
ನವದೆಹಲಿ, ಅಕ್ಟೋಬರ್ 3: ಭಾರತದ ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಕಂಪನಿಯ ತರಬೇತಿ ಪೈಲಟ್ ಒಬ್ಬರು, ತಮ್ಮ ತರಬೇತಿಯ ಚೆಕ್ ರೈಡ್ ಮೌಲ್ಯಮಾಪನದಲ್ಲಿ ಕ್ಲಿಯರೆನ್ಸ್ ನಿರಾಕರಿಸಿದ ಬಳಿಕ ತಮ್ಮ ಮೂವರು ಹಿರಿಯ ಪೈಲಟ್‌ಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ನೀಡಿದ್ದಾರೆ. ತಮ್ಮ ಮೌಲ್ಯಮಾಪನ ನಡೆಸಿದ ಮೂವರು ಹಿರಿಯ ತರಬೇತುದಾರ ಪೈಲಟ್‌ಗಳು ತಮ್ಮ ಜಾತಿಯ (ಎಸ್ಸಿ) ಹಿನ್ನೆಲೆಯನ್ನು ಗುರಿಯಾಗಿಸಿಕೊಂಡು ಶೋಷಣೆ ಮಾಡಿದ್ದಾರೆ, ಜಾತಿ ನಿಂದನೆ ಮಾಡಿದ್ದಾರೆ ಮತ್ತು ತಮಗೆ ಮಾನಸಿಕ ಯಾತನೆ ನೀಡಿದ್ದಾರೆ ಎಂದು ದೂರುದಾರ ತರಬೇತಿ ಪೈಲಟ್ ಆರೋಪಿಸಿದ್ದಾರೆ.
ತಾವು ಅರ್ಹತೆ ಹೊಂದಿದ್ದರೂ ಸಹ ಹಿರಿಯ ಪೈಲಟ್‌ಗಳು ಉದ್ದೇಶಪೂರ್ವಕವಾಗಿಯೇ ತಮ್ಮ ಫ್ಲೈಯಿಂಗ್ ಕ್ಲಿಯರೆನ್ಸ್ ಮತ್ತು ಅನುಮೋದನೆಯನ್ನು ತಡೆಹಿಡಿದಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಾತಿ ನಿಂದನೆ ಆರೋಪ:
ತರಬೇತಿ ಅವಧಿಯಲ್ಲಿ ತಮಗೆ ಮಾನಸಿಕ ಕಿರುಕುಳ ನೀಡಲಾಗಿದೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಫೇಲ್ ಮಾಡಿ, ವಿಮಾನ ಹಾರಾಟದ ಕ್ಲಿಯರೆನ್ಸ್ ನಿರಾಕರಿಸಲಾಗಿದೆ ಎಂದು ತರಬೇತಿ ಪೈಲಟ್ ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳು ತಮ್ಮ ಜಾತಿಯನ್ನು ಗುರಿಯಾಗಿಸಿಕೊಂಡು ಶೋಷಣೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ-ಚೆನ್ನೈ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ರನ್‌ವೇ 25ರಲ್ಲಿ ತುರ್ತು ಭೂಸ್ಪರ್ಶ
ವಿಮಾನಯಾನ ಸಂಸ್ಥೆಯ ಸ್ಪಷ್ಟನೆ:
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆಯು, ವಿಮಾನಯಾನದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವೃತ್ತಿಪರ ಮಾನದಂಡಗಳಿಗೆ ಅತ್ಯುನ್ನತ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದೆ. ತರಬೇತಿ ಪೈಲಟ್‌ಗಳ ಮೌಲ್ಯಮಾಪನವನ್ನು ಡಿಸಿಜಿಎ ಮಾನದಂಡಗಳು ಮತ್ತು ಸುರಕ್ಷತಾ ನಿಯಮಗಳ ಪ್ರಕಾರವೇ ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಅಂತರಿಕ ತನಿಖೆಗೆ ಸೂಚನೆ:
ತರಬೇತಿ ಪೈಲಟ್ ನೀಡಿದ ದೂರಿನ ಆಧಾರದ ಮೇಲೆ ಸಂಸ್ಥೆಯು ಆಂತರಿಕ ತನಿಖಾ ಸಮಿತಿಯನ್ನು ರಚಿಸಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮಾರ್ಗದರ್ಶಿ ಸೂತ್ರಗಳಡಿ ತನಿಖೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