ಕೋಲ್ಕತ್ತಾ-ಚೆನ್ನೈ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ರನ್‌ವೇ 25ರಲ್ಲಿ ತುರ್ತು ಭೂಸ್ಪರ್ಶ
ಕೋಲ್ಕತ್ತಾದಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದ ಎಡ ಎಂಜಿನ್ ವಿಫಲಗೊಂಡು ಚೆನ್ನೈ ವಿಮಾನ ನಿಲ್ದಾಣದಲ್ಲಿ 'ಫುಲ್ ಎಮರ್ಜೆನ್ಸಿ' ಘೋಷಿಸಲಾಯಿತು. ಪೈಲಟ್ ಸಮಯಪ್ರಜ್ಞೆಯಿಂದ 224 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ದೊಡ್ಡ ಅನಾಹುತವೊಂದು ತಪ್ಪಿ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ಅಪಾಯವಿಲ್ಲದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಚೆನ್ನೈ, ಆ.12: ಕೋಲ್ಕತ್ತಾದಿಂದ ಚೆನ್ನೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನವೊಂದರ ಎಡಭಾಗದ ಎಂಜಿನ್ ದಿಢೀರ್ ವಿಫಲಗೊಂಡ ಕಾರಣ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಆತಂಕ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ತಕ್ಷಣವೇ ‘ಫುಲ್ ಎಮರ್ಜೆನ್ಸಿ’ (Full Emergency) ಘೋಷಿಸಿದ್ದು, ಪೈಲಟ್ ಸಮಯಪ್ರಜ್ಞೆಯಿಂದ 224 ಪ್ರಯಾಣಿಕರಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಕೋಲ್ಕತ್ತಾದಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ 6E-723 ವಿಮಾನದಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ನಿಯಮಿತ ವೇಳಾಪಟ್ಟಿಯಂತೆ ರಾತ್ರಿ 11:30ಕ್ಕೆ ತಲುಪಬೇಕಿದ್ದ ವಿಮಾನ, ಲ್ಯಾಂಡಿಂಗ್‌ಗೆ ಸಿದ್ಧವಾಗುತ್ತಿದ್ದಾಗ ಎಡಭಾಗದ ಎಂಜಿನ್ ಸಕ್ರಿಯವಾಗಿಲ್ಲದಿರುವುದು ಪೈಲಟ್ ಗಮನಕ್ಕೆ ಬಂದಿದೆ.
ಪೈಲಟ್ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ಎಚ್ಚರಿಕೆ ನೀಡಿದ್ದು, ವಿಮಾನ ನಿಲ್ದಾಣದ ಪ್ರಾಧಿಕಾರವು ರಾತ್ರಿ 11:29 ಕ್ಕೆ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಜಾರಿಗೆ ತಂದಿತು. ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್ ಹಾಗೂ ವೈದ್ಯಕೀಯ ತಂಡಗಳನ್ನು ರನ್‌ವೇ ಬದಿಯಲ್ಲಿ ತಕ್ಷಣವೇ ನಿಯೋಜಿಸಿ, ಸುರಕ್ಷಿತ ಲ್ಯಾಂಡಿಂಗ್‌ಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು.
ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ: ಯುವಜನತೆಗೆ ಪ್ರೇರಣೆ ಎಂದ ಪ್ರಧಾನಿ ಮೋದಿ
ಪವಾಡಸದೃಶ ಸುರಕ್ಷಿತ ಭೂಸ್ಪರ್ಶ:
ರಾತ್ರಿ 11:37 ರ ಸುಮಾರಿಗೆ ಪೈಲಟ್ ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದ ರನ್‌ವೇ 25 ರಲ್ಲಿ ಅತ್ಯಂತ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನದಲ್ಲಿದ್ದ ಎಲ್ಲಾ 224 ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಾಯ ತಪಾಸಣೆಯ ನಂತರ ರಾತ್ರಿ 11:47 ಕ್ಕೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂಪಡೆಯಲಾಗಿದ್ದು, ವಿಮಾನ ನಿಲ್ದಾಣದ ಎಲ್ಲಾ ವಿಮಾನ ಸಂಚಾರ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಕಳೆದ ತಿಂಗಳಷ್ಟೇ ದುಬೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ಅಂತಾರಾಷ್ಟ್ರೀಯ ವಿಮಾನದ ಸರಕು ಸಂಗ್ರಹಣೆ ಕೊಠಡಿಯಲ್ಲಿ (Cargo Hold) ಹೊಗೆ ಕಾಣಿಸಿಕೊಂಡ ಮುನ್ನೆಚ್ಚರಿಕೆ ಸಂದೇಶ ಬಬಂದಿತ್ತು. ಈ ವೇಳೆ ಪೈಲಟ್‌ಗಳು ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Wed, 12 August 26




