2 ವರ್ಷಗಳ ಬಳಿಕ ಡಿ. 15ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭ; 14 ದೇಶಗಳಿಗೆ ನಿರ್ಬಂಧ

| Updated By: ಸುಷ್ಮಾ ಚಕ್ರೆ

Updated on: Nov 26, 2021 | 6:21 PM

ಕೇಂದ್ರ ಸರ್ಕಾರವು 2021ರ ಡಿಸೆಂಬರ್ 15ರಿಂದ ಹಲವಾರು ದೇಶಗಳಿಗೆ ರೆಗ್ಯುಲರ್ ಆಗಿ ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸಲು ಅನುಮತಿ ನೀಡುತ್ತಿದೆ. ಆದರೆ, ಇಂಗ್ಲೆಂಡ್‌, ಸಿಂಗಾಪುರ್, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ 14 ರಾಷ್ಟ್ರಗಳಿಗೆ ರೆಗ್ಯುಲರ್ ವಿಮಾನಗಳ ಹಾರಾಟಕ್ಕೆ ಅವಕಾಶ ಕೊಟ್ಟಿಲ್ಲ.

2 ವರ್ಷಗಳ ಬಳಿಕ ಡಿ. 15ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭ; 14 ದೇಶಗಳಿಗೆ ನಿರ್ಬಂಧ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಕೇಂದ್ರ ಸರ್ಕಾರವು ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ವಿದೇಶಗಳಿಗೆ ರೆಗ್ಯುಲರ್ ವಿಮಾನಗಳ ಹಾರಾಟವನ್ನು ನಿಷೇಧಿಸಿತ್ತು. ಕೊರೊನಾ ವೈರಸ್ ಹರಡದಂತೆ ತಡೆಯಲು ವಿದೇಶಗಳಿಗೆ ರೆಗ್ಯುಲರ್ ವಿಮಾನಗಳ ಹಾರಾಟ ನಿಷೇಧಿಸಿತ್ತು. ಈಗ ಈ ನಿಯಮವನ್ನು ಸಡಿಲಿಸಲು ತೀರ್ಮಾನ ಕೈಗೊಳ್ಳುತ್ತಿದೆ. ಆದರೆ, 14 ದೇಶಗಳಿಗೆ ಈಗಲೂ ಹಳೆಯ ನಿರ್ಬಂಧವೇ ಮುಂದುವರಿಯುತ್ತಿದೆ. ನಿರ್ಬಂಧ ಮುಂದುವರಿದಿರುವ 14 ದೇಶಗಳು ಯಾವುವು? ಈ 14 ದೇಶಗಳಿಗೆ ರೆಗ್ಯುಲರ್ ವಿಮಾನಗಳ ಹಾರಾಟವನ್ನು ಈಗಲೂ ನಿರ್ಬಂಧ ವಿಧಿಸಿರುವುದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಕೇಂದ್ರ ಸರ್ಕಾರವು ಭಾರತದಿಂದ ವಿದೇಶ ಪ್ರವಾಸ ಹೋಗುವವರಿಗೆ ಈ ವರ್ಷಾಂತ್ಯದಲ್ಲಿ ಒಳ್ಳೆಯ ಸುದ್ದಿ ನೀಡುತ್ತಿದೆ. ಸದ್ಯ ವಿದೇಶಗಳಿಗೆ ಬಯೋಬಬಲ್ ವ್ಯವಸ್ಥೆಯಡಿ ಮಾತ್ರ ಭಾರತದಿಂದ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರವು 2021ರ ಡಿಸೆಂಬರ್ 15ರಿಂದ ಹಲವಾರು ದೇಶಗಳಿಗೆ ರೆಗ್ಯುಲರ್ ಆಗಿ ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸಲು ಅನುಮತಿ ನೀಡುತ್ತಿದೆ. ಆದರೆ, ಇಂಗ್ಲೆಂಡ್‌, ಸಿಂಗಾಪುರ್, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ 14 ರಾಷ್ಟ್ರಗಳಿಗೆ ರೆಗ್ಯುಲರ್ ವಿಮಾನಗಳ ಹಾರಾಟಕ್ಕೆ ಅವಕಾಶ ಕೊಟ್ಟಿಲ್ಲ.

