PM Narendra Modi: ಚೊಚ್ಚಲ ‘ಲತಾ ದೀನನಾಥ ಮಂಗೇಶ್ಕರ್ ಪ್ರಶಸ್ತಿ’ಗೆ ಭಾಜನರಾಗಲಿರುವ ಪ್ರಧಾನಿ ನರೇಂದ್ರ ಮೋದಿ
Lata Deenanath Mangeshkar Award: ಏಪ್ರಿಲ್ 24ರಂದು ಗಾಯನ ದಂತಕಥೆ ಲತಾ ಅವರ ತಂದೆ ದೀನನಾಥ್ ಮಂಗೇಶ್ಕರ್ ಅವರ 80 ನೇ ಪುಣ್ಯತಿಥಿ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ‘ಲತಾ ದೀನನಾಥ್ ಮಂಗೇಶ್ಕರ್ ಪುರಸ್ಕಾರ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತದೆ. ಈ ಬಗ್ಗೆಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಚೊಚ್ಚಲ ‘ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ (Lata Deenanath Mangeshkar Award) ನೀಡಿ ಗೌರವಿಸಲಾಗುವುದು ಎಂದು ಮಂಗೇಶ್ಕರ್ ಕುಟುಂಬ ಸೋಮವಾರ ಪ್ರಕಟಿಸಿದೆ. ಏಪ್ರಿಲ್ 24ರಂದು ಗಾಯನ ದಂತಕಥೆ ಲತಾ ಅವರ ತಂದೆ ದೀನನಾಥ್ ಮಂಗೇಶ್ಕರ್ ಅವರ 80 ನೇ ಪುಣ್ಯತಿಥಿ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ‘ಲತಾ ದೀನನಾಥ್ ಮಂಗೇಶ್ಕರ್ ಪುರಸ್ಕಾರ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತದೆ. ಲತಾ ಮಂಗೇಶ್ಕರ್ ಅವರ ಗೌರವ ಮತ್ತು ಸ್ಮರಣಾರ್ಥ ಈ ವರ್ಷದಿಂದ ಪ್ರಶಸ್ತಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಕುಟುಂಬ ಮತ್ತು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದ ಲತಾ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸೋದರಿ ಸ್ಥಾನದಲ್ಲಿದ್ದ ಗಾಯಕಿಗೆ ನಮನ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಲತಾ ದೀನನಾಥ್ ಮಂಗೇಶ್ಕರ್ ಪುರಸ್ಕಾರವನ್ನು ಇನ್ನು ಮುಂದೆ ಪ್ರತಿ ವರ್ಷ ರಾಷ್ಟ್ರಕ್ಕೆ, ಪ್ರಜೆಗಳಿಗೆ ಮತ್ತು ಸಮಾಜಕ್ಕೆ ಅದ್ಭುತವಾದ ಹಾಗೂ ಆದರ್ಶಪ್ರಾಯವಾದ ಕೊಡುಗೆಗಳನ್ನು ನೀಡಿದ ಓರ್ವರಿಗೆ ನೀಡಲಾಗುತ್ತದೆ. ‘‘ಮೊದಲ ಪ್ರಶಸ್ತಿ ಪುರಸ್ಕೃತರು ಬೇರೆ ಯಾರೂ ಅಲ್ಲ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಮತ್ತು ಗೌರವಿಸುತ್ತೇವೆ’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಂಬರುವ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಗಳು ಸಂಗೀತ, ನಾಟಕ, ಕಲೆ, ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದ ದಂತಕತೆಗಳನ್ನು ಗೌರವಿಸುವ ಗುರಿಯನ್ನು ಹೊಂದಿವೆ. ಹಿರಿಯ ನಟರಾದ ಆಶಾ ಪರೇಖ್ ಮತ್ತು ಜಾಕಿ ಶ್ರಾಫ್ ಅವರು ‘ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ’ ಮಾಸ್ಟರ್ ದೀನನಾಥ್ ಪುರಸ್ಕಾರ (ವಿಶೇಷ ಗೌರವ) ಸ್ವೀಕರಿಸುತ್ತಾರೆ ಎಂದು ಮಂಗೇಶ್ಕರ್ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.
ರಾಹುಲ್ ದೇಶಪಾಂಡೆ ಅವರು ಭಾರತೀಯ ಸಂಗೀತಕ್ಕಾಗಿ ಮಾಸ್ಟರ್ ದೀನನಾಥ್ ಪುರಸ್ಕಾರವನ್ನು ಸ್ವೀಕರಿಸಲಿದ್ದು, ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ‘ಸಂಜಯ್ ಛಾಯಾ’ ನಾಟಕಕ್ಕೆ ನೀಡಲಾಗುತ್ತದೆ. ಮಾಸ್ಟರ್ ದೀನನಾಥ್ ಪುರಸ್ಕಾರ (ಆನಂದಮಯೀ ಪುರಸ್ಕಾರ)ವನ್ನು ನೂತನ್ ಮುಂಬೈ ಟಿಫಿನ್ ಬಾಕ್ಸ್ ಪೂರೈಕೆದಾರರ ಚಾರಿಟಿ ಟ್ರಸ್ಟ್‌ಗೆ ಅದರ ‘ಸಮಾಜ ಸೇವಾ ಕ್ಷೇತ್ರದಲ್ಲಿನ ಸೇವೆಗಳಿಗಾಗಿ’ ನೀಡಲಾಗುತ್ತದೆ.
ಗಾಯಕ, ಸಂಗೀತಗಾರ ಮತ್ತು ರಂಗ ಕಲಾವಿದರಾಗಿ ಗುರುತಿಸಿಕೊಂಡು, ಜನರಿಗೆ ಸ್ಫೂರ್ತಿ ನೀಡಿದ ಮಾಸ್ಟರ್ ದೀನನಾಥ ಮಂಗೇಶ್ಕರ್ ಅವರ ನೆನಪಿಗೆ ಹಾಗೂ ಅವರನ್ನು ಗೌರವಿಸಲು ಪ್ರಶಸ್ತಿಗಳನ್ನು ಆಯೋಜಿಸಲಾಗುತ್ತದೆ. ಜನಸಾಮಾನ್ಯರ ಪ್ರೀತಿ ಮತ್ತು ಬೆಂಬಲವಿರಲಿ ಎಂದು ಹಿರಿಯ ಸಂಗೀತಗಾರರಾದ ಹೃದಯನಾಥ್ ಮಂಗೇಶ್ಕರ್ ಮತ್ತು ಉಷಾ ಮಂಗೇಶ್ಕರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಗಾಯಕ ರೂಪಕುಮಾರ್ ರಾಥೋಡ್ ಅವರು ‘ಸ್ವರ್ಲತಾಂಜಲಿ’ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇದು ‘ನಮ್ಮ ಪ್ರೀತಿಯ ಲತಾ ದೀದಿಯವರ ಅಮರ ಮಧುರ ಮತ್ತು ನೆನಪುಗಳಿಗೆ ಗೌರವವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಗ್ರ್ಯಾಮಿ ಕಾರ್ಯಕ್ರಮ ಆಯೋಜಕರಿಗೆ ನೆನಪಾಗಲೇ ಇಲ್ಲ ಲತಾ ಮಂಗೇಶ್ಕರ್; ಅಭಿಮಾನಿಗಳ ಅಸಮಾಧಾನ
ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್ ಆಫ್ ಇಂಡಿಯಾ
Published On - 10:02 am, Tue, 12 April 22