Atal Bihari Vajpayee Birthday: ಇಂದು ಅಟಲ್​ ಬಿಹಾರಿ ವಾಜಪೇಯಿ 97ನೇ ಜನ್ಮದಿನ; ಸ್ಮರಿಸಿ, ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಅಟಲ್​ ಬಿಹಾರಿ ವಾಜಪೇಯಿ ಅವರು 1924ರ ಡಿಸೆಂಬರ್​ 25ರಂದು ಜನಿಸಿದ್ದರು. ಪ್ರಖರ ವಾಗ್ಮಿ, ಕವಿ  ಮತ್ತು ರಾಜಕಾರಣಿ. ಅದರಲ್ಲೂ ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 1998ರ ಮೇ 11ರಂದು ನಡೆಸಿದ್ದ ಪೋಖ್ರಾನ್​ ಪರಮಾಣು ಪರೀಕ್ಷೆ ಬಳಿಕ ಅದನ್ನು ಸಮರ್ಥಿಸಿಕೊಂಡ ವಾಜಪೇಯಿ ವಾಕ್ಚಾತುರ್ಯಕ್ಕೆ ಇಡೀ ದೇಶ ಬೆರಗಾಗಿತ್ತು.

Atal Bihari Vajpayee Birthday: ಇಂದು ಅಟಲ್​ ಬಿಹಾರಿ ವಾಜಪೇಯಿ 97ನೇ ಜನ್ಮದಿನ; ಸ್ಮರಿಸಿ, ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಅಟಲ್​ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ಮೋದಿ ಒಟ್ಟಿಗಿರುವ ಫೋಟೋ
Follow us
| Updated By: Lakshmi Hegde

Updated on:Dec 25, 2021 | 10:31 AM

ಇಂದು ಮಾಜಿ ಪ್ರಧಾನಮಂತ್ರಿ ಅಟಲ್​ ಬಿಹಾರಿ ವಾಜಪೇಯಿ(Atal Bihari Vajpayee) ಅವರ 97ನೇ ಜನ್ಮದಿನ. ಈ ಹೊತ್ತಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಜಪೇಯಿ ಅವರನ್ನು ಸ್ಮರಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ಇಂದು ಅಟಲ್​ ಬಿಹಾರಿ ವಾಜಪೇಯಿ ಜನ್ಮ ದಿನ(Atal Bihari Vajpayee Birth Day). ಈ ಹೊತ್ತಲ್ಲಿ ಅವರಿಗೆ ಕೋಟಿ ಕೋಟಿ ನಮನಗಳು. ಈ ದೇಶಕ್ಕೆ ಅಟಲ್​ ಜೀ ಅವರು ಅತ್ಯಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಭಾರತವನ್ನು ಬಲಿಷ್ಠಗೊಳಿಸಿ, ಅದನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಅಭಿವೃದ್ಧಿ ಉಪಕ್ರಮಗಳು ಕೋಟ್ಯಂತರ ಭಾರತೀಯರ ಮೇಲೆ ಧನಾತ್ಮಕ ಪರಿಣಾಮ ಬೀರಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 

