ರಾಜಕಾರಣ ಸೇರಲೆಂದು ರಾಜೀನಾಮೆ ಕೊಟ್ಟಿದ್ದ ಐಎಎಸ್ ಅಧಿಕಾರಿಯನ್ನು ಮತ್ತೆ ಸೇವೆಗೆ ನಿಯೋಜಿಸಿದ ಕೇಂದ್ರ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 29, 2022 | 11:38 AM

ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ದೂರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ರಾಜಕಾರಣಿಯಾಗಲು ಮುಂದಾಗಿದ್ದ ಜಮ್ಮು ಮತ್ತು ಕಾಶ್ಮೀರ ಕೇಡರ್​ನ ಐಎಎಸ್ ಅಧಿಕಾರಿ ಶಾ ಫೈಜಲ್ ಅವರನ್ನು ಕೇಂದ್ರ ಸರ್ಕಾರ ಮತ್ತೆ ಸೇವೆಗೆ ನಿಯೋಜಿಸಿದೆ.

ರಾಜಕಾರಣ ಸೇರಲೆಂದು ರಾಜೀನಾಮೆ ಕೊಟ್ಟಿದ್ದ ಐಎಎಸ್ ಅಧಿಕಾರಿಯನ್ನು ಮತ್ತೆ ಸೇವೆಗೆ ನಿಯೋಜಿಸಿದ ಕೇಂದ್ರ ಸರ್ಕಾರ
ಜಮ್ಮು ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಜಲ್
Follow us on

ದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ದೂರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ರಾಜಕಾರಣಿಯಾಗಲು ಮುಂದಾಗಿದ್ದ ಜಮ್ಮು ಮತ್ತು ಕಾಶ್ಮೀರ ಕೇಡರ್​ನ ಐಎಎಸ್ ಅಧಿಕಾರಿ ಶಾ ಫೈಜಲ್ ಅವರಿಗೆ ಕೇಂದ್ರ ಸರ್ಕಾರ ಮತ್ತೆ ಸೇವೆಗೆ ಮರಳಲು ಅವಕಾಶ ನೀಡಿದೆ. ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಜಮ್ಮು ಮತ್ತು ಕಾಶ್ಮೀರದ ಮೊದಲ ಯುವಕ ಎಂಬ ಕೀರ್ತಿಗೆ ಭಾಜನರಾಗಿದ್ದ ಫೈಜಲ್ 2018ರಲ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರದ ದಿನಗಳಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿ, ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಸಂವಿಧಾನ ತಿದ್ದುಪಡಿ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ಒಂದು ದಿನ ಮೊದಲು, ಅಂದರೆ ಆಗಸ್ಟ್ 4, 2019ರಲ್ಲಿ ಫೈಜಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಇದೀಗ ಫೈಜಲ್ ಅವರಿಗೆ ಸರ್ಕಾರಿ ಸೇವೆ ಮರಳಲು ಅವಕಾಶ ನೀಡಲಾಗಿದೆ. ಜಮ್ಮು ಕಾಶ್ಮೀರ ರಾಜ್ಯಗಳ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಫೈಜಲ್ ಅವರ ಹೆಸರು 35ನೆಯದ್ದಾಗಿದೆ. ಸರ್ಕಾರದ ಸೇವೆಗೆ ಮರಳುವ ಸಾಧ್ಯತೆಯ ಕುರಿತು ಈ ಹಿಂದೆ ಫೈಜಲ್ ಅವರೇ ಸುಳಿವು ನೀಡಿದ್ದರು. ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರಲಿಲ್ಲ. ನನ್ನ ಜೀವನದಲ್ಲಿ 8 ತಿಂಗಳ ಅವಧಿ (ಜನರಿ 2019ರಿಂದ ಆಗಸ್ಟ್ 2019) ವ್ಯರ್ಥವಾಗಿ ಕಳೆಯಿತು. ನನ್ನ ಈವರೆಗಿನ ಸಾಧನೆ, ಗಳಿಸಿದ ಸ್ನೇಹಿತರು, ಪ್ರಭಾವ, ಗೌರವ ಎಲ್ಲವೂ ವ್ಯರ್ಥವಾಯಿತು. ಆದರೆ ನಾನೆಂದಿಗೂ ಭರವಸೆ ಕಳೆದುಕೊಂಡಿರಲಿಲ್ಲ. ನನ್ನ ಆದರ್ಶಗಳಿಂದಾಗಿ ತಲೆತಗ್ಗಿಸುವಂತಾಯಿತು ಎಂದು ಟ್ವೀಟ್ ಮಾಡಿದ್ದರು.

