ದೆಹಲಿ: ಭಾರತದಲ್ಲಿ ಕೊವಿಡ್ 19 (Covid 19) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ 20 ಸಾವಿರಗಳಷ್ಟು ಏರಿಕೆಯಾಗುತ್ತಿದೆ. ನಿನ್ನೆ 37, 379 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು, ಕೇವಲ 24ಗಂಟೆಯಲ್ಲಿ ಬರೋಬ್ಬರಿ 58,097 ಕೊರೊನಾ ಸೋಂಕಿನ ಕೇಸ್ಗಳು ಪತ್ತೆಯಾಗಿವೆ. ಇದು ನಿನ್ನೆಗಿಂತಲೂ ಶೇ.55ರಷ್ಟು ಅಧಿಕವಾದ ಹಾಗಾಗಿದೆ. ಒಟ್ಟಾರೆ ಕೊರೊನಾ ಕೇಸ್(Corona Cases)ಗಳಲ್ಲಿ 18,466 ಕೇಸ್ಗಳು ಮಹಾರಾಷ್ಟ್ರದಲ್ಲೇ ಪತ್ತೆಯಾಗಿವೆ. ಕಳೆದ 24ಗಂಟೆಯಲ್ಲಿ 534 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಹಾಗೇ, ಒಮಿಕ್ರಾನ್ ಸೋಂಕಿತರ ಸಂಖ್ಯೆ ದೇಶದಲ್ಲಿ 2135ಕ್ಕೆ ತಲುಪಿದೆ.
ದೇಶದಲ್ಲಿ 24 ಗಂಟೆಯಲ್ಲಿ 15,389 ಕೊರೊನಾ ಸೋಂಕಿತರು ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,14,004 ಆಗಿದೆ. ಹಾಗೇ, ಭಾರತದಲ್ಲಿ ಸದ್ಯ ಕೊರೊನಾದಿಂದ ಒಟ್ಟಾರೆ ಚೇತರಿಸಿಕೊಂಡವರು 3,43,21,803 ಜನರು. ಸಾವಿನ ಸಂಖ್ಯೆ 4,82,551ಕ್ಕೆ ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ. 4.18 ಮತ್ತು ವಾರದ ಪಾಸಿಟಿವಿಟಿ ಪ್ರಮಾಣ ಶೇ.2.60 ರಷ್ಟಿದೆ. ಹಾಗೇ ಚೇತರಿಕೆ ಪ್ರಮಾಣ ಶೇ.98.01ಕ್ಕೆ ನಿಂತಿದೆ.
ಒಮಿಕ್ರಾನ್ ಮಹಾರಾಷ್ಟ್ರದಲ್ಲೇ ಹೆಚ್ಚು
ಒಮಿಕ್ರಾನ್ ಸೋಂಕಿತರ ಸಂಖ್ಯೆ 2135ಕ್ಕೆ ತಲುಪಿದ್ದು, ಅದರಲ್ಲಿ 828 ಮಂದಿ ಗುಣಮುಖರಾಗಿದ್ದಾರೆ. ಒಮಿಕ್ರಾನ್ ಸೋಂಕಿನ ಸಂಖ್ಯೆ ಮಹಾರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚಾಗಿದ್ದು, 653 ಮಂದಿ ಇದ್ದಾರೆ. ಇಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆಯೂ ಅಧಿಕವಾಗಿದೆ. ಅದು ಬಿಟ್ಟರೆ ದೆಹಲಿಯಲ್ಲಿ 464, ಕೇರಳದಲ್ಲಿ 185, ರಾಜಸ್ಥಾನ 174 , ಗುಜರಾತ್ 154, ತಮಿಳುನಾಡಿನಲ್ಲಿ 124 ಸೋಂಕಿತರಿದ್ದಾರೆ. ಇನ್ನೂ 18 ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕಿನ ಕೇಸ್ಗಳಿದ್ದು, 100 ಕೆಳಗೆ ಇದೆ.
ಕೊವಿಡ್ 19 ಮೂರನೇ ಅಲೆ ಉತ್ತುಂಗಕ್ಕೆ
ಒಮಿಕ್ರಾನ್ ಸೋಂಕು ಮಾರಣಾಂತಿಕವಲ್ಲದೆ ಇದ್ದರೂ, ಪ್ರಸರಣದ ವೇಗ ಅತ್ಯಂತ ಹೆಚ್ಚು ಎಂಬುದನ್ನು ಈಗಾಗಲೇ ತಜ್ಞರು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ವೇಗವಾಗಿ ಹಬ್ಬುತ್ತಿದೆ. ಭಾರತದಲ್ಲಿ ಒಮಿಕ್ರಾನ್ ತಳಿಯ ಕಾರಣದಿಂದ ಕೊವಿಡ್ 19 ಸೋಂಕಿನ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಬಾರಿ ಡೆಲ್ಟಾ ರೂಪಾಂತರ ಬಂದಾಗ ಹೇಗೆ ಕೊರೊನಾ ಎರಡನೇ ಅಲೆ ಅತ್ಯಂತ ಹೆಚ್ಚಾಗಿ ಬಾಧಿಸಿತ್ತೋ, ಹಾಗೇ ಈ ಒಮಿಕ್ರಾನ್ ಕಾರಣದಿಂದ ಜನವರಿ ಕೊನೇ ವಾರ ಅಥವಾ ಫೆಬ್ರವರಿ ಹೊತ್ತಿಗೆ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ ಏರಬಹುದು ಎಂದು ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಆರೋಗ್ಯ ಮೆಟ್ರಿಕ್ಸ್ ವಿಜ್ಞಾನಗಳ ಅಧ್ಯಕ್ಷ ಡಾ. ಕ್ರಿಸ್ಟೋಫರ್ ಮುರ್ರೆ ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ: ಹುಟ್ಟೂರಿನ ಮೇಲಿನ ಪ್ರೀತಿ ಮೆರೆದ ಸೋನು ಸೂದ್; ಹೆಣ್ಣುಮಕ್ಕಳಿಗೆ ಸಾವಿರ ಸೈಕಲ್ ನೀಡಿದ ರಿಯಲ್ ಹೀರೋ
Published On - 9:53 am, Wed, 5 January 22