ಅಟಲ್​ ಬಿಹಾರಿ ವಾಜಪೇಯಿ ಜನ್ಮದಿನವನ್ನು ಕೇಂದ್ರ ಸರ್ಕಾರ ಉತ್ತಮ ಆಡಳಿತ ದಿನ (Good Governance Day)ವನ್ನಾಗಿ ಆಚರಿಸುತ್ತದೆ. ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ 2014ರಿಂದ ಪ್ರತಿವರ್ಷವೂ ಡಿ.25ನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಸರ್ಕಾರದ ಹೊಣೆಗಾರಿಕೆ, ಜವಾಬ್ದಾರಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಅಟಲ್​ ಬಿಹಾರಿ ವಾಜಪೇಯಿ ಅವರು 1924ರ ಡಿಸೆಂಬರ್​ 25ರಂದು ಜನಿಸಿದ್ದರು. ಪ್ರಖರ ವಾಗ್ಮಿ, ಕವಿ  ಮತ್ತು ರಾಜಕಾರಣಿ. ಅದರಲ್ಲೂ ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 1998ರ ಮೇ 11ರಂದು ನಡೆಸಿದ್ದ ಪೋಖ್ರಾನ್​ ಪರಮಾಣು ಪರೀಕ್ಷೆ ಬಳಿಕ ಅದನ್ನು ಸಮರ್ಥಿಸಿಕೊಂಡ ವಾಜಪೇಯಿ ವಾಕ್ಚಾತುರ್ಯಕ್ಕೆ ಇಡೀ ದೇಶ ಬೆರಗಾಗಿತ್ತು. ಆ ದಿನವನ್ನೀಗ ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಆಚರಿಸಲಾಗುತ್ತಿದೆ. ಅಂದು ಪರಮಾಣು ಪರೀಕ್ಷೆಯನ್ನು ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿ ಅಟಲ್​ ಬಿಹಾರಿ ವಾಜಪೇಯಿ, ನಾವು ನಡೆಸಿದ ಪರಮಾಣು ಪರೀಕ್ಷೆಯನ್ನು ಕೆಲವರು ಟೀಕಿಸುತ್ತಿರುವುದು ನನಗೆ ನಿಜಕ್ಕೂ ಅಚ್ಚರಿ ತಂದಿದೆ. 1974ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ನ್ಯೂಕ್ಲಿಯರ್​ ಬಾಂಬ್​ ಟೆಸ್ಟ್ ನಡೆಸಿದಾಗ ನಾವು ಪ್ರತಿಪಕ್ಷದ ಸ್ಥಾನದಲ್ಲಿ ಇದ್ದೆವು. ಆದರೆ ಆ ಪರೀಕ್ಷೆಯನ್ನು ನಾವು ಸ್ವಾಗತಿಸಿದ್ದೆವು ಎಂದು ಹೇಳಿದ್ದರು.

ಅಟಲ್​ ಬಿಹಾರಿ ವಾಜಪೇಯಿ 1939ರಲ್ಲಿ ಆರ್​ಎಸ್​ಎಸ್​ ಸೇರ್ಪಡೆಯಾದರು. 1998-2004ರವರೆಗೆ ಎನ್​ಡಿಎ ಒಕ್ಕೂಟದ ನೇತೃತ್ವ ವಹಿಸಿದ್ದಾರೆ. ಹಾಗೇ, ಬಿಜೆಪಿಯಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿಯಾಗಿದ್ದಾರೆ. ಅವರು 1996ರಲ್ಲಿ ಒಮ್ಮೆ ಕೆಲವೇ ದಿನಗಳ ಕಾಲ ಪ್ರಧಾನಮಂತ್ರಿಯಾಗಿದ್ದರು. ನಂತರ 1998ರಿಂದ 2004ರ ಅವಧಿಯಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದರು. ಈ ಮೂಲಕ ಒಟ್ಟು ಮೂರು ಸಲ ಪ್ರಧಾನಮಂತ್ರಿ ಹುದ್ದೆಗೆ ಏರಿದ್ದಾರೆ.  ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ನಂತರ 2018ರ ಆಗಸ್ಟ್​ 16ರಂದು ನಿಧನರಾದರು. ಆಗ ಅವರಿಗೆ 93ವರ್ಷ ವಯಸ್ಸಾಗಿತ್ತು.  ಅಟಲ್​ ಬಿಹಾರಿ ವಾಜಪೇಯಿ ಅವರಿಗೆ 2015ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದೀಗ ಹಲವು ಜನಕಲ್ಯಾಣ ಯೋಜನೆಗಳನ್ನು ಅಟಲ್​ ಬಿಹಾರಿ ವಾಜಪೇಯಿ ಹೆಸರಲ್ಲಿ ಜಾರಿಗೊಳಿಸಿದೆ. ಅಂತರ್ಜಲ ನಿರ್ವಹಣೆ ಸುಧಾರಣೆ ಮಾಡಲು 6 ಸಾವಿರ ಕೋಟಿ ರೂ.ವೆಚ್ಚದ ಅಟಲ್ ಭೂಜಲ್​ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಇದನ್ನೂ ಓದಿ: Viral Video: ಮನೆಯ ಗೇಟಿನೊಳಗೆ ನುಗ್ಗಿ ನಾಯಿಯನ್ನು ಎಳೆದೊಯ್ದ ಚಿರತೆ: ವೀಡಿಯೋ ವೈರಲ್​

Published On - 9:56 am, Sat, 25 December 21