In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?

ಈ ಮೆರವಣಿಗೆಯಲ್ಲಿ ನಿಹಂಗಾಗಳು (ಸಿಖ್ ಯೋಧರು) ಕುದುರೆ ಸವಾರಿ ಮಾಡುತ್ತಾ ಭಾಗವಹಿಸಿದರು. ಘಾಜೀಪುರ್ ಗಡಿಭಾಗದಿಂದ  ಪ್ರಗತಿ ಮೈದಾನ ಪ್ರದೇಶಕ್ಕೆ ಬಂದ ರೈತರು ಸೆಂಟ್ರಲ್ ದೆಹಲಿಯತ್ತ ಪಯಣ ಬೆಳೆಸಿದ್ದರು.

In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?
ಗಣರಾಜ್ಯೋತ್ಸವದಂದು ಕೆಂಪುಕೋಟೆ ಬಳಿ ಇರುವ ಧ್ವಜಸ್ತಂಭವೇರಿ ಅನ್ಯಧ್ವಜ ಹಾರಿಸಲಾಗಿತ್ತು.

Updated on: Jan 26, 2021 | 4:58 PM

ದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಿರತರಾಗಿದ್ದ ರೈತರು ಇಂದು ಬೆಳಗ್ಗೆ ಟ್ರ್ಯಾಕ್ಟರ್ ಮೆರವಣಿಗೆ ಶುರುವಾಗುವ ಮುನ್ನ ಘಾಜೀಪುರ್ ಗಡಿಭಾಗದಲ್ಲಿ ರಾಷ್ಟ್ರಧ್ವಜ ಹಾರಿಸಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.

ಸಿಂಗು, ಟಿಕ್ರಿ ಮತ್ತು ಘಾಜಿಪುರ್ ಪ್ರದೇಶದಿಂದ ಟ್ರ್ಯಾಕ್ಟರ್ ಮೂಲಕ ಬಂದ ರೈತರು ಸಂಜಯ್ ಗಾಂಧಿ ಟ್ರಾನ್ಸ್ ಪೋರ್ಟ್ ನಗರಕ್ಕೆ ತಲುಪುತ್ತಿದ್ದಂತೆ ಪೊಲೀಸರು ಅಶ್ರುವಾಯು ಶೆಲ್​ಗಳನ್ನು ಸಿಡಿಸಿ ರೈತರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾರೆ.

ಪಾಂಡವ್ ನಗರ ಬಳಿಯಿರುವ ದೆಹಲಿ ಮೀರತ್ ಎಕ್ಸ್​ಪ್ರೆಸ್ ವೇಯಲ್ಲಿ ರೈತರು ಪೊಲೀಸ್ ಬ್ಯಾರಿಕೇಡ್​ಗಳನ್ನು ದೂಡಿ ಮುಂದೆ ಬಂದರು. ಇತ್ತ ನಂಗೊಲೋಯಿ ಜಂಕ್ಷನ್ ತಲುಪಿದ ರೈತರು ಬ್ಯಾರಿಕೇಡ್​ಗಳನ್ನು ಮುರಿದು ಕೇಂದ್ರ ದೆಹಲಿಯತ್ತ ನುಗ್ಗಿದ್ದಾರೆ. ಈ ಮೆರವಣಿಗೆಯಲ್ಲಿ ನಿಹಂಗಾಗಳು (ಸಿಖ್ ಯೋಧರು) ಕುದುರೆ ಸವಾರಿ ಮಾಡುತ್ತಾ ಭಾಗವಹಿಸಿದರು. ಘಾಜೀಪುರ್ ಗಡಿಭಾಗದಿಂದ  ಪ್ರಗತಿ ಮೈದಾನ ಪ್ರದೇಶಕ್ಕೆ ಬಂದ ರೈತರು ಸೆಂಟ್ರಲ್ ದೆಹಲಿಯತ್ತ ಪಯಣ ಬೆಳೆಸಿದ್ದರು.

