ಕುದುರೆ ವ್ಯಾಪಾರದ ಆರೋಪ; ಒಮರ್ ಅಬ್ದುಲ್ಲಾ ಸಾಕ್ಷಿ ನೀಡಲಿ ಅಥವಾ ಕ್ಷಮೆ ಯಾಚಿಸಲಿ ಎಂದ ಬಿಜೆಪಿ

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬಿಜೆಪಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆಪರೇಷನ್ ಕಮಲದ ಆರೋಪಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಸತ್ ಶರ್ಮಾ ಅವರು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಆರೋಪಗಳನ್ನು ಬೆಂಬಲಿಸಲು ಪುರಾವೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಕುದುರೆ ವ್ಯಾಪಾರದ ಆರೋಪ; ಒಮರ್ ಅಬ್ದುಲ್ಲಾ ಸಾಕ್ಷಿ ನೀಡಲಿ ಅಥವಾ ಕ್ಷಮೆ ಯಾಚಿಸಲಿ ಎಂದ ಬಿಜೆಪಿ
Sat Sharma
Image Credit source: x

Updated on: Jul 11, 2026 | 11:12 PM

ಶ್ರೀನಗರ, ಜುಲೈ 11: ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (NC) ಶಾಸಕರಿಗೆ ಪಕ್ಷಾಂತರ ಮಾಡಲು ಬಿಜೆಪಿ 20 ರಿಂದ 30 ಕೋಟಿ ರೂ. ಹಣ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡಿದೆ ಎಂಬ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಒಮರ್ ಅಬ್ದುಲ್ಲಾ ತಮ್ಮ ಆರೋಪಕ್ಕೆ ತಕ್ಕ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಆರೋಪ ಸಾಬೀತುಪಡಿಸಿ ಅಥವಾ ಕ್ಷಮೆ ಕೇಳಿ:

ಜಮ್ಮು ಕಾಶ್ಮೀರದ ಮುಖ್ಯಮಂತ್ರಿಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಜಮ್ಮು-ಕಾಶ್ಮೀರ ಘಟಕದ ಅಧ್ಯಕ್ಷ ರವೀಂದ್ರ ರೈನಾ ಮತ್ತು ಇತರ ಹಿರಿಯ ನಾಯಕರು, ಒಮರ್ ಅವರು ರಾಜಕೀಯ ಲಾಭಕ್ಕಾಗಿ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕಟ್ಟುಕಥೆಗಳನ್ನು ಹೇಳುತ್ತಿದ್ದಾರೆ ಎಂದು ದೂರಿದ್ದಾರೆ. “ಮುಖ್ಯಮಂತ್ರಿಗಳಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ 20-30 ಕೋಟಿ ರೂ. ಆಫರ್ ನೀಡಲಾಗಿದೆ ಎಂದು ಹೇಳುವಾಗ ಅದರ ಹಿಂದೆ ಬಲವಾದ ಪುರಾವೆ ಇರಬೇಕು. ಆ ಮುಚ್ಚಿದ ಕೋಣೆಯಲ್ಲಿ ಆಫರ್ ನೀಡಿದವರು ಯಾರು? ಆ ಶಾಸಕ ಯಾರು? ಎಂಬುದನ್ನು ಒಮರ್ ಅಬ್ದುಲ್ಲಾ ಬಹಿರಂಗಪಡಿಸಬೇಕು ಮತ್ತು ಸಾಕ್ಷಿ ನೀಡಬೇಕು” ಎಂದು ಬಿಜೆಪಿ ಒತ್ತಾಯಿಸಿದೆ.

ಇದನ್ನೂ ಓದಿ: ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರಿಗೆ ಬಿಜೆಪಿಯಿಂದ 20-30 ಕೋಟಿ ರೂ. ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ಕ್ಷಮೆಯಾಚನೆಗೆ ಆಗ್ರಹ:

ಒಂದು ವೇಳೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ, ಜಮ್ಮು-ಕಾಶ್ಮೀರದ ಜನತೆಯನ್ನು ದಾರಿ ತಪ್ಪಿಸಿದ್ದಕ್ಕಾಗಿ ಮತ್ತು ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿದ್ದಕ್ಕಾಗಿ ಒಮರ್ ಅಬ್ದುಲ್ಲಾ ಅವರು ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.


ಬಹುಮತ ಇರುವಾಗ ಕುದುರೆ ವ್ಯಾಪಾರದ ಅಗತ್ಯವೇನಿದೆ?:

ಬಿಜೆಪಿ ನಾಯಕರು ತಮ್ಮ ಸಮರ್ಥನೆಯಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ತಮಗೆ ಸರ್ಕಾರ ರಚಿಸುವ ಯಾವುದೇ ಉದ್ದೇಶವಾಗಲಿ ಅಥವಾ ಆತುರವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತವಿದೆ. ಬಿಜೆಪಿ 29 ಶಾಸಕರೊಂದಿಗೆ ಬಲಿಷ್ಠ ವಿರೋಧ ಪಕ್ಷವಾಗಿ ಕೂರಲು ಸಿದ್ಧವಿದೆ. ಹೀಗಿರುವಾಗ ನಾವೇಕೆ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತೇವೆ? ಒಮರ್ ಅಬ್ದುಲ್ಲಾ ಅವರು ತಮ್ಮ ಮೈತ್ರಿಕೂಟದ ಒಳಗಿನ ಭಿನ್ನಮತ ಅಥವಾ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಬಿಜೆಪಿ ಪ್ರತ್ಯುತ್ತರ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us