ಪ್ರಧಾನಿ ಮೋದಿಯವರ ಜಮ್ಮು- ಕಾಶ್ಮೀರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ; ಭಾರತ ತಿರುಗೇಟು
PM Narendra Modi J & K Visit | Arindam Bagchi: ಪ್ರಧಾನಿ ಮೋದಿಯವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಏಪ್ರಿಲ್ 23 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಈ ಭೇಟಿಯ ವೇಳೆ ಅವರು 20,000 ಕೋಟಿ ರೂಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಇತ್ತೀಚಿನ ಜಮ್ಮು ಮತ್ತು ಕಾಶ್ಮೀರ (Jammu and Kashmir) ಭೇಟಿಯ ವಿರುದ್ಧ ಪಾಕಿಸ್ತಾನ ನೀಡಿರುವ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಏಪ್ರಿಲ್ 23 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಈ ಭೇಟಿಯ ವೇಳೆ ಅವರು 20,000 ಕೋಟಿ ರೂಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಧಾನಿಯವರ ಈ ಭೇಟಿಯನ್ನು ವಿರೋಧಿಸಿ ಏಪ್ರಿಲ್ 24 ರಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ಬಿಡುಗಡೆ ಮಾಡಿ, 2019ರ ಆಗಸ್ಟ್ 5 ರಿಂದ ಕಾಶ್ಮೀರದ ಮೂಲ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತವು ಹಲವಾರು ಹತಾಶ ಪ್ರಯತ್ನಗಳನ್ನು ನಡೆಸುತ್ತಿದ್ದು, ಅದನ್ನು ಅಂತರರಾಷ್ಟ್ರೀಯ ಸಮುದಾಯವು ನೋಡಿದೆ ಎಂದು ಹೇಳಿತ್ತು.
ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಪ್ರಧಾನಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದೊರೆತ ಸ್ವಾಗತ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ಬದಲಾವಣೆಗಳು ಯಾವುದೇ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾಗಿದೆ ಎಂದು ಅವರು ಹೇಳಿದ್ದಾರೆ. ಜತೆಗೆ ಪಾಕಿಸ್ತಾನಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಹಕ್ಕಿಲ್ಲ ಎಂದು ಬಾಗ್ಚಿ ನುಡಿದಿದ್ದಾರೆ.
ಅರಿಂದಮ್ ಬಾಗ್ಚಿ ಹೇಳಿಕೆ ಕುರಿತು ಎಎನ್ಐ ಟ್ವೀಟ್:
Pakistan has no locus standi to comment on PM Modi’s visit to Jammu & Kashmir: Arindam Bagchi, MEA spokesperson pic.twitter.com/CHccclEraE
— ANI (@ANI) April 28, 2022
ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದ ಪ್ರಧಾನಿ; ಪಾಕಿಸ್ತಾನದ ವಿರೋಧವೇಕೆ?
ಏಪ್ರಿಲ್ 23ರ ಭೇಟಿಯಲ್ಲಿ ಪ್ರಧಾನಿ 20,000 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಬನಿಹಾಲ್ ಖಾಜಿಗುಂದ ರಸ್ತೆ ಸುರಂಗ ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದ್ದರು. ಜತೆಗೆ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದರು. ಈ ಯೋಜನೆಯಡಿಯಲ್ಲಿ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ ಸುಮಾರು 5,300 ಕೋಟಿ ರೂಪಾಯಿ ವೆಚ್ಚದಲ್ಲಿ 850 ಮೆ.ವ್ಯಾ. ರಾಟಲ್ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುತ್ತದೆ.
ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮೇಲೆ 4500 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದ 540 ಮೆ.ವ್ಯಾ. ಕ್ವಾರ್ ಜಲವಿದ್ಯುತ್ ಯೋಜನೆಯನ್ನು ಸಹ ನಿರ್ಮಿಸಲಾಗುತ್ತದೆ. ಎರಡೂ ಯೋಜನೆಗಳು ಆಯಾ ಪ್ರದೇಶದ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತವೆ. ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆಯಾದ ನಂತರ ಪಾಕಿಸ್ತಾನವು ತನ್ನ ಅಸಮಾಧಾನ ತೋರ್ಪಡಿಸಿತ್ತು. ಭಾರತ ರೂಪಿಸಿರುವ ರಾಟಲ್ ಜಲವಿದ್ಯುತ್ ಸ್ಥಾವರ ನಿರ್ಮಾಣ ವಿವಾದಿತವಾಗಿದೆ ಎಂದು ಪಾಕಿಸ್ತಾನ ಹೇಳಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಪಾಕ್ ನೂತನ ಪ್ರಧಾನಿ ಶೆಹ್ಬಾಝ್ ಷರೀಫ್ ಟೀಕೆ
Semicon India 2022: ಬೆಂಗಳೂರಿನಲ್ಲಿ ಇಂದಿನಿಂದ ‘ಸೆಮಿಕಾನ್ ಇಂಡಿಯಾ 2022’ ಸಮ್ಮೇಳನ; ಪ್ರಧಾನಿ ಮೋದಿ ಉದ್ಘಾಟನೆ
Published On - 10:06 am, Fri, 29 April 22