ನವದೆಹಲಿ: ಬಡವರ ಇಂಧನ ಎಂದೇ ಕರೆಯಲ್ಪಡುವ ಸೀಮೆಎಣ್ಣೆ ದರವನ್ನು ಸ್ವಲ್ಪ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಈಗ ಸಬ್ಸಿಡಿಯನ್ನು ರದ್ದು ಮಾಡಿದೆ. ಇನ್ನು ಮುಂದೆ ಸಾರ್ವಜನಿಕ ವಿತರಣೆ ಕೇಂದ್ರದಲ್ಲಿ ಸೀಮೆಎಣ್ಣೆ ಖರೀದಿಸಲು ಮಾರುಕಟ್ಟೆಯ ಬೆಲೆಯನ್ನೇ ಗ್ರಾಹಕರು ತೆರಬೇಕಿದೆ.
ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, 2021-22ರ ಕೇಂದ್ರ ಬಜೆಟ್ನಲ್ಲಿ ಏಪ್ರಿಲ್ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ಪಾವತಿಸಲು ಯಾವುದೇ ಅವಕಾಶವನ್ನು ನೀಡುವುದಿಲ್ಲ ಎಂದಿದೆ.
ಮಾರ್ಚ್ 31ಕ್ಕೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಸೀಮೆಎಣ್ಣೆ ಸಬ್ಸಿಡಿ ₹2,677.32 ಕೋಟಿ ಆಗಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ₹4,058 ಕೋಟಿ ಆಗಿತ್ತು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೊರೆ ಕಡಿಮೆ ಮಾಡಲು 2016ರಲ್ಲಿ ಕೇಂದ್ರ ಸರ್ಕಾರವು ಸರ್ಕಾರದ ಒಡೆತನದಲ್ಲಿರುವ ತೈಲ ವಿತರಣಾ ಕಂಪನಿಗಳಿಗೆ 15 ದಿನಗಳಿಗೊಮ್ಮೆ ಲೀಟರ್ಗೆ 25 ಪೈಸೆ ಏರಿಕೆ ಮಾಡಲು ಅನುಮತಿ ನೀಡಿತ್ತು ಎಂದು ತೈಲೋದ್ಯಮದಲ್ಲಿ ಸಕ್ರಿಯವಾಗಿರುವ ಸಂಸ್ಥೆಗಳ ಮೂಲಗಳು ಹೇಳಿವೆ.
ಇತ್ತ ಸಾರ್ವಜನಿಕ ವಿತರಣಾ ಕೇಂದ್ರಗಳು ಸೀಮೆಎಣ್ಣೆ ಬೆಲೆಯನ್ನು ಪರಿಷ್ಕರಿಸಿದ್ದು, ಮಾರುಕಟ್ಟೆ ಬೆಲೆಯಲ್ಲಿ ಗ್ರಾಹಕರಿಗೆ ನೀಡಲಿವೆ.
ಮೇ 2020ರಲ್ಲಿ ಲೀಟರ್ಗೆ ₹13.96 ಇದ್ದ ಸೀಮೆಎಣ್ಣೆ ಈಗ ₹30.12ಕ್ಕೇರಿದೆ. ಜನವರಿಯಲ್ಲಿ ಲೀಟರ್ ಸೀಮೆಎಣ್ಣೆಗೆ ₹3.87 ಪೈಸೆ ಏರಿಕೆ ಆಗಿತ್ತು.
Published On - 1:13 pm, Wed, 3 February 21