ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕೆಲ ನೂತನ ಯೋಜನೆಗಳನ್ನ ಪ್ರಕಟಿಸಿದ್ದಾರೆ.
ಆರು ರಾಜ್ಯಗಳ 116 ಜಿಲ್ಲೆಗೆ ಗರೀಬ್ ಕಲ್ಯಾಣ್ ಯೋಜನೆ
ಈ ಘೋಷಣೆಯನ್ವಯ ದೇಶದ ಆರು ರಾಜ್ಯಗಳ 116 ಜಿಲ್ಲೆಗಳಿಗೆ ನೆರವಾಗುವಂತೆ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಜೂನ್ 20 ರಂದು ಬಿಹಾರದ ಕಗಾರಿಯಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ವರ್ಷಕ್ಕೆ ಕನಿಷ್ಟ 125 ದಿನಗಳ ಕೆಲಸ ಪಕ್ಕಾ
ಈ ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆಯಿಂದ ಬಡ ವಲಸೆ ಕಾರ್ಮಿಕರಿಗೆ ವರ್ಷದಲ್ಲಿ ಕನಿಷ್ಟ 125 ದಿನಗಳ ಕಾಲ ಕೆಲಸ ಸಿಗಲಿದೆ. ಕೊರೊನಾ ಸಂಕಷ್ಟದಿಂದ ತಮ್ಮ ರಾಜ್ಯಗಳಿಗೆ ವಾಪಸಾಗಿರುವ ವಲಸೆ ಕಾರ್ಮಿಕರಿಗೆ ಗ್ರಾಮ ಸಡಕ್ ಯೋಜನೆಯಲ್ಲಿ ಉದ್ಯೋಗ ನೀಡಲಾಗುವುದು.
ಇದಕ್ಕಾಗಿ 50ಸಾವಿರ ಕೋಟಿ ರೂಪಾಯಿಗಳನ್ನ ತೆಗೆದಿರಿಸಲಾಗಿದೆ. ಇದರಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ಸರ್ಕಾರ 25 ಕೆಲಸಗಳಿಗೆ ಈ ಹಣ ಮೀಸಲಿಡಲಾಗಿದೆ.
ಆದ್ರೆ ಈ ಯೋಜನೆ ದೇಶದ ಆಯ್ದ ಆರು ರಾಜ್ಯಗಳ 116 ಜಿಲ್ಲೆಗಳ ಜನರಿಗೆ ಮಾತ್ರ ಲಭ್ಯವಿದೆ. ಇನ್ನುಳಿದ ರಾಜ್ಯಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.