ಗ್ರ್ಯಾಮಿ ಕಾರ್ಯಕ್ರಮ ಆಯೋಜಕರಿಗೆ ನೆನಪಾಗಲೇ ಇಲ್ಲ ಲತಾ ಮಂಗೇಶ್ಕರ್; ಅಭಿಮಾನಿಗಳ ಅಸಮಾಧಾನ
ಲತಾ ಮಂಗೇಶ್ಕರ್ ಅವರು ಗಳಿಸಿದ ಖ್ಯಾತಿ ಅಂತಿಂಥದಲ್ಲ. ಅವರು ಮಾಡಿರುವ ಸಾಧನೆಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಂದು ಗಾಯಕಿ ಇರಲಿಕ್ಕಿಲ್ಲ. 75 ವರ್ಷಗಳ ವೃತ್ತಿ ಜೀವನದಲ್ಲಿ ಅವರು 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
2022ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Awards) ಕಾರ್ಯಕ್ರಮ ಭಾನುವಾರ (ಮಾರ್ಚ್ 3) ಅದ್ದೂರಿಯಾಗಿ ನೆರವೇರಿದೆ. ಸಂಗೀತ ಲೋಕದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಈ ಅವಾರ್ಡ್ ನೀಡಲಾಗುತ್ತದೆ. ಬೇಸರದ ಸಂಗತಿ ಎಂದರೆ, ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಈ ಅವಾರ್ಡ್ ಫಂಕ್ಷನ್ನಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗಿಲ್ಲ. ಈ ಬಗ್ಗೆ ಲತಾ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.
ಲತಾ ಮಂಗೇಶ್ಕರ್ ಅವರು ಗಳಿಸಿದ ಖ್ಯಾತಿ ಅಂತಿಂಥದಲ್ಲ. ಅವರು ಮಾಡಿರುವ ಸಾಧನೆಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಂದು ಗಾಯಕಿ ಇರಲಿಕ್ಕಿಲ್ಲ. 75 ವರ್ಷಗಳ ವೃತ್ತಿ ಜೀವನದಲ್ಲಿ ಅವರು 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇಷ್ಟು ಗೀತೆಗಳನ್ನು ಹಾಡುವುದು ಅಷ್ಟು ಸುಲಭದ ಮಾತಲ್ಲ. ಅವರು ಕನ್ನಡ, ಹಿಂದಿ ಸೇರಿ ಸುಮಾರು 36 ಭಾಷೆಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಅವರು ಈ ವರ್ಷ ಫೆಬ್ರವರಿ 6ರಂದು ನಿಧನ ಹೊಂದಿದರು. ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ ಲತಾ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಆಗಲೇ ಇಲ್ಲ ಅನ್ನೋದು ಬೇಸರದ ಸಂಗತಿ.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ಮೃತಪಟ್ಟವರನ್ನು ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ನಿಧನ ಹೊಂದಿದ ಅಮೆರಿಕದ ಮ್ಯೂಸಿಷಿಯನ್ ಟೈಲರ್ ಹಾವ್ಕಿನ್ಸ್ ಮೊದಲಾದವರನ್ನು ವೇದಿಕೆ ಮೇಲೆ ನೆನಪಿಸಿಕೊಳ್ಳಲಾಯಿತು. ಆದರೆ, ಲತಾ ಮಂಗೇಶ್ಕರ್ ಅವರನ್ನು ಇಲ್ಲಿ ಸ್ಮರಿಸಿಲ್ಲ. ಇದರಿಂದ ಲತಾ ಮಂಗೇಶ್ಕರ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಇನ್ನು, ಖ್ಯಾತ ಗಾಯಕ ಬಪ್ಪಿ ಲಹರಿ ಅವರನ್ನು ಸ್ಮರಿಸುವ ಕಾರ್ಯವೂ ಇಲ್ಲಿ ಆಗಿಲ್ಲ. ಅವರು ಕೂಡ ಇತ್ತೀಚೆಗೆ ನಿಧನ ಹೊಂದಿದರು.
ರಿಕ್ಕಿ ಕೇಜ್ಗೆ ಪ್ರಶಸ್ತಿ:
ರಿಕ್ಕಿ ಕೇಜ್ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈ ಬಾರಿ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸ್ಟೀವರ್ಟ್ ಕೋಪ್ಲ್ಯಾಂಡ್ ಹಾಗೂ ರಿಕ್ಕಿ ಕೇಜ್ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಮೆರಿಕದ ಸಿಂಗರ್ ಒಲಿವಿಯಾ ರೋಡ್ರಿಗೊ ಅವರಿಗೆ ಈ ಬಾರಿಯ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಲತಾ ಮಂಗೇಶ್ಕರ್ ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಸೇರೋದು ಯಾರಿಗೆ? ಇಲ್ಲಿದೆ ಮಾಹಿತಿ
64ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತದ ರಿಕ್ಕಿ ಕೇಜ್ಗೆ ಪ್ರಶಸ್ತಿ; ಇಲ್ಲಿದೆ ವಿಜೇತರ ಪೂರ್ತಿ ಪಟ್ಟಿ