Big News: ರೈಲಿನಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ಬುಕ್ ಮಾಡಬೇಕಾ?; ರೈಲ್ವೆ ಇಲಾಖೆಯ ನಿಯಮ ಹೀಗಿದೆ

| Updated By: ಸುಷ್ಮಾ ಚಕ್ರೆ

Updated on: Aug 17, 2022 | 2:57 PM

1ರಿಂದ 4 ವರ್ಷದೊಳಗಿನ ಮಕ್ಕಳಿಗೂ ರೈಲು ಟಿಕೆಟ್ ಖರೀದಿಸುವುದು ಕಡ್ಡಾಯ ಎಂದು ವರದಿಗಳು ಬಂದಿದ್ದವು. ಇದಾದ ಬಳಿಕ ಪ್ರಯಾಣಿಕರಿಗೆ ತಮ್ಮ ಮಕ್ಕಳಿಗೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡಿಸಬೇಕೇ? ಬೇಡವೇ? ಎಂಬ ಗೊಂದಲ ಉಂಟಾಗಿತ್ತು.

Big News: ರೈಲಿನಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ಬುಕ್ ಮಾಡಬೇಕಾ?; ರೈಲ್ವೆ ಇಲಾಖೆಯ ನಿಯಮ ಹೀಗಿದೆ
ಸಾಂಧರ್ಬಿಕ ಚಿತ್ರ
Follow us on

ನವದೆಹಲಿ: ಭಾರತೀಯ ರೈಲುಗಳಲ್ಲಿ (Indian Railways) ಮಕ್ಕಳೊಂದಿಗೆ ಪ್ರಯಾಣಿಸುವಾಗ ಪ್ರಯಾಣಿಕರು ಟಿಕೆಟ್ ಬುಕಿಂಗ್ (Ticket Booking) ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಮಕ್ಕಳಿಗೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬುಕಿಂಗ್​​ನಲ್ಲಿ ರೈಲ್ವೆ ಇಲಾಖೆಯು ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ ಎಂದು ಇತ್ತೀಚೆಗಷ್ಟೇ ಮಾಧ್ಯಮಗಳು ವರದಿ ಮಾಡಿದ್ದವು. 1ರಿಂದ 4 ವರ್ಷದೊಳಗಿನ ಮಕ್ಕಳಿಗೂ ರೈಲು ಟಿಕೆಟ್ ಖರೀದಿಸುವುದು ಕಡ್ಡಾಯ ಎಂದು ವರದಿಗಳು ಬಂದಿದ್ದವು. ಇದಾದ ಬಳಿಕ ಪ್ರಯಾಣಿಕರಿಗೆ ತಮ್ಮ ಮಕ್ಕಳಿಗೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡಿಸಬೇಕೇ? ಬೇಡವೇ? ಎಂಬ ಗೊಂದಲ ಉಂಟಾಗಿತ್ತು. ಆ ಗೊಂದಲಕ್ಕೆ ರೈಲ್ವೆ ಇಲಾಖೆ ತೆರೆ ಎಳೆದಿದೆ. ಭಾರತೀಯ ರೈಲ್ವೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿಕೆಟ್‌ಗಳನ್ನು ಬುಕ್ ಮಾಡದಿದ್ದರೆ ದಂಡ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

5 ವರ್ಷದೊಳಗಿನ ಮಕ್ಕಳಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಖರೀದಿಸುವುದು ಪೋಷಕರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಯಾವುದೇ ಬರ್ತ್​​ಗಳು ಬುಕ್ ಆಗದಿದ್ದರೆ 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿಯಿದೆ. ಭಾರತೀಯ ರೈಲ್ವೆಯು 2020ರ ಮಾರ್ಚ್​ 6ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ಟಿಕೆಟ್ ರಿಸರ್ವೇಷನ್ ಅಗತ್ಯವಿಲ್ಲ. 5 ವರ್ಷದೊಳಗಿನ ಮಕ್ಕಳು ಉಚಿತವಾಗಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು. ಆದರೂ, ಒಂದೊಮ್ಮೆ ಮಕ್ಕಳಿಗೆ ಬರ್ತ್ ಅಗತ್ಯವಿದ್ದರೆ ರೈಲ್ವೆ ಟಿಕೆಟ್ ಬುಕ್ ಮಾಡುವ ಮೂಲಕ ಪೂರ್ಣ ಟಿಕೆಟ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಿಂದ ಹೈದರಾಬಾದ್‌ಗೆ ಇನ್ನು ಮೂರೇ ಗಂಟೆಗಳಲ್ಲಿ ಪ್ರಯಾಣ, 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲು ಹಳಿ ಸ್ಥಾಪನೆ

ಭಾರತೀಯ ರೈಲ್ವೆ ಇತ್ತೀಚೆಗೆ ಲಕ್ನೋ ಮೇಲ್‌ನ ಎಸಿ 3ನೇ ಬೋಗಿಯಲ್ಲಿ ಬೇಬಿ ಬರ್ತ್‌ಗಳನ್ನು ಸೇರಿಸಿದೆ. ಇದು ನೆಟಿಜನ್‌ಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿತ್ತು. ರೈಲು ನಿಲ್ದಾಣಗಳಲ್ಲಿ ಐಆರ್‌ಸಿಟಿಸಿ ಮತ್ತು ರೈಲ್ವೆ ಮೀಸಲಾತಿ ಬೂತ್‌ಗಳಲ್ಲಿ ಟಿಕೆಟ್ ಕಾಯ್ದಿರಿಸುವಾಗ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೀಟು ನೀಡುವ ವ್ಯವಸ್ಥೆಯನ್ನು ರೈಲ್ವೆ ಈಗ ಜಾರಿಗೆ ತಂದಿದೆ. ಇದುವರೆಗೆ 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಟಿಕೆಟ್‌ಗೆ ಅವಕಾಶವಿತ್ತು.

ನೀವು 5ರಿಂದ 11 ವರ್ಷದೊಳಗಿನ ಮಗುವಿಗೆ ಪೂರ್ಣ ಬರ್ತ್ ತೆಗೆದುಕೊಳ್ಳುತ್ತಿದ್ದರೆ ಪೂರ್ಣ ಶುಲ್ಕ ಮಾತ್ರ ಪಾವತಿಸಬೇಕಾಗುತ್ತದೆ. ನೀವು ಪೂರ್ಣ ಬರ್ತ್ ತೆಗೆದುಕೊಳ್ಳದಿದ್ದರೆ ಟಿಕೆಟ್ ದರದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ರೈಲ್ವೆ ಟಿಕೆಟ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Wed, 17 August 22