‘ಬದುಕು ನನಗೆ ಮತ್ತೊಂದು ಅವಕಾಶ ನೀಡಿದರೆ, ನಾನು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಾನು ಬದ್ಧನಾಗಿದ್ದೇನೆ. ನನ್ನೊಳಗಿನ ಒಂದು ಭಾಗವೇ ಕಳೆದ 8 ತಿಂಗಳ ನೆನಪುಗಳಿಂದ ಜರ್ಝರಿತವಾಗಿದೆ. ಆ ಕಹಿ ನೆನಪುಗಳನ್ನು ಅಳಿಸಿ ಹಾಕಬೇಕು ಎಂದುಕೊಂಡಿದ್ದೇನೆ. ಅದರಲ್ಲಿದ್ದ ಬಹುತೇಕ ವಿಚಾರಗಳು ಈಗಾಗಲೇ ಹೊರಟುಹೋಗಿವೆ’ ಎಂದು ಹೇಳಿದ್ದರು. ಬದುಕಿನ ಪ್ರತಿ ವೈಫಲ್ಯವೂ ನಮ್ಮನ್ನು ಗಟ್ಟಿಗೊಳಿಸುತ್ತದೆ. ಕಳೆದ ದಿನಗಳ ನೆರಳಿನಿಂದಾಚೆಗೂ ಒಂದು ಅದ್ಭುತ ಜಗತ್ತು ಇದೆ. ನನಗೆ ಮುಂದಿನ ತಿಂಗಳಿಗೆ 39 ವರ್ಷವಾಗುತ್ತದೆ. ನಾನು ಮತ್ತೆ ಕೆಲಸ ಶುರು ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದರು. ಫೈಜಲ್ ಅವರೊಂದಿಗೆ ಕೆಲಸ ಮಾಡಿದ್ದ ಸರ್ಕಾರಿ ಅಧಿಕಾರಿಗಳು ಮತ್ತು ಗೆಳೆಯರಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು.

2009ರ ಯುಪಿಎಸ್​ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೇ ಮೊದಲಿಗರಾಗಿದ್ದ ಫೈಜಲ್, 2019ರ ಜನವರಿಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರೋಧಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್​ಮೆಂಟ್ ಹೆಸರಿನ ತಮ್ಮ ಸ್ವಂತ ಪಕ್ಷವನ್ನು ಆರಂಭಿಸಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದರು.

ಜಮ್ಮು ಕಾಶ್ಮೀರ ಲಡಾಖ್ ವಿಭಜನೆ ಮತ್ತು ವಿಶೇಷ ಹಕ್ಕು ಹಿಂಪಡೆಯುವ ಘೋಷಣೆ ಹೊರಬೀಳುವ ಒಂದು ದಿನ ಮೊದಲು ಫೈಜಲ್ ಅವರನ್ನು ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಜೈಲಿನಿಂದ ಹೊರಬಂದ ನಂತರ ಫೈಜಲ್ ಅವರು ಸಕ್ರಿಯ ರಾಜಕಾರಣ ತೊರೆಯುವ ಹಾಗೂ ಮತ್ತೆ ಸರ್ಕಾರಿ ನೌಕರಿಗೆ ಮರಳು ಇಂಗಿತ ವ್ಯಕ್ತಪಡಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಮೋದಿ ಮತ್ತು ಶಾ ಅವರ ಭಾಷಣಗಳನ್ನೂ ಹಲವು ಬಾರಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ₹20,000 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

Published On - 11:36 am, Fri, 29 April 22