BBC Documentary: ಇಂಡಿಯಾ: ದಿ ಮೋದಿ ಕ್ವಶ್ಚನ್ ಎಂಬ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು: ರಾಜಕೀಯ ಗುಂಪುಗಳಿಂದ ಬೆದರಿಕೆ

|

Updated on: Jan 24, 2023 | 4:36 PM

ಇಂಡಿಯಾ: ದಿ ಮೋದಿ ಕ್ವಶ್ಚನ್ ಎಂಬ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಕೇರಳದ ಕೆಲವು ರಾಜಕೀಯ ಗುಂಪುಗಳು ಹೇಳಿವೆ.ಈ ಹೇಳಿಕೆಯು ಬಿಜೆಪಿಗೆ ಕೋಪ ತರಿಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಧ್ಯಪ್ರವೇಶಿಸಿ ಇದನ್ನು ತಡೆಯಬೇಕು ಎಂದು ಒತ್ತಾಯಿಸಿದೆ.

BBC Documentary: ಇಂಡಿಯಾ: ದಿ ಮೋದಿ ಕ್ವಶ್ಚನ್ ಎಂಬ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು: ರಾಜಕೀಯ ಗುಂಪುಗಳಿಂದ ಬೆದರಿಕೆ
ನರೇಂದ್ರ ಮೋದಿ
Follow us on

ಇಂಡಿಯಾ: ದಿ ಮೋದಿ ಕ್ವಶ್ಚನ್ ಎಂಬ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಕೇರಳದ ಕೆಲವು ರಾಜಕೀಯ ಗುಂಪುಗಳು ಹೇಳಿವೆ. ಈ ಹೇಳಿಕೆಯು ಬಿಜೆಪಿಗೆ ಕೋಪ ತರಿಸಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಧ್ಯಪ್ರವೇಶಿಸಿ ಇದನ್ನು ತಡೆಯಬೇಕು ಎಂದು ಒತ್ತಾಯಿಸಿದೆ. ಸಿಪಿಎಂನ ಯುವ ಘಟಕ ಡಿವೈಎಫ್‌ಐ, ರಾಜ್ಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವುದಾಗಿ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸುವ ಮೂಲಕ ರಾಜಕೀಯ ಕಿತ್ತಾಟಕ್ಕೆ ಶುರು ಮಾಡಿತ್ತು. ರಾಜ್ಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ವಿಜಯನ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಎರಡು ದಶಕಗಳ ಹಿಂದಿನ ಅಹಿತಕರ ಘಟನೆಗಳನ್ನು ಮೆಲುಕು ಹಾಕುವುದು ಧಾರ್ಮಿಕ ಉದ್ವಿಗ್ನತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ವಿರೋಧ ಪಕ್ಷಗಳ ಈ ಪ್ರಯತ್ನ ದೇಶದ್ರೋಹದ ಕೆಸಲ ಎಂದು ಬಿಜೆಪಿ ಹೇಳಿದ್ದು, ಇಂತಹ ಚಟುವಟಿಕೆಗಳನ್ನು ಬುಡದಲ್ಲೇ ಚಿವುಟಿ ಹಾಕಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ತುರ್ತು ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ.

ಸಿಪಿಎಂ ಜತೆ ನಂಟು ಹೊಂದಿರುವ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮತ್ತು ಕೇರಳ ಪ್ರದೇಶ ಕಾಂಗ್ರೆಸ್‌ನ ಯುವ ಘಟಕ ಸೇರಿದಂತೆ ವಿವಿಧ ಘಟಕಗಳು ಕೂಡ ಇದೇ ರೀತಿ ಘೋಷಣೆಗಳನ್ನು ಮಾಡಿವೆ. ಗಣರಾಜ್ಯೋತ್ಸವ ದಿನದಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಡಾಕ್ಯುಮೆಂಟರಿ ಪ್ರದರ್ಶನ ಮಾಡುವುದಾಗಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಲ್ಪಸಂಖ್ಯಾತ ಘಟಕ ಕೂಡ ಹೇಳಿದೆ.

ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ ಮತ್ತು ಈ ವಿಷಯದಲ್ಲಿ ಅವರ ತುರ್ತು ಮಧ್ಯಸ್ಥಿಕೆಯನ್ನು ಕೋರಿದ್ದಾರೆ.

ಎಸ್‌ಎಫ್‌ಐ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ರಾಜ್ಯದ ವಿವಿಧ ಕಾಲೇಜು ಕ್ಯಾಂಪಸ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶಾಫಿ ಪರಂಬಿಲ್ ಫೇಸ್ ಬುಕ್ ಪೋಸ್ಟ್ ನಲ್ಲಿ, ದ್ರೋಹ ಮತ್ತು ನರಮೇಧದ ನೆನಪುಗಳನ್ನು ಅಧಿಕಾರದಿಂದ ಮರೆಮಾಡಲು ಸಾಧ್ಯವಿಲ್ಲ ಮತ್ತು ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.

ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಹಂಚಿಕೊಳ್ಳುವ ಬಹು ಯೂಟ್ಯೂಬ್ ವೀಡಿಯೊಗಳು ಮತ್ತು ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ಕೇಂದ್ರವು ಕಳೆದ ವಾರ ನಿರ್ದೇಶಿಸಿತ್ತು.

 

Published On - 4:35 pm, Tue, 24 January 23