14 ದೇಶಗಳನ್ನು ಹೊರತುಪಡಿಸಿ ಎಲ್ಲಾ ದೇಶಗಳಿಂದ ನಿಯಮಿತ ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಹಾರಾಟ ನಡೆಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತವು ಸದ್ಯ 14 ದೇಶಗಳಿಗೆ ರೆಗ್ಯುಲರ್ ಆಗಿ ವಿಮಾನಗಳ ಹಾರಾಟ ಅನುಮತಿ ನೀಡದೆ ನಿರ್ಬಂಧ ವಿಧಿಸಿದೆ. ಈ 14 ದೇಶಗಳಿಂದ ಭಾರತಕ್ಕೆ ಕೊರೊನಾ ವೈರಸ್ ಹರಡಬಹುದು ಎಂಬ ಭಯದಿಂದ ನಿರ್ಬಂಧ ವಿಧಿಸಲಾಗಿದೆ. ಆ 14 ದೇಶಗಳೆಂದರೆ, ಇಂಗ್ಲೆಂಡ್‌, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಫಿನ್ಲೆಂಡ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪೂರ್‌, ಬಾಂಗ್ಲಾದೇಶ, ಬೋಟ್ಸವಾನಾ, ಜಿಂಬಾಬ್ವೆ ದೇಶಗಳಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್ ಆದ ಬಿ.1.1.529 ಪತ್ತೆಯಾಗಿದೆ. ಈ ಪ್ರಭೇದದ ವೈರಸ್ 32 ರೂಪಾಂತರಗಳನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಲಸಿಕೆ ಹಾಗೂ ರೋಗ ನಿರೋಧಕ ಶಕ್ತಿಯಿಂದ ಎಸ್ಕೇಪ್ ಆಗುವ ಸಾಮರ್ಥ್ಯ ಹೊಂದಿದೆ. ವೇಗವಾಗಿ ಹರಡುತ್ತೆ. ಡೆಲ್ಟಾ ಪ್ರಭೇದದ ವೈರಸ್ ಗಿಂತ ಈ ಹೊಸ ಪ್ರಭೇದದ ವೈರಸ್ ಹೆಚ್ಚು ಡೇಂಜರಸ್. ಹೀಗಾಗಿ ದಕ್ಷಿಣ ಆಫ್ರಿಕಾ, ಬೋಟ್ಸವಾನಾ ದೇಶಗಳಿಂದ ರೆಗ್ಯುಲರ್ ವಿಮಾನಗಳು ಭಾರತಕ್ಕೆ ಬರಲು ಅವಕಾಶ ಕೊಟ್ಟಿಲ್ಲ. ಜೊತೆಗೆ ಈ ದೇಶಗಳಿಂದ ಬಬಲ್ ವ್ಯವಸ್ಥೆಯಡಿ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಸ್ಕ್ರೀನಿಂಗ್ ಹಾಗೂ ಟೆಸ್ಟಿಂಗ್ ನಡೆಸಬೇಕೆಂದು ಈಗಾಗಲೇ ಕೇಂದ್ರದ ಆರೋಗ್ಯ ಇಲಾಖೆಯು ಎಲ್ಲ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.

“ಹೊಸ ಕೋವಿಡ್ ಪ್ರಭೇಧ ಮತ್ತು ಈ ದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಮಾಣಗಳ ಹಿನ್ನಲೆಯಲ್ಲಿ ಕೊರೊನಾ ವೈರಸ್ ಬೆದರಿಕೆಯ ಮಟ್ಟವನ್ನು ಆಧರಿಸಿ ಆರೋಗ್ಯ ಸಚಿವಾಲಯವು ವಿನಾಯಿತಿ ನೀಡದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ.”

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಭಾರತವು ಮಾರ್ಚ್ 2020 ರಲ್ಲಿ ರೆಗ್ಯುಲರ್ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿತು. ನಂತರ ವಂದೇ ಭಾರತ್ ವಿಮಾನಗಳು ಮತ್ತು ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು.

“ಈ 14 ದೇಶಗಳೊಂದಿಗೆ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅಸ್ತಿತ್ವದಲ್ಲಿರುವ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಮುಂದುವರಿಯುತ್ತದೆ” ಎಂದು ಮೂಲಗಳು ತಿಳಿಸಿವೆ.

