ಮುಂದುವರಿದ ಮಿಷನ್​ ಸಾಗರ್​; ಜಕಾರ್ತ ಬಂದರು ತಲುಪಿದ ಐಎನ್​ಎಸ್​ ಐರಾವತ್​​

| Updated By: Lakshmi Hegde

Updated on: Aug 24, 2021 | 3:32 PM

ಜಕಾರ್ತದ ತಂಜುಂಗ್ ಪ್ರಿಯಕ್ ಬಂದರಿನಲ್ಲಿ ನಿಂತಿರುವ ಐಎನ್​ಎಸ್​ ಐರಾವತ್​ ಹಡಗಿನ ಫೋಟೋವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಶೇರ್ ಮಾಡಿಕೊಂಡಿದ್ದಾರೆ

ಮುಂದುವರಿದ ಮಿಷನ್​ ಸಾಗರ್​; ಜಕಾರ್ತ ಬಂದರು ತಲುಪಿದ ಐಎನ್​ಎಸ್​ ಐರಾವತ್​​
ಜಕಾರ್ತ ತಲುಪಿದ ಐಎನ್​ಎಸ್​ ಐರಾವತ್​
Follow us on

ದೆಹಲಿ: ಇಡೀ ಜಗತ್ತು ಕೊರೊನಾ ಸೋಂಕಿ (Covid 19)ನಿಂದ ಸಂಕಷ್ಟಕ್ಕೀಡಾಗಿದೆ. ಭಾರತವೂ ಸಹ ವೈರಸ್​ ಭೀಕರತೆಯನ್ನು ಕಂಡಿದೆ. ಆದರೆ ನಮ್ಮ ದೇಶ ಈ ಹೋರಾಟದಲ್ಲಿ ಬೇರೆ ದೇಶಗಳಿಗೂ ತನ್ನ ಕೈಲಾದ ಸಹಾಯ ಮಾಡಿದೆ. ಪ್ರಾರಂಭದಲ್ಲಿ ಕೊರೊನಾ ಮಾತ್ರೆಗಳಿಂದ ಹಿಡಿದು, ಕೊವಿಡ್​ 19 ಲಸಿಕೆಗಳು, ದ್ರವೀಕೃತ ವೈದ್ಯಕೀಯ ಆಕ್ಸಿಜನ್ (Liquid Medical Oxygen)​ನ್ನು ಬೇರೆ ಅಗತ್ಯ ಇರುವ ದೇಶಗಳಿಗೆ ಕಳಿಸಿದೆ. ಹಾಗೇ, ಈಗ ಮತ್ತೆ ಇಂಡೋನೇಷ್ಯಾ (Indonesia) ದೇಶಕ್ಕೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (Liquid Medical Oxygen)ದ 10 ಕಂಟೇನರ್​​ಗಳನ್ನು ಕಳಿಸಿಕೊಟ್ಟಿದೆ. ಈ ಕಂಟೇನರ್​ಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಲ್ಯಾಂಡಿಂಗ್​ ಶಿಪ್​ ಐಎನ್​ಎಸ್ ಐರಾವತ್​ ಇಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಕ್ಕೆ ತಲುಪಿದೆ.

ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಜಕಾರ್ತದ ತಂಜುಂಗ್ ಪ್ರಿಯಕ್ ಬಂದರಿನಲ್ಲಿ ನಿಂತಿರುವ ಐಎನ್​ಎಸ್​ ಐರಾವತ್​ ಹಡಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಮತ್ತು ಭಾರತೀಯ ನೌಕಾಪಡೆಯನ್ನು ಶ್ಲಾಘಿಸಿದ್ದಾರೆ.

ಭಾರತದ ನೌಕಾಪಡೆಯಲ್ಲಿರುವ ಈ ಐರಾವತ್​ ಹಡಗುಗಳು ಉಭಯಚರ ಯುದ್ಧ ನೌಕೆಗಳಾಗಿವೆ. ಹಾಗೇ, ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಮಾನವರಿಗೆ ನೆರವು ನೀಡುವ ಕಾರ್ಯಾಚರಣೆ  ಎರಡಕ್ಕೂ ಬಳಕೆಯಾಗುತ್ತದೆ. ಅದರಲ್ಲೂ ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಈ ಐರಾವತ್​ ಬಳಕೆಯಾಗಿದೆ. ಈ ಹಿಂದೆ ಕೂಡ ಐಎನ್​ಎಸ್​ ಐರಾವತ್​ ಮೂಲಕವೇ ಇಂಡೋನೇಷ್ಯಾಕ್ಕೆ ವೈದ್ಯಕೀಯ ನೆರವು ನೀಡಲಾಗಿದೆ. ಆಗ 5 ದ್ರವೀಕೃತ ವೈದ್ಯಕೀಯ ಆಕ್ಸಿಜನ್​ ಕಂಟೇನರ್​ಗಳು ಮತ್ತು 300 ಆಕ್ಸಿಜನ್ ಸಾಂದ್ರಕಗಳನ್ನು ಸಾಗಿಸಲಾಗಿತ್ತು.

ಭಾರತ ಮತ್ತು ಇಂಡೋನೇಷ್ಯಾ ನಡುವೆ ಉತ್ತಮ ಬಾಂಧವ್ಯ ಇದ್ದು, ಕೊವಿಡ್​ 19 ಕಾಲದಲ್ಲಿ ಆ ದೇಶಕ್ಕೆ ಭಾರತ ಸಹಾಯಕ್ಕೆ ನಿಂತಿದೆ. ಈಗ ಮಿಷನ್ ಸಾಗರ್​ ಯೋಜನೆಯಡಿ ಮತ್ತೆ ನೆರವು ನೀಡಲಾಗಿದೆ. ಹಿಂದೂ ಮಹಾ ಸಾಗರದ ಸುತ್ತಲಿನ ದೇಶಗಳ ಭದ್ರತೆ ಮತ್ತು ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರು ರೂಪಿಸಿದ SAGARನ ಭಾಗವಾಗಿ ಈ ಮಿಷನ್​ ಸಾಗರ್​ ರೂಪುಗೊಂಡಿದೆ.

 ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ; ವಿವಿಧ ಕ್ಯಾಂಪ್​ಗಳಿಂದ 14 ಆನೆ ಪಟ್ಟಿ ಮಾಡಿದ ಅರಣ್ಯಾಧಿಕಾರಿಗಳು

Abhishek Bachchan: ಚಿತ್ರೀಕರಣದ ವೇಳೆ ಖ್ಯಾತ ನಟ ಅಭಿಷೇಕ್ ಬಚ್ಚನ್​ಗೆ ಗಾಯ, ಆಸ್ಪತ್ರೆಗೆ ದಾಖಲು

(INS Airavat reached Indonesia with 10 liquid medical oxygen containers)