Jammu and Kashmir: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರಿಗಾಗಿ ಶ್ವಾನದಳ, ಡ್ರೋನ್ ಮೂಲಕ ಶೋಧ, 12 ಮಂದಿ ವಶಕ್ಕೆ

|

Updated on: Apr 22, 2023 | 10:44 AM

ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್‌ನ ಪೂಂಛ್​ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶ್ವಾನ ದಳ ಮತ್ತು ಡ್ರೋನ್​ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Jammu and Kashmir: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರಿಗಾಗಿ ಶ್ವಾನದಳ, ಡ್ರೋನ್ ಮೂಲಕ ಶೋಧ, 12 ಮಂದಿ ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ಪೂಂಛ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ ಸೆಕ್ಟರ್‌ನ ಪೂಂಛ್​ನಲ್ಲಿ (Poonch) ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶ್ವಾನ ದಳ ಮತ್ತು ಡ್ರೋನ್​ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ಸಂಬಂಧ ಈವರೆಗೆ ಕನಿಷ್ಠ 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ನಡೆಸಿದ ಉಗ್ರರ ತಂಡ ಯಾವುದೆಂದು ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ವಶಕ್ಕೆ ಪಡೆಯಲಾಗಿರುವ ವ್ಯಕ್ತಿಗಳನ್ನು ಭದ್ರತಾ ಪಡೆಗಳು ವಿವಿಧ ಹಂತಗಳಲ್ಲಿ ವಿಚಾರಣೆಗೆ ಒಳಪಡಿಸುತ್ತಿವೆ. ಉಗ್ರರ ತಂಡವು ಆ ಪ್ರದೇಶದಲ್ಲಿ ವರ್ಷದಿಂದಲೂ ಹೆಚ್ಚು ಸಮಯದಿಂದ ರಹಸ್ಯವಾಗಿ ಇದ್ದಿರುವ ಸಾಧ್ಯತೆ ಇದೆ ಮತ್ತು ಸ್ನೈಪರ್​​​ಗಳನ್ನೂ ಹೊಂದಿದ್ದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆದ ಮರುದಿನವೇ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಘಟನಾ ಸ್ಥಳಕ್ಕೂ ಭೇಟಿ ನೀಡಿದ್ದಾರೆ.

ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದ ತಂಡವೂ ಸ್ಥಳದಲ್ಲಿ ಹಾಜರಿದ್ದಾರೆ. ಪ್ರಕರಣದ ತನಿಖೆಯನ್ನು ಎನ್​ಐಎ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ: 5 ಯೋಧರು ಹುತಾತ್ಮ, ಒಬ್ಬರಿಗೆ ಗಂಭೀರ ಗಾಯ

ಸುಮಾರು ಐವರು ಭಯೋತ್ಪಾದಕರು ದಾಳಿ ವೇಳೆ ಸ್ಥಳದಲ್ಲಿ ಇದ್ದಿರಬಹುದು ಮತ್ತು ಸೇನಾ ಟ್ರಕ್ ಮೇಲೆ ಮೂರು ಕಡೆಗಳಿಂದ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದಿದೆ. ಹೊಂಚುಹಾಕಿ ದಾಳಿ ನಡೆಸಿದ ನಂತರ, ಭಯೋತ್ಪಾದಕರು ಗ್ರೆನೇಡ್‌ಗಳು ಮತ್ತು ವಾಹನವನ್ನು ಸುಟ್ಟು ಹಾಕುವ ಜಿಗುಟಾದ ಬಾಂಬ್‌ಗಳನ್ನು ಬಳಸಿರಬಹುದು ಎಂಬುದೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೂಂಚ್‌ನಲ್ಲಿ ಗುರುವಾರ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಮತ್ತೊಬ್ಬರು ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