ದೆಹಲಿ: ಭಾರತದ ಜೊತೆ ಕಾಲು ಕೆರೆದು ಯುದ್ಧಕ್ಕೆ ಸಿದ್ಧವಾಗಿರುವ ಚೀನಾ ಜಗಳ ಆರಂಭಿಸಲು ಒಂದಲ್ಲ ಒಂದು ಕುತಂತ್ರವನ್ನ ಹೆಣೆಯುತ್ತಲೇ ಬಂದಿದೆ. ಈಗಾಗಲೇ ಭಾರತೀಯ ಸೇನೆ ಜೊತೆಗೆ ಕಾಳಗ ನಡೆಸಿರುವ ಚೀನಾ ಸೇನೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮುಖವಾಣಿ ಗ್ಲೋಬಲ್ ಟೈಮ್ಸ್ ಮೂಲಕ ಭಾರತದ ವಿರುದ್ಧ ಹರಿಹಾಯ್ದಿದೆ.
ಭಾರತ-ಚೀನಾ ಗಡಿಯಲ್ಲಿ ಯುದ್ಧದ ಕಾರ್ಮೋಡವೇ ಕವಿದಿದೆ. ಯಾವಾಗ ಏನು ಬೇಕಾದ್ರು ಆಗಬಹುದೆಂಬ ಸ್ಥಿತಿ ನಿರ್ಮಾಣವಾಗಿದೆ. ಇದು ಭಾರತ-ಚೀನಾ ಮಾತ್ರವಲ್ಲದೆ ಇಡೀ ಜಗತ್ತಿಗೇ ಪೀಕಲಾಟ ತಂದೊಡ್ಡಿದೆ. ಯಾಕಂದ್ರೆ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ನಡುವಿನ ಕಾಳಗ ಪ್ರಪಂಚವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಈ ಮಧ್ಯೆ ಭಾರತದಲ್ಲಿ ಸ್ವದೇಶಿ ವಸ್ತುಗಳ ಬಳಕೆ ವಿಚಾರದಲ್ಲಿ ಜಾಗೃತವಾಗುತ್ತಿರುವ ಜನರನ್ನ ಕಂಡು ಡ್ರ್ಯಾಗನ್ ನಾಡು ಬೆಚ್ಚಿಬಿದ್ದಂತೆ ಕಾಣ್ತಿದೆ.
ಭಾರತದಲ್ಲಿ ಚೀನಾ ಸರಕುಗಳ ವಿರುದ್ಧ ಯುದ್ಧ!
ಯೆಸ್ ಚೀನಾ ಲಡಾಖ್ನ ಬಾರ್ಡರ್ನಲ್ಲಿ ಕಿರಿಕ್ ಮಾಡ್ತಾ ಇದ್ದಂತೆ ಭಾರತೀಯರು ಆಕ್ರೋಶಗೊಂಡಿದ್ದಾರೆ. ಅದರಲ್ಲೂ ಚೀನಾ ಸರಕುಗಳ ವಿರುದ್ಧ ಭಾರತದಲ್ಲಿ ಅಕ್ಷರಶಃ ಯುದ್ಧವನ್ನೇ ಸಾರಲಾಗಿದೆ. ಪ್ರತಿಯೊಬ್ಬ ಭಾರತೀಯನಲ್ಲೂ ಆಕ್ರೋಶ ಮೊಳಗಿದೆ. ನಮ್ಮ ಸೇನೆಯ ಮೇಲೆ ಸುಖಾ ಸುಮ್ಮನೆ ಕೈ ಎತ್ತಿದವರ ಸೊಲ್ಲು ಅಡಗಿಸುವಂತೆ ಭಾರತೀಯರು ಧನಿ ಎತ್ತಿದ್ದಾರೆ. ಹಾಗೇ ಚೀನಾ ಸರಕುಗಳಿಗೆ ಒಂದು ಗತಿ ಕಾಣಿಸಲು ಇದೇ ಸರಿಯಾದ ಸಮಯ ಅನ್ನೋದು ಕೂಡ ಭಾರತೀಯರಿಗೆ ಗೊತ್ತಾಗಿದ್ದು, ಎಲ್ಲೆಲ್ಲೂ ‘ಡ್ರ್ಯಾಗನ್’ ಉತ್ಪನ್ನಗಳ ವಿರುದ್ಧ ಯುದ್ಧ ಸಾರಲಾಗಿದೆ.
ಇದು ಜಗತ್ತಿನ ಅತಿದೊಡ್ಡ ಉತ್ಪಾದನಾ ವಲಯ ಹೊಂದಿರುವ ಚೀನಾದ ನಿದ್ದೆಗೆಡಿಸಿದೆ. ತನ್ನ ವಸ್ತುಗಳಿಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಕಟ್ಟಿಕೊಂಡಿರುವ ಚೀನಾದ ಕೋಟೆ ಬಿದ್ದುಹೋಗುವ ಹಂತಕ್ಕೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಭಾರತದ ಜನ ಚೀನಾ ಸರಕುಗಳನ್ನು ಕಡೆಗಣಿಸಬಾರದು, ಹಾಗೇನಾದ್ರೂ ಕಡೆಗಣಿಸಿದ್ರೆ ಅವರಿಗೆ ನಷ್ಟ ಅಂತಾ ಲೇಖನ ಬರೆದಿದೆ.
