿಕ್ಷಕ ಹೊಡೆದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಯಾಗುತ್ತಿದ್ದು, ಜನ ಇದೆರಡೂ ಘಟನೆಗಳ ಬಗ್ಗೆ ಮಾತಮಾಡುತ್ತಿದ್ದಾರೆ.
ಇದನ್ನೂ ಓದಿ: Sri Lanka Crisis ದೇಶದಾದ್ಯಂತ ಪ್ರತಿಭಟನೆ ನಡೆದರೂ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡುವುದಿಲ್ಲ: ಶ್ರೀಲಂಕಾ ಸಚಿವ