ಚೀನಾ ಗಡಿಗೆ 15 ದಿನಗಳ ತೀವ್ರ ಸಂಘರ್ಷಕ್ಕೆ ಬೇಕಾಗುವಷ್ಟು ಯುದ್ಧೋಪಕರಣ, ಶಸ್ತ್ರಾಸ್ತ್ರ ರವಾನೆ

15 ದಿನಗಳ ತೀವ್ರ ಯುದ್ಧಕ್ಕೆ ಬೇಕಾಗುವಷ್ಟು ಶಸ್ತ್ರಾಸ್ತ್ರ ಮತ್ತು ಯುದ್ಧ ಪರಿಕರಗಳನ್ನು ಭಾರತೀಯ ಸೇನೆಯು ಪೂರ್ವ ಲಡಾಖ್​ನ ಚೀನಾ ಗಡಿಗೆ ಕಳುಹಿಸಲು ಮುಂದಾಗಿದೆ.

ಚೀನಾ ಗಡಿಗೆ 15 ದಿನಗಳ ತೀವ್ರ ಸಂಘರ್ಷಕ್ಕೆ ಬೇಕಾಗುವಷ್ಟು ಯುದ್ಧೋಪಕರಣ, ಶಸ್ತ್ರಾಸ್ತ್ರ ರವಾನೆ
ಸಾಂದರ್ಭಿಕ ಚಿತ್ರ
Edited By:

Updated on: Dec 14, 2020 | 5:56 PM

ದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಈ ನಡುವೆ 15 ದಿನಗಳ ತೀವ್ರ ಯುದ್ಧಕ್ಕೆ ಬೇಕಾಗುವಷ್ಟು ಶಸ್ತ್ರಾಸ್ತ್ರ ಮತ್ತು ಯುದ್ಧ ಪರಿಕರಗಳನ್ನು ಭಾರತೀಯ ಸೇನೆಯು ಪೂರ್ವ ಲಡಾಖ್​ನ ಚೀನಾ ಗಡಿಗೆ ಕಳುಹಿಸಲು ಮುಂದಾಗಿದೆ.

ಪೂರ್ವ ಲಡಾಖ್​ ಗಡಿಯಲ್ಲಿ ಚೀನಾ ಪದೇಪದೇ ತಕರಾರು ತೆಗೆಯುತ್ತಿರುವ ಕಾರಣ ಭಾರತೀಯ ಸೇನೆಗೆ ಹೆಚ್ಚುವರಿ ಅನುದಾನ ಒದಗಿಸಲಾಗಿತ್ತು. ಈ ಅನುದಾನ ಬಳಸಿಕೊಂಡಿರುವ ಸೇನೆ ಶಸ್ತ್ರಾಸ್ತ್ರ ಹಾಗೂ ಆಧುನಿಕ ಯುದ್ಧ ಪರಿಕರಗಳ ಬಿಡಿಭಾಗಗಳನ್ನು ಪೂರ್ವ ಲಡಾಖ್​ಗೆ ಕಳುಹಿಸಿದೆ. ಇದಕ್ಕಾಗಿ ಒಟ್ಟು ₹ 50 ಸಾವಿರ ಕೋಟಿ ರೂಪಾಯಿ ವಿನಿಯೋಗಿಸಲು ಭಾರತೀಯ ಸೇನೆ ನಿರ್ಧರಿಸಿದೆ.

ಈ ಹಿಂದೆ 10 ದಿನಗಳ ತೀವ್ರ ಯುದ್ಧ ಮಾಡಲು ಲಭ್ಯವಿದ್ದ ಶಸ್ತ್ರಾಸ್ತ್ರ ಸಂಗ್ರಹವನ್ನು ಈಗ 15 ದಿನಗಳ ಯುದ್ಧಕ್ಕೆ ಬೇಕಾಗುವಷ್ಟು ಹೆಚ್ಚಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಕೆಲದಿನಗಳ ಹಿಂದೆಯಷ್ಟೇ ಭಾರತೀಯ ಸೇನೆ ಶಸ್ತ್ರಾಸ್ತ್ರ ಸಂಗ್ರಹ ಹೆಚ್ಚಿಸಲು ಅವಕಾಶ ನೀಡಬೇಕೆಂದು ಅನುಮತಿ ಕೋರಿತ್ತು ಎನ್ನುವುದು ಗಮನಾರ್ಹ ಸಂಗತಿ.

