ನವದೆಹಲಿ: ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಒಳಜಗಳ ಗುರುವಾರ ನಾಟಕೀಯ ತಿರುವು ಪಡೆದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಕ್ಷದ ಹಿರಿಯ ನಾಯಕ ನವಜೋತ್ ಸಿಂಗ್ ಸಿಧು ತಮ್ಮ ಬಣಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ ನಂತರ ಮಾಜಿ ಕ್ರಿಕೆಟ್ ಆಟಗಾರ ಇಂದು ದೆಹಲಿಗೆ ದೌಡಾಯಿಸಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಸಿಂಗ್ ಮತ್ತು ಸಿಧು ನಡುವೆ ಗಾಂಧಿಗಳು ಹೆಣೆದಿದ್ದ ರಾಜಿಸೂತ್ರ ನಿಷ್ಫಲಗೊಂಡಿರುವುದು ಇದರಿಂದ ವೇದ್ಯವಾಗುತ್ತದೆ. ನಂಬಲರ್ಹ ಮೂಲದ ಪ್ರಕಾರ ಅಮರಿಂದರ್ ಸಿಂಗ್ ಅವರಿಗೆ ಸಿಧು ಅವರನ್ನು ಸುನಿಲ್ ಜಾಖರ್ ಸ್ಥಾನದಲ್ಲಿ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕ ಮಾಡುವುದು ಇಷ್ಟವಿಲ್ಲ.
ಗಾಂಧಿಗಳು ಮತ್ತು ಸಿಂಗ್ ನಡುವೆ ನಡೆದ ಸಭೆಯಲ್ಲಿ ಹಾಜರಿದ್ದ ಪಂಜಾಬ ಕಾಂಗ್ರೆಸ್ ಉಸ್ತುವಾರಿ ಹರೀಷ್ ರಾವತ್ ಅವರು ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗುವುದೆಂದು ತಾನು ಯಾವತ್ತೂ ಹೇಳಿಲ್ಲ ಎಂದು ವಾದಸಿದರು. ‘ಸೋನಿಯಾ ಅವರು ನಿರ್ಧಾರ ತೆಗೆದುಕೊಂಡ ನಂತರ ಅದನ್ನು ನಿಮಗೆ ತಿಳಿಸಲಾಗುವುದು,’ ಎಂದು ಅವರು ಶುಕ್ರವಾರ ಮಾಧ್ಯಮದವರಿಗೆ ಹೇಳಿದರು. ಅವರು ಗುರುವಾರದಂದು ಸಿಧು ಅವರನ್ನು ಪಿಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗುವುದು ಮತ್ತು ಪಂಜಾಬ ಮಂತ್ರಿಮಂಡಲವನ್ನು ಪುನಾರಚಿಸಲಾಗುವುದು ಅಂತ ಹೇಳಿಕೆ ಅವರು ನೀಡಿದ ನಂತರವೇ ತಿಕ್ಕಾಟ ಮತ್ತೇ ತೀವ್ರಗೊಂಡಿತ್ತು.
‘ನನ್ನ ಅಭಿಪ್ರಾಯವನ್ನು ಸೋನಿಯಾ ಅವರಿಗೆ ತಿಳಿಸಿದ್ದೇನೆ. ಅದಷ್ಟು ಬೇಗ ಅವರೊಂದು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ,’ ಎಂದು ರಾವತ್ ಹೇಳಿದರು. ಸಿಂಗ್ ಅವರು, ಸಿಧು ಪಿಸಿಸಿಸಿ ಅಧ್ಯಕ್ಷರಾಗುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ರಾವತ್, ‘ಸಂವಹನದ ಕೊರತೆ ಏನಾದರೂ ತಲೆದೋರಿದರೆ ಅದನ್ನು ನೋಡಿಕೊಳ್ಳಲು ನಾನಿದ್ದೇನೆ,’ ಎಂದು ಹೇಳಿದರು.
ಹೈಕಮಾಂಡ್ ರಾಜಿಸೂತ್ರದ ಪ್ರಕಾರ, ಸಿಧು ಅವರು ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಮತ್ತು ಅವರ ಜೊತೆ ಇಬ್ಬರು ಕಾರ್ಯಾಧ್ಯಕ್ಷರನ್ನು-ಒಬ್ಬರು ದಲಿತ ಸಮುದಾಯದವರು ಮತ್ತೊಬ್ಬರು ಹಿಂದೂ, ನೇಮಕ ಮಾಡಲಾಗುತ್ತದೆ.
ಈ ರಾಜಿಸೂತ್ರ ಬಹಿರಂಗಗೊಳ್ಳುತ್ತಿದ್ದಂತೆ ಪಂಜಾಬ ಕಾಂಗ್ರೆಸ್ನಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ಸಾಯಂಕಾಲ 9 ಗಂಟೆಯಾಗುವಷ್ಟರಲ್ಲಿ ಸಿಂಗ್ ಮತ್ತು ಸಿಧು ತಮ್ಮ ತಮ್ಮ ಬಣಗಳೊಂದಿಗೆ ಸಭೆಗಳನ್ನು ನಡೆಸಿದರು.
ಸಿಧು, ತಮ್ಮ ಬಣದಲ್ಲಿರುವ 6 ಶಾಸಕರೊಂದಿಗೆ ಸಬೆ ನಡೆಸಿದರು. ಅವರಲ್ಲಿ ಸಿಂಗ್ ಸಂಪುಟದಲ್ಲಿ ಸಚಿವರಾಗಿರುವ ಮೂವರು-ಸುಖ್ಜಿಂದರ್ ಸಿಂಗ್ ರಾಂಧವ, ಚರಣ್ಜಿತ್ ಸಿಂಗ್ ಚನ್ನಿ ಮತ್ತಿ ತೃಪ್ತ್ ರಾಜಿಂದರ್ ಬಜ್ವಾ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿ ಬಂಡೆದ್ದಿದ್ದಾರೆ. ಮೂಲಗಳ ಪ್ರಕಾರ ಈ ಮೂವರಿಗೆ ಸಂಪುಟದಿಂದ ವಜಾ ಆಗುವ ಭೀತಿಯಿದೆ.
ಮತ್ತೊಂದಡೆ ಮುಖ್ಯಮಂತ್ರಿ ಸಿಂಗ್, ತಮಗೆ ನಿಷ್ಠರಾಗಿರುವ ಶಾಸಕ ಮತ್ತು ಸಂಸದರನ್ನು ಮೊಹಾಲಿಯಲ್ಲಿರುವ ತಮ್ಮ ಫಾರ್ಮ್ಹೌಸ್ಗೆ ಕರೆದೊಯ್ದರು.
ಸಿಂಗ್, ಕಳೆದ ವಾರ ಸೋನಿಯಾ ಗಾಂಧಿಯವರನ್ನು ಭೇಟಿಯಾದ ನಂತರ, ‘ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ತಾವು ಬದ್ಧರಾಗಿರುವುದಾಗಿ,’ ಹೇಳಿದ್ದರು.
ಸಿಂಗ್ ಮತ್ತು ಸಿಧು ಅವರ ನಡುವೆ 2017 ರಿಂದ ನಡೆಯುತ್ತಿರುವ ಕಾದಾಟವು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುವ ಅಂಶದ ಮೇಲೆ ಗಾಢ ಪರಿಣಾಮ ಬೀರಿದೆ.
ಇದನ್ನೂ ಓದಿ: ಕೊನೆಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಪಂಜಾಬ್ ಸಿಎಮ್ ಅಮರಿಂದರ್ ಸಿಂಗ್