ರಾಯಪುರ: 2024ರ ಲೋಕಸಭಾ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಛತ್ತೀಸಗಢ ಮತ್ತು ರಾಜಸ್ಥಾನ ಸೇರಿದಂತೆ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿಯನ್ನು (BJP) ಶತಾಯಗತಾಯ ಸೋಲಿಸಲು ಕಾಂಗ್ರೆಸ್ (Congress) ರಣತಂತ್ರ ಹೆಣೆಯಲು, ಛತ್ತೀಸಗಢದ (Chhattisgarh) ರಾಯಪುರನಲ್ಲಿ (Raipur) ಇಂದಿನಿಂದ (ಫೆ.24-26)ರ ವರೆಗೆ ಮೂರು ದಿನಗಳ ಕಾಲ 85ನೇ ಸರ್ವಸದಸ್ಯರ ಮಹಾ ಅಧಿವೇಶನ (85th Plenary Session) ನಡೆಯಲಿದೆ. ಈ ಮಹಾ ಅಧಿವೇಶನದಲ್ಲಿ ಕಾಂಗ್ರೆಸ್ನ ಸರ್ವ ಸದಸ್ಯರು ಸೇರಿದಂತೆ 15,000 ಗಣ್ಯರು ಭಾಗಿಯಾಗಲಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಪವನ್ ಬನ್ಸಾಲ್ ಮತ್ತು ತಾರಿಕ್ ಅನ್ವರ್ ಅವರೊಂದಿಗೆ ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಮಹಾ ಅಧಿವೇಶನ ಎಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾರಥ್ಯದಲ್ಲಿ ನಡೆಯುತ್ತದೆ. ಭಾರತ್ ಜೋಡೋ ಯಾತ್ರೆಯಿಂದ ಪಕ್ಷಕ್ಕೆ ನವಚೈತನ್ಯ ಬಂದಿದೆ. ಇದರಿಂದ ಮುಂಬರುವ ಚುನಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಮೂರು ದಿನಗಳ ಈ ಮಹಾ ಅಧಿವೇಶನದಲ್ಲಿ ಮೊದಲ ದಿನ, ಇಂದು ಸ್ಟೀರಿಂಗ್ ಕಮಿಟಿ ಸಭೆ ನಡೆಯಲಿದೆ. ಈ ಸ್ಟೀರಿಂಗ್ ಕಮೀಟಿಯನ್ನು ಕಳೆದ ವರ್ಷ 2022ರ ಅಕ್ಟೋಬರ್‌ರಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಡಬ್ಲ್ಯೂಸಿ ಬದಲಿಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒಳಗೊಂಡ 47 ಸದಸ್ಯರ ಸ್ಟೀರಿಂಗ್ ಸಮಿತಿಯನ್ನು ರಚಿಸಿದ್ದರು. ಸ್ಟೀರಿಂಗ್ ಕಮಿಟಿ ಸಭೆ ನಂತರ ನಾಳೆ (ಫೆ.25) ರಂದು ಮಹಾಸಭೆ ಪ್ರಾರಂಭವಾಗುತ್ತದೆ. ಈ ಮಹಾಸಭೆಯನ್ನು “ಹಾಥ್ ಸೆ ಹಾಥ್ ಜೋಡೋ” ಎಂದು ಕರೆಯಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