ದೀಪಾವಳಿ ಹಬ್ಬದ ಮಧ್ಯೆಯೂ ಪ್ರಧಾನಿ ಬ್ಯುಸಿ: ಇಲ್ಲಿದೆ ಅ. 19ರಿಂದ ಅ.23ರ ವರೆಗಿನ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 19, 2022 | 12:03 AM

ಅಕ್ಟೋಬರ್ 19ರಿಂದ ಅ.23ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ ನೋಡಿ..

ದೀಪಾವಳಿ ಹಬ್ಬದ ಮಧ್ಯೆಯೂ ಪ್ರಧಾನಿ ಬ್ಯುಸಿ: ಇಲ್ಲಿದೆ ಅ. 19ರಿಂದ ಅ.23ರ ವರೆಗಿನ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ
ನರೇಂದ್ರ ಮೋದಿ
Follow us on

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಗೆ (deepavali festival) ಕ್ಷಣಗಣನೆ ಆರಂಭವಾಗಿದೆ. ಇನ್ನು ಕೇವಲ ದಿನಗಳು ಇರುವಾಗಲೇ ಭಾರತದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಡುವಿಲ್ಲದೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಕ್ಟೋಬರ್ 19ರಿಂದ ಅ.23ರ ವರೆಗೆ ಮೋದಿ ಅವರ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ ನೋಡಿ..

ಪ್ರಧಾನಿ ಮೋದಿ ಅವರು ಅಕ್ಟೋಬರ್ 19, 20 ರಂದು ಎರಡು ದಿನಗಳ ಕಾಲ ಗುಜರಾತ್‌ ಪ್ರವಾಸ ಕೈಗೊಳ್ಳಲಿದ್ದು, ವಿಧಾನಸಭೆ ಚುನಾವಣೆ ಗದ್ದಲ ಮಧ್ಯೆ ಪ್ರಧಾನಿ ಮೋದಿ ಮತ್ತೊಮ್ಮೆ ತಮ್ಮ ತವರಿಗೆ ತೆರಳಲಿದ್ದಾರೆ. ಗಾಂಧಿನಗರ, ಜುನಾಗಢ್, ರಾಜ್‌ಕೋಟ್, ಕೆವಾಡಿಯಾ ಮತ್ತು ವ್ಯಾರಾದಲ್ಲಿ ಸಂಚರಿಸಲಿದ್ದು, ಅಲ್ಲಿ ಸುಮಾರು 15,670 ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಅಕ್ಟೋಬರ್ 19

ಬುಧವಾರ ಬೆಳಗ್ಗೆ 9:45ರ ಸುಮಾರಿಗೆ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ-22ನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ‘ಹೆಮ್ಮೆಯ ಹಾದಿ’ ಎಂಬ ವಿಷಯದ ಅಡಿಯಲ್ಲಿ ನಡೆಯುತ್ತಿರುವ ಎಕ್ಸ್‌ಪೋ, ಇಲ್ಲಿಯವರೆಗೆ ನಡೆದ ಭಾರತೀಯ ರಕ್ಷಣಾ ಪಡೆಯ ಎಕ್ಸ್‌ಪೋದಲ್ಲಿ ಅತಿ ದೊಡ್ಡ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಬಳಿಕ ಅದಾಲಾಜ್‌ನಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್‌ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ನಂತರ ಜುನಾಗಢಕ್ಕೆ ತೆರಳಲಿದ್ದಾರೆ. ರಾಜ್‌ಕೋಟ್‌ನಲ್ಲಿ ಅನೇಕ ಪ್ರಮುಖ ಯೋಜನೆಗಳ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಕ್ಟೋಬರ್ 20

ಅ.20ರಂದು ಮಿಷನ್ ಲೈಫ್‌ಗೆ ಚಾಲನೆ ನೀಡಲಿದ್ದಾರೆ. ನಂತರ ಅವರು ಕೆವಾಡಿಯಾದಲ್ಲಿ 10ನೇ ಮಿಷನ್ಸ್ ಮುಖ್ಯಸ್ಥರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅವರು ವ್ಯರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಕ್ಟೋಬರ್ 21

ಅ.21 ರಂದು ಪ್ರಧಾನಮಂತ್ರಿ ಮೋದಿ ಅವರು ಉತ್ತರಾಖಂಡ ಪ್ರವಾಸ ಕೈಗೊಳ್ಳಲಿದ್ದು, ಆಧ್ಯಾತ್ಮಿಕ ತಾಣಗಳಾದ ಕೇದಾರನಾಥ ಮತ್ತು ಬದರೀನಾಥ್​ಗೆ ಭೇಟಿ ನೀಡಲಿದ್ದು, ಸುಮಾರು 3500 ಕೋಟಿ ರೂಪಾಯಿಗಳ ಸಂಪರ್ಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಕೇದಾರನಾಥ ಮತ್ತು ಬದರೀನಾಥ್ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೇ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

ಅಕ್ಟೋಬರ್ 22

ಪ್ರಧಾನಿ ನರೇಂದ್ರ ಮೋದಿ ಅವರು ಅ, 22ರಂದು ಉತ್ತರಾಖಂಡದಿಂದ ವಾಪಸ್ ಆಗಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳ ಕಾರ್ಯಕ್ರಮಗಳಲ್ಲಿ ವೀಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಲಿದ್ದಾರೆ.

ಅಕ್ಟೋಬರ್ 23

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಅಕ್ಟೋಬರ್ 23) ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಿದ್ದಾರೆ.  ಅದೇ ದಿನ ಸಂಜೆ ಅವರು ಸರಯು ನದಿ ತಟದಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೀಪೋತ್ಸವ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ.

Published On - 10:59 pm, Tue, 18 October 22