AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮದುವೆಯಾಗಿ ವಿದೇಶದಲ್ಲಿ ಡಿವೋರ್ಸ್ ಪಡೆದರೆ ಅದು ಮಾನ್ಯವಲ್ಲ: ಸುಪ್ರೀಂಕೋರ್ಟ್ ತೀರ್ಪು

ಭಾರತದಲ್ಲಿ ಮದುವೆಯಾದ ದಂಪತಿಗಳು ವಿದೇಶಿ ಕಾನೂನುಗಳು ಮತ್ತು ಕೋರ್ಟ್‌ಗಳ ಮೂಲಕ ವಿಚ್ಛೇದನ ಪಡೆದರೂ, ಅದು ಭಾರತೀಯ ಕಾನೂನಿನಡಿ ಮಾನ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬ್ರಿಟಿಷ್ ಪ್ರಜೆಯೊಬ್ಬರ ವಿರುದ್ಧದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಬ್ರಿಟಿಷ್ ಪ್ರಜೆ ಭಾರತದಲ್ಲಿ ಮಹಿಳೆಯೊಬ್ಬರನ್ನು ಮದುವೆಯಾಗಿ ನಂತರ ವಿದೇಶದಲ್ಲಿ ಡಿವೋರ್ಸ್ ನೀಡಿ ಬೇರೊಬ್ಬಳನ್ನು ಎರಡನೇ ವಿವಾಹವಾಗಿದ್ದರು.

ಭಾರತದಲ್ಲಿ ಮದುವೆಯಾಗಿ ವಿದೇಶದಲ್ಲಿ ಡಿವೋರ್ಸ್ ಪಡೆದರೆ ಅದು ಮಾನ್ಯವಲ್ಲ: ಸುಪ್ರೀಂಕೋರ್ಟ್ ತೀರ್ಪು
ಸುಪ್ರೀಂಕೋರ್ಟ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2026 | 6:09 PM

Share

ನವದೆಹಲಿ, ನವೆಂಬರ್ 12: ಭಾರತದಲ್ಲಿ ಮದುವೆಯಾದ ವ್ಯಕ್ತಿಗಳು ವಿದೇಶಿ ಕೋರ್ಟ್‌ಗಳಿಂದ ವಿಚ್ಛೇದನ ಪಡೆದುಕೊಂಡು ಬಂದರೆ, ಭಾರತೀಯ ಕಾನೂನಿನಡಿ ಆ ಮದುವೆ ರದ್ದಾದಂತೆ ಪರಿಗಣನೆಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಂದರೆ, ಭಾರತೀಯ ಕಾನೂನಿನಲ್ಲಿ (Hindu Marriage Act ಇತ್ಯಾದಿ) ಇಲ್ಲದ ಕಾರಣಗಳನ್ನು ಆಧರಿಸಿ ವಿದೇಶಿ ನ್ಯಾಯಾಲಯದಿಂದ ವಿಚ್ಛೇದನ ಪಡೆದರೆ, ಅದು ಭಾರತದಲ್ಲಿ ಕಾನೂನುಬದ್ಧವಾಗಿ ಒಪ್ಪಿತವಾಗುವುದಿಲ್ಲ.

ವಿದೇಶಿ ಕೋರ್ಟ್‌ನ ವಿಚ್ಛೇದನ ಆದೇಶವನ್ನು ಆಧರಿಸಿ ಯಾರಾದರೂ ಭಾರತದಲ್ಲಿ ಅಥವಾ ಹೊರದೇಶದಲ್ಲಿ ಎರಡನೇ ಮದುವೆಯಾದರೆ, ಭಾರತೀಯ ಕಾನೂನಿನ ಪ್ರಕಾರ ಅವರ ಮೊದಲ ಮದುವೆ ಹಾಗೆಯೇ ಮುಂದುವರಿಯುತ್ತಿರುವುದರಿಂದ ಅವರು ದ್ವಿವಿವಾಹ (Bigamy – IPC Section 494) ಅಪರಾಧದಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಇದನ್ನೂ ಓದಿ: ಬೆಳಗಿನ ಜಾವ 4 ಗಂಟೆಗೆ ಎದ್ದು ಮನೆ ಮನೆಗೆ ದಿನಪತ್ರಿಕೆ ಹಂಚುತ್ತಿದ್ದ ದಿವ್ಯಾಂಗನಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ಕೊಟ್ಟ ಮಹಾನ್ ಆರ್ಯಮನ್ ಸಿಂಧಿಯಾ

