ಮುಂದಿನ ಮೂರು ದಿನಗಳ ಕಾಲ ಕೆಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಕೆಲವು ಕಡೆ ಬಿಸಿಲ ಝಳ ಗಣನೀಯವಾಗಿ ಹೆಚ್ಚಾಗಲಿದೆ. ರಾಷ್ಟ್ರ ರಾಜಧಾನಿ ದೆಹಲಿ, ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ತಾಪಮಾನವು ಗಣನೀಯವಾಗಿ ಹೆಚ್ಚಾಗಿದೆ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕಾಡುತ್ತಿದ್ದ ಬಿಸಿಲು ಈಗ ಫೆಬ್ರವರಿಯಲ್ಲೇ ಶುರುವಾಗಿದೆ. ಮುಂದಿನ 5 ದಿನಗಳವರೆಗೆ ವಾಯುವ್ಯ, ಮಧ್ಯ ಹಾಗೂ ಪೂರ್ವ ಭಾರತದಲ್ಲಿ ಗರಿಷ್ಠ ತಾಪಮಾನವು ಸರಾಸರಿಗಿಂತ ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ತಾಪಮಾನವು 35-37 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ಅಸ್ಸಾಂ, ಮೇಘಾಲಯ, ಸಿಕ್ಕಿಂ, ತಮಿಳುನಾಡು, ಪುದುಚೇರಿ, ಕಾರೈಕಲ್ನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಗುಜರಾತ್ನಲ್ಲಿ ಮುಂದಿನ 2 ದಿನ ಹವಾಮಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ನಂತರ 3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಮುಂದಿನ 3 ದಿನಗಳಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಬಹುದು. ಫೆಬ್ರವರಿ 26-28ರ ನಡುವೆ ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು ಓದಿ: Heat Wave: ವಿವಿಧ ರಾಜ್ಯಗಳಲ್ಲಿ ಶಾಖದ ಅಲೆಯ ಎಚ್ಚರಿಕೆ, ಗರಿಷ್ಠ ಉಷ್ಣಾಂಶ 3-5 ಡಿಗ್ರಿಗಳಷ್ಟು ಹೆಚ್ಚಳ ಸಾಧ್ಯತೆ
ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಮಳೆಯಾಗಲಿದೆ. ಫೆಬ್ರವರಿ 28ರಂದು ಕಾಶ್ಮೀರ ಕಣಿವೆಯಲ್ಲಿ ಹಾಗೂ ಮಾರ್ಚ್ 1 ರಂದು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಕರ್ನಾಟಕದ ಬಾಗಲಕೋಟೆಯಲ್ಲಿ 12.4 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 31.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