ಇದು ಸಕಾರಾತ್ಮಕ ಹೆಜ್ಜೆ ಮತ್ತು ವಾಯು ಸಂಚಾರವನ್ನು ಪುನರಾರಂಭಿಸಲು ಸರಿಯಾದ ಮಾರ್ಗವಾಗಿದೆ. ಇದು ಅಂತರಾಷ್ಟ್ರೀಯ ವಿಮಾನಗಳು ಪುನರಾರಂಭಿಸುತ್ತಿರುವ ದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ದರಗಳನ್ನು ನಿರ್ಬಂಧಿಸುವ ಮೂಲಕ ಪರಿಹಾರವನ್ನು ನೀಡುತ್ತದೆ. ಇದನ್ನು ಹಂತಗಳಲ್ಲಿ ಮಾಡುವುದರಿಂದ ಕೆಲವು ಯುರೋಪಿಯನ್ ರಾಷ್ಟ್ರಗಳು ಹೊಸ ಕೊರೊನಾ ಕೇಸ್‌ ವರದಿ ಮಾಡಿರುವುದರಿಂದ ವೈರಸ್ ಹರಡುವಿಕೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಪುನರಾರಂಭವು ಸಾಂಕ್ರಾಮಿಕ ರೋಗದಿಂದ ಹೆಚ್ಚು ಜರ್ಜರಿತವಾಗಿರುವ ಬಹುನಿರೀಕ್ಷಿತ ವಾಯುಯಾನ ಕ್ಷೇತ್ರಕ್ಕೆ ಉತ್ತೇಜನವನ್ನು ಸಹ ನೀಡುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲಿ ಈಗಾಗಲೇ ಶೇ. 40 ಕ್ಕಿಂತ ಹೆಚ್ಚು ವಯಸ್ಕ ಜನರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಇದು ಸಾಗರೋತ್ತರ ವಿಮಾನಗಳನ್ನು ಮರುಪ್ರಾರಂಭಿಸುವ ಪ್ರಯತ್ನಕ್ಕೆ ಬಲ ನೀಡಿದೆ.

ನಮ್ಮ ಒಟ್ಟು ಅರ್ಹ ಜನಸಂಖ್ಯೆಯ 40%ಕ್ಕಿಂತ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಇದು ವಿಮಾನಗಳ ಪುನರಾರಂಭದೊಂದಿಗೆ ಮುಂದುವರಿಯಲು ಸರ್ಕಾರಕ್ಕೆ ವಿಶ್ವಾಸವನ್ನು ನೀಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತದ ಅರ್ಹ ಜನಸಂಖ್ಯೆಯ 94.5 ಕೋಟಿ ಜನರ ಪೈಕಿ ಸುಮಾರು 42 ಕೋಟಿ ಜನರು ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅಕ್ಟೋಬರ್‌ನಿಂದ ಚಾರ್ಟರ್ ಫ್ಲೈಟ್‌ಗಳಲ್ಲಿ ದೇಶಕ್ಕೆ ಬರುವ ಜನರಿಗೆ ಪ್ರವಾಸಿ ವೀಸಾಗಳನ್ನು ವಿತರಿಸಲು ಭಾರತವು ಅವಕಾಶ ಮಾಡಿಕೊಟ್ಟಿತು. ನವೆಂಬರ್ ತಿಂಗಳಲ್ಲಿ ಬಬಲ್ ವ್ಯವಸ್ಥೆಯಡಿ ಬರುವ ಪ್ರವಾಸಿಗರಿಗೂ ಪ್ರವಾಸಿ ವೀಸಾಗಳನ್ನು ನೀಡಲಾಗುತ್ತಿತ್ತು.

ಇದನ್ನೂ ಓದಿ: ಸದ್ಯದಲ್ಲೇ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸಹಜ ಸ್ಥಿತಿಯತ್ತ; ವಿಮಾನಯಾನ ಸಚಿವಾಲಯ

Noida International Airport ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತರ ಭಾರತದ ಲಾಜಿಸ್ಟಿಕ್ ಗೇಟ್ ವೇ ಆಗಿ ಕಾರ್ಯನಿರ್ವಹಿಸಲಿದೆ: ಮೋದಿ

Published On - 5:55 pm, Fri, 26 November 21