ವಿದೇಶಿ ಪ್ರಜೆಗಳಾಗಿ ಬದಲಾದವರು ಅಥವಾ ವಿದೇಶದಲ್ಲಿ ನೆಲೆಸಿರುವವರು ಭಾರತದಲ್ಲಿ ನಡೆದ ಮದುವೆಗಳಿಗೆ ಸಂಬಂಧಿಸಿದಂತೆ ಈ ನಿಯಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಿಪಿಸಿ (CPC) ಸೆಕ್ಷನ್ 13 ರ ಅನ್ವಯ ಅಮಾನ್ಯ

ಸಿವಿಲ್ ಪ್ರೊಸೀಜರ್ ಕೋಡ್ (CPC) ಸೆಕ್ಷನ್ 13 ರ ಪ್ರಕಾರ, ಯಾವುದೇ ವಿದೇಶಿ ನ್ಯಾಯಾಲಯದ ತೀರ್ಪು ಭಾರತೀಯ ಕಾಯ್ದೆಗಳು ಮತ್ತು ಕಾನೂನು ಚೌಕಟ್ಟಿಗೆ ವಿರೋಧವಾಗಿದ್ದರೆ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರ ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಯುಪಿ ಚುನಾವಣೆಗೆ ಓವೈಸಿ–ಚಂದ್ರಶೇಖರ್ ಆಜಾದ್ ಮೈತ್ರಿ, ಸಿಎಂ ಅಭ್ಯರ್ಥಿಯಾಗಿ ಆಜಾದ್ ಹೆಸರು ಘೋಷಣೆ

ವಿದೇಶದಲ್ಲಿ ಡಿವೋರ್ಸ್ ಪಡೆದು ಎರಡನೇ ವಿವಾಹವಾದ ಪ್ರಕರಣ ಇದು…

ಬ್ರಿಟ್ ನಿವಾಸಿಯಾದ ವ್ಯಕ್ತಿಯೊಬ್ಬ ಭಾರತದಲ್ಲಿ ಹಿಂದೂ ಶಾಸ್ತ್ರೋಕ್ತ ರೀತಿಯಲ್ಲಿ ಒಬ್ಬಳನ್ನು ಮದುವೆಯಾಗಿ, ವಿದೇಶದಲ್ಲಿ ಆಕೆಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾದ ಪ್ರಕರಣ ಇದು. ವೈವಾಹಿಕ ಜೀವನ ಸಂಪೂರ್ಣ ಮುರಿದುಬಿದ್ದಿದೆ (Irretrievable breakdown of marriage) ಎನ್ನುವ ಕಾರಣ ನೀಡಿ ವಿದೇಶದಲ್ಲಿ ವಿಚ್ಛೇದನ ಪಡೆಯಲಾಗಿತ್ತು. ಡಿವೋರ್ಸ್​ಗೆ ಆತನ ಹೆಂಡತಿಯ ಸಮ್ಮತಿ ಇರಲಿಲ್ಲ. ಭಾರತದಲ್ಲಿ ವಿಚ್ಛೇದನ ಪಡೆಯಲು ಇದೊಂದೇ ಕಾರಣ ಸಾಕಾಗುವುದಿಲ್ಲ. ಹೀಗಾಗಿ, ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮೊದಲ ಮದುವೆ ಚಾಲ್ತಿಯಲ್ಲಿರುವಾಗಲೇ ಎರಡನೇ ಮದುವೆಯಾಗಿದ್ದಾರೆಂದು ಪರಿಗಣಿಸಿ ಕ್ರಿಮಿನಲ್ ಕಾನೂನುಗಳನ್ನು ಅನ್ವಯಗೊಳಿಸಲು ಅನುಮತಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More