ಇಸ್ರೋ ನೇಮಕಾತಿ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 400 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಇಸ್ರೋದಿಂದ ಸಿಹಿ ಸುದ್ದಿ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 400 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. ITI, ಡಿಪ್ಲೊಮಾ, ಬಿ.ಇ/ಬಿ.ಟೆಕ್, ಬಿ.ಎಸ್ಸಿ ಪದವೀಧರರು ಆನ್‌ಲೈನ್ ಮೂಲಕ ನವೆಂಬರ್ 26ರೊಳಗೆ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಇಲ್ಲ, ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ತರಬೇತಿ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ ದೊರೆಯಲಿದೆ.

ಪ್ರತಿಷ್ಠಿತ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಿಹಿಸುದ್ದಿ ನೀಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC SHAR) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 400 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಅಪ್ರೆಂಟಿಸ್‌ಶಿಪ್ ಕಾಯ್ದೆ, 1961 (1973 ರ ತಿದ್ದುಪಡಿ) ಅಡಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 26 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ:
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಒಟ್ಟು 400 ಅಪ್ರೆಂಟಿಸ್ ಹುದ್ದೆಗಳನ್ನು ವಿವಿಧ ವಿಭಾಗಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಟ್ರೇಡ್ ಅಪ್ರೆಂಟಿಸ್ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 180 ಹುದ್ದೆಗಳಿವೆ. ಉಳಿದಂತೆ ಎಂಜಿನಿಯರಿಂಗ್ ಅಲ್ಲದ ಪದವೀಧರ ಅಪ್ರೆಂಟಿಸ್ 60 ಹುದ್ದೆಗಳು, ಡಿಪ್ಲೊಮಾ (DCCP) 60 ಹುದ್ದೆಗಳು, ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ 50 ಹುದ್ದೆಗಳು, ಟೆಕ್ನಿಷಿಯನ್ ಅಪ್ರೆಂಟಿಸ್ (ಡಿಪ್ಲೊಮಾ) 35 ಹುದ್ದೆಗಳು ಹಾಗೂ ವೃತ್ತಿಪರ ಅಪ್ರೆಂಟಿಸ್‌ನ 15 ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ ಮತ್ತು ವಿಭಾಗಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗಗಳಲ್ಲಿ ಐಟಿಐ, ಡಿಪ್ಲೊಮಾ, ಬಿ.ಎಸ್ಸಿ, ಬಿ.ಕಾಂ, ಬಿ.ಎ, ಬಿ.ಇ ಅಥವಾ ಬಿ.ಟೆಕ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಶೈಕ್ಷಣಿಕ ಅರ್ಹತೆಗಳು ಆಯಾ ಹುದ್ದೆಗಳಿಗೆ ತಕ್ಕಂತೆ ಬದಲಾಗಲಿದ್ದು, ಸಂಬಂಧಿತ ಇಲಾಖೆ ನಿಗದಿಪಡಿಸಿದ ಅರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಮೆಕ್ಯಾನಿಕಲ್, ಏರೋಸ್ಪೇಸ್, ಪ್ರೊಡಕ್ಷನ್, ಇಂಡಸ್ಟ್ರಿಯಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಕನ್ಸ್ಟ್ರಕ್ಷನ್ ಎಂಜಿನಿಯರಿಂಗ್ ತಂತ್ರಜ್ಞಾನ, ಮಲ್ಟಿಪರ್ಪಸ್ ಹೆಲ್ತ್ ವರ್ಕರ್ ಹಾಗೂ ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಈ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವರ್ಗವಾರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಸಂಬಂಧಿತ ವಿಭಾಗ ಅಥವಾ ಟ್ರೇಡ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ತದನಂತರ, ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಮೂಲ ಪ್ರಮಾಣಪತ್ರಗಳ ಪರಿಶೀಲನೆಗೆ (Document Verification) ಕರೆಯಲಾಗುವುದು. ದಾಖಲೆ ಪರಿಶೀಲನೆಯಲ್ಲಿ ಅರ್ಹತೆ ಪಡೆದವರನ್ನು ಅಂತಿಮವಾಗಿ ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.
ತರಬೇತಿ ಅವಧಿ ಮತ್ತು ಮಾಸಿಕ ಸ್ಟೈಫಂಡ್ ವಿವರ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಟ್ಟು 12 ತಿಂಗಳುಗಳ (1 ವರ್ಷ) ಕಾಲ ಇಸ್ರೋ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ನಿಗದಿತ ಸ್ಟೈಫಂಡ್ ಪಾವತಿಸಲಾಗುತ್ತದೆ. ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ ಮಾಸಿಕ 12,300 ರೂಪಾಯಿ, ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ 10,900 ರೂಪಾಯಿ ಹಾಗೂ ಟ್ರೇಡ್ ಮತ್ತು ವೊಕೇಶನಲ್ ಅಪ್ರೆಂಟಿಸ್‌ಗಳಿಗೆ 9,600 ರೂಪಾಯಿ ಸ್ಟೈಫಂಡ್ ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:
ಇಸ್ರೋದಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳು ನವೆಂಬರ್ 26 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಗತ್ಯ ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಸೂಚಿಸಲಾಗಿದೆ. ಹುದ್ದೆವಾರು ಸಂಪೂರ್ಣ ಅರ್ಹತೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರ ನಿಯಮಗಳ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (SDSC SHAR) ಅಧಿಕೃತ ವೆಬ್‌ಸೈಟ್‌ನಲ್ಲಿರುವ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