ಐಟಿಒ ಪ್ರದೇಶದಲ್ಲಿ ಡಿಟಿಸಿ ಬಸ್ ಧ್ವಂಸ, ಪೊಲೀಸ್ ವಾಹನಕ್ಕೆ ಹಾನಿ
ದೆಹಲಿಯ ಐಟಿಒ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರು ಡಿಟಿಸಿ ಬಸ್ ಧ್ವಂಸ ಮಾಡಿದ್ದಾರೆ.  ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಚಿಂತಾಮಣಿ ಚೌಕ್​ನಲ್ಲಿ ದೆಹಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇಲ್ಲಿ ಪೊಲೀಸರು ಮತ್ತು ರೈತರ ನಡುವೆ ನಡೆದ ಸಂಘರ್ಷದಲ್ಲಿ ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ. ಟಿಕ್ರಿ ಸಮೀಪದ ನಂಗಲೋಯಿಯಲ್ಲಿ ಎರಡನೇ ಬಾರಿ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ಒಬ್ಬ ರೈತ ಸಾವಿಗೀಡಾಗಿದ್ದಾರೆ.

ಮೆಟ್ರೊ ಬಂದ್ 
ಸಮಯ್ ಪುರ್ ಬದ್ಲಿ, ರೋಹಿಣಿ ಸೆಕ್ಟರ್ 18/19, ಹೈದರ್ ಪುರ್ ಬದ್ಲಿ ಮೊರ್, ಜಹಂಗೀರ್ ಪುರಿ, ಆದರ್ಶ್ ನಗರ್, ಆಜಾದ್ ಪುರ್, ಮಾಡೆಲ್ ಟೌನ್, ಜಿಟಿಬಿ ನಗರ್, ವಿಶ್ವವಿದ್ಯಾಲಯ, ವಿಧಾನಸಭಾ ಮತ್ತು ಸಿವಿಲ್ ಲೈನ್ಸ್ ಪ್ರದೇಶ ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೊ ರೈಲು ಕಾರ್ಪರೇಷನ್ ಹೇಳಿದೆ.

ಬ್ಯಾರಿಕೇಡ್ ದಾಟಲು ಪ್ರಯತ್ನಿಸುತ್ತಿರುವ ಪ್ರತಿಭಟನಾಕಾರರು

ಜೈ ಜವಾನ್ ಜೈ ಕಿಸಾನ್ ಘೋಷಣೆ ಕೂಗಿದ ರೈತರು
ದೆಹಲಿ ಗಡಿಭಾಗದಿಂದ ಟ್ರ್ಯಾಕ್ಟರ್ , ಮೊಟಾರ್ ಬೈಕ್, ಕುದುರೆ ಸವಾರಿ ನಡೆಸಿ ರಾಷ್ಟ್ರ ರಾಜಧಾನಿಗೆ ಬಂದ ರೈತರು ರಂಗ್ ದೇ ಬಸಂತಿ, ಜೈ ಜವಾನ್ ಜೈ ಕಿಸಾನ್ ಘೋಷಣೆ ಕೂಗಿದ್ದಾರೆ. ಡ್ರಮ್ ಬಾರಿಸುತ್ತಾ ಮರೆವಣಿಗೆ ಮಾಡಿದ ರೈತರಿಗೆ ಅಲ್ಲಿನ ಸ್ಥಳೀಯರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹೂಮಳೆಗೆರೆದಿದ್ದಾರೆ. ಟ್ರ್ಯಾಕ್ಟರ್ ಮೇಲೆ ತ್ರಿವರ್ಣ ಧ್ವಜ ನೆಟ್ಟು ಮೆರವಣಿಗೆ ನಡೆಸಿದ ರೈತರು ‘ಐಸಾ ದೇಶ್ ಹೈ ಮೇರಾ’ ಮತ್ತು ‘ಸಾರೇ ಜಹಾಂಸೇ ಅಚ್ಚಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು
ಎಲ್ಲ ಅಡೆತಡೆಗಳನ್ನು ದಾಟಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಭಾರತೀಯ ಕಿಸಾನ್ ಸಂಘದ ಧ್ವಜ ಹಾರಿಸಿದ್ದಾರೆ. ಕೆಂಪುಕೋಟೆಯಲ್ಲಿರುವ ಇನ್ನೊಂದು ಧ್ವಜಸ್ತಂಭ ಹತ್ತಿದ ರೈತರೊಬ್ಬರು ಭಾರತೀಯ ಕಿಸಾನ್ ಯೂನಿಯನ್ ಧ್ವಜ ಮತ್ತು ಸಿಖ್ ಸಮುದಾಯದ ಧ್ವಜವನ್ನು ಹಾರಿಸಿದ್ದಾರೆ. ಆಮೇಲೆ ಇನ್ನೊಬ್ಬ ರೈತ  ಕೆಂಪುಕೋಟೆ  ಗುಮ್ಮಟದ ಮೇಲೆ ಹತ್ತಿ  ಈ ಎರಡೂ ಧ್ವಜಗಳನ್ನು ಹಾರಿಸಿದ್ದಾರೆ. ಇದಾದನಂತರ ಕೆಲವೇ ಹೊತ್ತಿನಲ್ಲಿ ಕೆಂಪುಕೋಟೆ ಕೆಳಗಡೆ ಮತ್ತೊಮ್ಮೆ ಬಾವುಟ ಹಾರಿಸಿದ್ದಾರೆ.  ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗಿದ್ದಾರೆ.