ಕೆಲ ವರ್ಷಗಳ ಹಿಂದೆ 40 ದಿನಗಳ ಸಂಘರ್ಷಕ್ಕೆ ಬೇಕಾಗುವಷ್ಟು ಯುದ್ಧ ಪರಿಕರ ಸಂಗ್ರಹಿಸಿಟ್ಟುಕೊಳ್ಳಲು ಅನುಮತಿ ಇತ್ತಾದರೂ ಕ್ರಮೇಣ ಶಸ್ತ್ರಾಸ್ತ್ರಗಳ ನಿರ್ವಹಣೆ ಹಾಗೂ ಬದಲಾಗುತ್ತಿದ್ದ ಯುದ್ಧ ತಂತ್ರಗಳ ಕಾರಣದಿಂದ 10 ದಿನಗಳ ತೀವ್ರ ಯುದ್ಧಕ್ಕೆ ಅಗತ್ಯವಿರುವಷ್ಟು ಶಸ್ತ್ರಾಸ್ತ್ರ ಸಂಗ್ರಹಿಸಲು ಸೂಚಿಸಲಾಗಿತ್ತು.

ಯುದ್ಧ ಪರಿಕರ ಕೊಳ್ಳಲು ಸ್ವಾತಂತ್ರ್ಯ
ಸದ್ಯ ಭಾರತೀಯ ಸೇನೆಗೆ ಯಾವುದೇ ಸಂದರ್ಭದಲ್ಲಿ ಅವಶ್ಯಕತೆಗೆ ತಕ್ಕಂತೆ ಯುದ್ಧ ಪರಿಕರಗಳನ್ನು ಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಈ ಕಾರಣಕ್ಕಾಗಿಯೇ ₹ 300 ಕೋಟಿ ತೆಗೆದಿರಿಸಲಾಗಿದ್ದು ಯುದ್ಧ ಸನ್ನಿವೇಶಕ್ಕೆ ತಯಾರಾಗಿರಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಉರಿ ಸೇನಾ ನೆಲೆಯ ಮೇಲೆ ದಾಳಿಯಾದಾಗ ಶಸ್ತ್ರಾಸ್ತ್ರ ಹಾಗೂ ಆಧುನಿಕ ಯುದ್ಧ ಸಲಕರಣೆಗಳ ಅಗತ್ಯ ಮನಗಂಡ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್​ ಸೇನೆಗೆ ನೀಡುವ ಅನುದಾನವನ್ನು ₹ 100 ಕೋಟಿಯಿಂದ ₹ 500 ಕೋಟಿಗೆ ಹೆಚ್ಚಿಸಿದ್ದರು.

ಪ್ರಸ್ತುತ ಪೂರ್ವ ಲಡಾಖ್​ನಲ್ಲಿ ಸೇನೆ ಹಾಗೂ ಹೆಚ್ಚುವರಿ ಯುದ್ಧ ಪರಿಕರ ನಿಯೋಜಿಸುವ ಮೂಲಕ ಭಾರತ ಒಂದೇ ಕಲ್ಲಿನಲ್ಲಿ ಚೀನಾ, ಪಾಕಿಸ್ತಾನ ಎಂಬ ಎರಡು ಹಕ್ಕಿಗೆ ಹೊಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತೀಯ ಸೇನೆ ಅತ್ಯಂತ ಆಧುನಿಕ ಯುದ್ಧ ಸಲಕರಣೆ, ಟ್ಯಾಂಕರ್​ಗಳನ್ನು ಗಡಿ ಭಾಗದಲ್ಲಿ ನಿಯೋಜಿಸುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