Omicron: ಭಾರತದಲ್ಲಿ ಒಮಿಕ್ರಾನ್ ಕೇಸ್ ಎರಡೇ ತಿಂಗಳಲ್ಲಿ 10 ಲಕ್ಷಕ್ಕೇರುವ ಸಾಧ್ಯತೆ; ಇದನ್ನು ನಿಯಂತ್ರಿಸಲು ತಿಂಗಳ ಸಮಯವೂ ಉಳಿದಿಲ್ಲ: ಡಾ.ಅನೀಶ್

| Updated By: shivaprasad.hs

Updated on: Dec 25, 2021 | 8:54 AM

ವಿಶ್ವದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಕೇವಲ ಎರಡು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ 10 ಲಕ್ಷ ಮುಟ್ಟಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Omicron: ಭಾರತದಲ್ಲಿ ಒಮಿಕ್ರಾನ್ ಕೇಸ್ ಎರಡೇ ತಿಂಗಳಲ್ಲಿ 10 ಲಕ್ಷಕ್ಕೇರುವ ಸಾಧ್ಯತೆ; ಇದನ್ನು ನಿಯಂತ್ರಿಸಲು ತಿಂಗಳ ಸಮಯವೂ ಉಳಿದಿಲ್ಲ: ಡಾ.ಅನೀಶ್
ಕೊರೊನಾ ಟೆಸ್ಟ್​ ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಒಮಿಕ್ರಾನ್ ಕೇಸ್ (Omicron Case) 10 ಲಕ್ಷಕ್ಕೇರುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ನಮಗೆ ತಿಂಗಳ ಸಮಯವೂ ಇಲ್ಲ ಎಂದು ಕೇರಳದ ಕೊವಿಡ್ ತಜ್ಞರ ಸಮಿತಿ ಸದಸ್ಯ ಡಾ.ಅನೀಶ್ (Dr Anish) ಹೇಳಿದ್ದಾರೆ. ಎಎನ್​ಐ (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘‘ತಿಂಗಳ ಅವಧಿಯಲ್ಲೇ ಒಮಿಕ್ರಾನ್ ನಿಯಂತ್ರಣಕ್ಕೆ ಕ್ರಮ ಅಗತ್ಯ. ಅದಕ್ಕಿಂತ ಹೆಚ್ಚು ಸಮಯ ನಮ್ಮ ಬಳಿಯಿಲ್ಲ’’ ಎಂದು ನುಡಿದಿದ್ದಾರೆ. ವಿಶ್ವದಲ್ಲಿ ದಿನೇದಿನೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೇ ಸಂಖ್ಯೆ ಆಧರಿಸಿ ನೋಡುವುದಾದರೆ ನಮ್ಮಲ್ಲೂ ರೂಪಾಂತರಿ ಒಮಿಕ್ರಾನ್ ಸೋಂಕು ಹೆಚ್ಚಾಗಲಿದೆ. 2-3 ವಾರದಲ್ಲಿ ಒಮಿಕ್ರಾನ್ ಸಂಖ್ಯೆ 1000ಕ್ಕೇರುವ ಸಾಧ್ಯತೆ ಇದ್ದು, 2 ತಿಂಗಳಲ್ಲಿ ಭಾರತದಲ್ಲಿ 10 ಲಕ್ಷ ಒಮಿಕ್ರಾನ್ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಲೇ ಮುನ್ನೆಚ್ಚರಿಕೆ ಕೈಗೊಳ್ಳಲು ತಿಂಗಳಿಗಿಂತ ಕಡಿಮೆ ಅವಧಿಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಡಾ.ಅನೀಶ್ ಹೇಳಿಕೆ ಕುರಿತು ಎಎನ್​ಐ ಹಂಚಿಕೊಂಡ ಮಾಹಿತಿ:

ಜನವರಿಯಲ್ಲಿ ನಮ್ಮಲ್ಲೂ ಸೋಂಕು ಹೆಚ್ಚಾಗಲಿದೆ, ಜಗತ್ತಿಗಿಂತ ನಾವೇನು ಹೊರತಾಗಿಲ್ಲ: ಡಾ.ಸಂಬಿತ್
ಭಾರತದಲ್ಲಿ ಜನವರಿಯಲ್ಲಿ ಕೊವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೈದರಾಬಾದ್ ಕಿಮ್ಸ್ ನಿರ್ದೇಶಕ ಡಾ.ಸಂಬಿತ್ ಹೇಳಿದ್ದಾರೆ. ಭಾರತ ವಿಶ್ವಕ್ಕಿಂತ ಭಿನ್ನವಲ್ಲ. ಈಗ ಎಲ್ಲೆಡೆ ಸೋಂಕು ಹೆಚ್ಚಾಗುತ್ತಿರುವಂತೆಯೇ ಭಾರತದಲ್ಲೂ ಹೆಚ್ಚಳವಾಗಲಿದೆ. ಅದೃಷ್ಟವಶಾತ್ ಮುಂಚಿನಂತೆ ನಮ್ಮಲ್ಲಿ ರೋಗತೀವ್ರತೆ ಹೆಚ್ಚಾಗಿಲ್ಲ. ಇದು ಒಳ್ಳೆಯ ಬೆಳವಣಿಗೆ’’ ಎಂದು ಡಾ.ಸಂಬಿತ್ ನುಡಿದಿದ್ದಾರೆ.

ಡಾ.ಸಂಬಿತ್ ಹೇಳಿಕೆ ಕುರಿತು ಎಎನ್​ಐ ಹಂಚಿಕೊಂಡ ಮಾಹಿತಿ:

ಇಲ್ಲಿಯವರೆಗೆ, ಭಾರತದಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ರೂಪಾಂತರದ 358 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 87 ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ದೆಹಲಿಯಲ್ಲಿ 67 ಒಮಿಕ್ರಾನ್ ಪ್ರಕರಣ ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 88 ಪ್ರಕರಣ ವರದಿಯಾಗಿವೆ. ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಮತ್ತು ಒಮಿಕ್ರಾನ್ ರೂಪಾಂತರದ ಬಗ್ಗೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಹಲವಾರು ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಹೊಸ ಕೊವಿಡ್ ನಿರ್ಬಂಧಗಳನ್ನು ಘೋಷಿಸಿವೆ. ಒಮಿಕ್ರಾನ್ ಆತಂಕದ ಕಾರಣ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ನಿರ್ಬಂಧಗಳನ್ನು ವಿಧಿಸಿದ ಮೊದಲ ರಾಜ್ಯಗಳಾಗಿದ್ದು, ಅಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಘೋಷಿಸಲಾಗಿದೆ.

ಇದುವರೆಗೆ 108 ದೇಶಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಬ್ರಿಟನ್​ನಲ್ಲಿ 90,000 ಮತ್ತು ಡೆನ್ಮಾರ್ಕ್​ನಲ್ಲಿ 30,000 ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಬೂಸ್ಟರ್ ಡೋಸ್​ಗಳನ್ನು ನೀಡುವಂತೆ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ.

ಇದನ್ನೂ ಓದಿ:

ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ; ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ದುರಂತ ಸಾವು

ಬ್ರೈನ್ ಸ್ಟ್ರೋಕ್ ಎಂದರೇನು? ಚಳಿಗಾಲದಲ್ಲೇ ಏಕೆ ಇದರ ಅಪಾಯ ಹೆಚ್ಚು ಇಲ್ಲಿದೆ ಗಮನಿಸಿ

Published On - 8:45 am, Sat, 25 December 21