ಮೋದಿ ಸರ್ಕಾರಕ್ಕೆ ಸಂದೇಶ ನೀಡಿದ್ದೇವೆ, ನಾವು ಇನ್ನು ಮರಳುತ್ತೇವೆ
ಕೆಂಪುಕೋಟೆಗೆ ಮುತ್ತಿಗೆ ಹಾಕಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರೈತರೊಬ್ಬರು ನಾವು ಮೋದಿ ಸರ್ಕಾರಕ್ಕೆ ಸಂದೇಶ ನೀಡಲು ಬಂದಿದ್ದೆವು. ಆ ಕೆಲಸ ಆಗಿದೆ. ನಾವು ಇನ್ನು ಮರುಳುತ್ತೇವೆ ಎಂದು ಹೇಳಿದ್ದಾರೆ. ಹಲವು ಅಡೆತಡೆಗಳನ್ನು ದಾಟಿ ನಾವು ಕೆಂಪುಕೋಟೆಗೆ ತಲುಪಿದ್ದೆವು. ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯೇ ಬೇಕು. ನಾವು ನಮ್ಮ ಗುರಿ ಮುಟ್ಚುವ ವರೆಗೆ ಸುಮ್ಮನಿರುವುದಿಲ್ಲ ಎಂದಿದ್ದಾರೆ

ನಾಯಕರ ಪ್ರತಿಕ್ರಿಯೆ
ಐಟಿಒ ಪ್ರದೇಶದಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ಪೊಲೀಸರು ಅಶ್ರುವಾಯ ಪ್ರಯೋಗ ಮಾಡಿದ್ದಾರೆ. ನಾವು ನಿಗದಿತ ರಸ್ತೆಯಲ್ಲಿಯೇ ಟ್ರ್ಯಾಕ್ಟರ್ ಮೆರವಣಿಗೆ ನಡೆಸುತ್ತಿದ್ದೇವೆ, ರೈತರ ಮೇಲಿನ ಹಿಂಸಾಚಾರವನ್ನು ನಾವು ಖಂಡಿಸುತ್ತಿದ್ದೇವೆ.
ರೈತ ನಾಯಕ ಬಲಬೀರ್ ಸಿಂಗ್ ರಜೇವಾಲ್

ರೈತರಿರುವುದೇ ಹೊಲ ಉಳುವುದಕ್ಕೆ ಎಂದು ಜನರು ಅಂದುಕೊಂಡಿದ್ದಾರೆ. ಆದರೆ ರೈತರಿಗೆ ತುಂಬಾ ವಿಷಯ ಗೊತ್ತಿದೆ. ನಮ್ಮ ಅನ್ನ ಸಂಪಾದನೆಗಾಗಿ ಬಳಸುವ ಟ್ರ್ಯಾಕ್ಟರ್ ಗಳನ್ನು ನಾವು ಪೂಜಿಸುತ್ತೇವೆ. ಮೊಟಾರ್ ಬೈಕ್, ಕುದುರೆ ಸವಾರಿಯೂ ನಮಗೆ ಗೊತ್ತು. ಈ ಐತಿಹಾಸಿಕ ಮೆರವಣಿಗೆಯಲ್ಲಿ ನಾವು ಎಲ್ಲವನ್ನೂ ಪ್ರದರ್ಶಿಸುತ್ತೇವೆ
– ಮೆರವಣಿಗೆಯಲ್ಲಿ ಕುದುರೆ ಸವಾರಿ ನಡೆಸಿದ ರೈತ ಗಗನ್ ಸಿಂಗ್

ರಾಹುಲ್ ಗಾಂಧಿ ಟ್ವೀಟ್

ಯಾವುದೇ ಸಮಸ್ಯೆಗೆ ಹಿಂಸಾಚಾರ ಪರಿಹಾರವಲ್ಲ. ಯಾರಿಗೆ ನೋವಾಗುತ್ತದೆ ಎಂಬುದಲ್ಲ, ದೇಶ ಈ ನೋವನ್ನು ಅನುಭವಿಸಬೇಕಾಗುತ್ತದೆ. ದೇಶಕ್ಕಾಗಿ ರೈತರ ವಿರೋಧಿ ಕಾಯ್ದೆಯನ್ನು ಹಿಂಪಡೆಯರಿ
ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