ಒಂದೇ ಏಟಿಗೆ ಎರಡು ಹಕ್ಕಿ ಫಿನಿಷ್!
ನಾವು ಭಾರತೀಯರು, ನಮ್ಮ ತಂಟೆಗೆ ಬಂದ ರಾಷ್ಟ್ರಕ್ಕೆ ಹೇಗೆ ಪೆಟ್ಟು ಕೊಡಬೇಕು ಅನ್ನೋದು ಸರಿಯಾಗಿಯೇ ಗೊತ್ತಿರುತ್ತೆ. ಇದೀಗ ಚೀನಾ ಸರಕುಗಳ ವಿರುದ್ಧ ಸಾರಲಾಗಿರುವ ಈ ಯುದ್ಧ ಬರೀ ಒಂದು ಟ್ರೇಲರ್ ಅಷ್ಟೇ. ಇನ್ನೂ ಸಿನಿಮಾ ಬಾಕಿ ಇದೆ. ಈ ಮಧ್ಯೆ ಭಾರತೀಯ ವಾಯುಸೇನೆ ಚೀನಾ ನಿದ್ದೆಗೆಡಿಸುವ ನಿರ್ಧಾರವೊಂದನ್ನ ಕೈಗೊಂಡಿದೆ. ಅದೇನಂದ್ರೆ ರಷ್ಯಾದ 33 ಅತ್ಯಾಧುನಿಕ ಯುದ್ಧ ವಿಮಾನ ಖರೀದಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯೋದಕ್ಕೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.
ರಷ್ಯಾ ನಿರ್ಮಿತ ಫೈಟರ್ ಜೆಟ್ಗಳಿಗೆ ಬೇಡಿಕೆ!
ಅಂದಹಾಗೆ ಭಾರತೀಯ ವಾಯುಸೇನೆ 33 ಯುದ್ಧ ವಿಮಾನಗಳ ಖರೀದಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಪಟ್ಟಿಯಲ್ಲಿ ರಷ್ಯಾ ನಿರ್ಮಿತ 21 ಮಿಗ್-29 ಯುದ್ಧ ವಿಮಾನಗಳು ಹಾಗೂ 12 ಸುಖೋಯ್ ಎಂಕೆಐ ಫೈಟರ್ ಜೆಟ್ ಸೇರಿವೆ. ರಷ್ಯಾ ನಿರ್ಮಿತ ಮಿಗ್-29 ಯುದ್ಧ ವಿಮಾನಗಳು ದೀರ್ಘಕಾಲದ ಕಾರ್ಯಾಚರಣೆಗೆ ಸೂಕ್ತವಾಗಿವೆ. ಅಲ್ಲದೆ ಬಲಿಷ್ಠ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಇನ್ನು ಕಾಲಕಾಲಕ್ಕೆ ಯುದ್ಧವಿಮಾನಗಳ ತಂತ್ರಜ್ಞಾನ ನವೀಕರಣ ಕೂಡ ನಡೆಯುತ್ತಿದೆ.
ಹೊಸ ಫೈಟರ್ ಜೆಟ್ ಖರೀದಿಗಾಗಿ ಹಿಂದೆಯೇ ವಾಯುಸೇನೆ ಚರ್ಚೆಸಿತ್ತು. ಆದ್ರೆ ಗಾಲ್ವಾನ್ ಸಂಘರ್ಷದ ಬಳಿಕ 6 ಸಾವಿರ ಕೋಟಿ ರೂಪಾಯಿ ಮೌಲ್ಯದ 33 ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಮುಂದಿನ ವಾರಾಂತ್ಯದೊಳಗೆ ಕೇಂದ್ರ ಸರ್ಕಾರ ಈ ಕುರಿತು ತನ್ನ ನಿಲುವು ಪ್ರಕಟಿಸಲಿದೆ.
ಒಟ್ನಲ್ಲಿ ಭಾರತ ಸೇನಾ ಸಾಮರ್ಥ್ಯವನ್ನ ಮತ್ತಷ್ಟು ಬಲಪಡಿಸೋಕೆ ಮುಂದಾಗಿದೆ. ಸುಮ್ಮನೆ ಇದ್ದವರ ತಂಟೆಗೆ ಬಂದ ಚೀನಾಗೆ ಸರಿಯಾದ ಪಾಠ ಕಲಿಸಲು ಇದೇ ಸೂಕ್ತ ಸಮಯ ಅನ್ನೋದು ವಾಯುಸೇನೆಗೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ನಿರ್ಮಿತ ಫೈಟರ್ ಜೆಟ್ಗಳಿಗೆ ಬೇಡಿಕೆ ಇಡಲಾಗಿದ್ದು, ಕೇಂದ್ರ ಸರ್ಕಾರ ವಾಯುಸೇನೆಯ ಈ ಬೇಡಿಕೆಗೆ ಸಕಾರಾತ್ಮವಾಗಿ ಸ್ಪಂದಿಸುವ ವಿಶ್ವಾಸವಿದೆ. ಹೀಗೆ ರಷ್ಯಾದಿಂದ ಯುದ್ಧ ವಿಮಾನಗಳ ಖರೀದಿ ರಷ್ಯಾ-ಭಾರತ ಸಂಬಂಧವನ್ನು ವೃದ್ಧಿಸುವ ಜೊತೆ ಜೊತೆಗೆ ಚೀನಾಗೆ ಸರಿಯಾಗೇ ಪೆಟ್ಟು ಕೊಡಲಿದೆ.