ಗೌತಮ್ ಗಂಭೀರ್ ಟ್ವೀಟ್

ಹಿಂಸಾಚಾರ ಮತ್ತು ಗಲಭೆಗಳು ಯಾವುದೇ ಸಮಸ್ಯೆಗೆ ಪರಿಹಾರ. ಶಾಂತಿ ಕಾಪಾಡಿ ಎಂದು ನಾನು ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ. ಈ ರೀತಿ ಗಲಭೆ ಮಾಡುವ ದಿನವಲ್ಲ.
ಗೌತಮ್ ಗಂಭೀರ್ (ಬಿಜೆಪಿ ಸಂಸದ)

ಶಶಿ ತರೂರ್ ಟ್ವೀಟ್

ಇದು ದುರದೃಷ್ಟಕರ. ನಾನು ಆರಂಭದಿಂದಲೇ ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಾ ಬಂದಿದ್ದೇನೆ. ಆದರೆ ಕಾನೂನು ಉಲ್ಲಂಘನೆಯನ್ನು ಸಹಿಸುವುದಿಲ್ಲ. ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಧ್ವಜವಲ್ಲದೆ ಬೇರೆ ಯಾವುದೇ ಧ್ವಜ ಕೆಂಪುಕೋಟೆಯಲ್ಲಿ ಹಾರಬಾರದಿತ್ತು.
ಕಾಂಗ್ರೆಸ್ ಸಂಸದ ಶಶಿ ತರೂರ್

ಪ್ರಶಾಂತ್ ಭೂಷಣ್ ಟ್ವೀಟ್

ಟ್ರ್ಯಾಕ್ಟರ್​ಗಳಲ್ಲಿ ಸಾಗುತ್ತಿರುವ ಕೆಲವು ರೈತರು ಮೊದಲೇ ಒಪ್ಪಿದ ಮತ್ತು ನಿರ್ಧರಿಸಿ ಮಾರ್ಗದಿಂದ ವಿಮುಖರಾಗುತ್ತಿರುವುದು ದುರದೃಷ್ಟಕರ. ರೈತರು ಗೊತ್ತುಪಡಿಸಿದ ಮಾರ್ಗಕ್ಕೆ ಹಿಂತಿರುಗುವುದು ಬಹಳ ಮುಖ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಹಿಂಸಾ ನಿಯಮಗಳನ್ನು ಅನುಸರಿಸಬೇಕು. ಯಾವುದೇ ಅಶಿಸ್ತು ಅಥವಾ ಹಿಂಸಾಚಾರವು ಚಳವಳಿಯನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ.
-ಪ್ರಶಾಂತ್ ಭೂಷಣ

ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಂಟರ್​ನೆಟ್ ಸೇವೆ ಸ್ಥಗಿತ

ದೆಹಲಿಯಲ್ಲಿ ಧರಣಿ ಮಾಡುವ ರೈತರು ಭಯೋತ್ಪಾದಕರು, ಇವರಿಗೆ ಪಾಕ್​ ಬೆಂಬಲ ಇದೆ: ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಿತ ಹೇಳಿಕೆ

ದೆಹಲಿ ಕೆಂಪುಕೋಟೆ ಮೇಲೆ ರೈತಧ್ವಜ; ಇತಿಹಾಸದಲ್ಲಿ ಇದೇ ಮೊದಲು ಕೆಂಪುಕೋಟೆಗೆ ರೈತರ ಮುತ್ತಿಗೆ

ರಣರಂಗವಾದ ದೆಹಲಿ.. ಹಸಿರು ಮಾರ್ಗದ ಮೆಟ್ರೋ ಸಂಚಾರ ಬಂದ್

ಕೆಂಪುಕೋಟೆಯಲ್ಲಿ ಮೂರನೇ ಬಾರಿಗೆ ಬಾವುಟ ಹಾರಿಸಿದ ರೈತರು

Live Updates | ಕೆಂಪುಕೋಟೆಯಲ್ಲಿ 3 ಕಡೆ ಬಾವುಟ ಹಾರಿಸಿದ ರೈತರು

Published On - 4:51 pm, Tue, 26 January 21