ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ಮೆಟ್ರೋ, ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ದೆಹಲಿ ಸರ್ಕಾರ ಎಚ್ಚರಿಕೆ

Coal Shortage | Power Crisis: ಕಲ್ಲಿದ್ದಲು ಕೊರತೆ ತೀವ್ರಗೊಳ್ಳುತ್ತಿರುವ ಕಾರಣ ಮೆಟ್ರೋ ರೈಲುಗಳು, ಆಸ್ಪತ್ರೆಗಳು ಸೇರಿದಂತೆ ರಾಷ್ಟ್ರ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಕಷ್ಟವಾಗಬಹುದು ಎಂದು ದೆಹಲಿ ಸರ್ಕಾರ ಎಚ್ಚರಿಕೆ ನೀಡಿದೆ.

ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ಮೆಟ್ರೋ, ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ದೆಹಲಿ ಸರ್ಕಾರ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Apr 29, 2022 | 9:15 AM

ದೆಹಲಿ: ಕಲ್ಲಿದ್ದಲು ಕೊರತೆ (Coal Shortage) ತೀವ್ರಗೊಳ್ಳುತ್ತಿರುವ ಕಾರಣ ಮೆಟ್ರೋ ರೈಲುಗಳು, ಆಸ್ಪತ್ರೆಗಳು ಸೇರಿದಂತೆ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಕಷ್ಟವಾಗಬಹುದು ಎಂದು ದೆಹಲಿ ಸರ್ಕಾರ (Delhi Government) ಎಚ್ಚರಿಕೆ ನೀಡಿದೆ. ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆ ನಡೆಸಿದ್ದಾರೆ. ನಂತರ ಅವರು ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ವಿದ್ಯುತ್ ಕಡಿತದ ಸಂಭವನೀಯತೆಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘‘ದಾದ್ರಿ-II ಮತ್ತು ಉಂಚಹಾರ್ ವಿದ್ಯುತ್ ಸ್ಥಾವರಗಳಿಂದ ಬರುವ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಿದ್ದು, ದೆಹಲಿಯ ಮೆಟ್ರೋ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಅನೇಕ ಅಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ಸತತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು’’ ಎಂದು ತಿಳಿಸಲಾಗಿದೆ.

ಪ್ರಸ್ತುತ, ದೆಹಲಿಯ ವಿದ್ಯುತ್ ಬೇಡಿಕೆಯ 25-30 ಪ್ರತಿಶತವನ್ನು ಈ ವಿದ್ಯುತ್ ಕೇಂದ್ರಗಳ ಮೂಲಕ ಪೂರೈಸಲಾಗುತ್ತಿದೆ. ಆದರೆ ಆ ಕೇಂದ್ರಗಳು ಈಗ ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆ. ‘‘ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಾಜಧಾನಿಯ ಅಗತ್ಯ ಕ್ಷೇತ್ರಗಳಲ್ಲಿ ವಿದ್ಯುತ್ ಕಡಿತವನ್ನು ಜನರು ಎದುರಿಸದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’’ ಎಂದು ಅವರು ತಿಳಿಸಿದ್ದಾರೆ.

ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಕೊರತೆ:

ದೆಹಲಿಯ ವಿದ್ಯುತ್ ಅಗತ್ಯವನ್ನು ಪೂರೈಸಲು ‘ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್’ನ (NTPC) ದಾದ್ರಿ-II ಮತ್ತು ಝಜ್ಜರ್ (ಅರಾವಲಿ)ಯನ್ನು ಸ್ಥಾಪಿಸಲಾಗಿತ್ತು. ಆದರೆ ಈ ವಿದ್ಯುತ್ ಸ್ಥಾವರಗಳಲ್ಲಿ ಪ್ರಸ್ತುತ ಕಲ್ಲಿದ್ದಲಿನ ದಾಸ್ತಾನು ಬಹಳ ಕಡಿಮೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದಾದ್ರಿ-II, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಮತ್ತು ಝಜ್ಜರ್ ವಿದ್ಯುತ್ ಸ್ಥಾವರಗಳು ದೆಹಲಿಗೆ ದಿನಕ್ಕೆ 1,751 ಮೆಗಾವ್ಯಾಟ್ (MW) ವಿದ್ಯುತ್ ಪೂರೈಸುತ್ತವೆ. ದಾದ್ರಿ-II ಪವರ್ ಸ್ಟೇಷನ್‌ನಿಂದ ರಾಷ್ಟ್ರ ರಾಜಧಾನಿಗೆ ಗರಿಷ್ಠ 728 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಉಂಚಹಾರ್ ಕೇಂದ್ರದಿಂದ 100 ಮೆಗಾವ್ಯಾಟ್ ಪೂರೈಸಲಾಗುತ್ತದೆ. ನ್ಯಾಷನಲ್ ಪವರ್ ಪೋರ್ಟಲ್‌ನ ದೈನಂದಿನ ಕಲ್ಲಿದ್ದಲು ವರದಿಯ ಪ್ರಕಾರ, ಈ ಎಲ್ಲಾ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ.

ದೇಶದೆಲ್ಲೆಡೆ ಸುಡುವ ಬೇಸಿಗೆಯಿಂದ ಜನರು ತತ್ತರಿಸುತ್ತಿರುವಾಗ ವಿದ್ಯುತ್ ಪೂರೈಕೆಯಲ್ಲಿನ ಬೇಡಿಕೆ ಏರುತ್ತಿದೆ. ಕಲ್ಲಿದ್ದಲಿನ ಸಮಸ್ಯೆಯಿಂದ ರಾಜ್ಯಗಳಿಗೆ ಇದನ್ನು ನಿರ್ವಹಿಸುವುದು ಸವಾಲಾಗುತ್ತಿದೆ. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವ ಕ್ರಮಗಳ ಜೊತೆಗೆ, ದಾಸ್ತಾನುಗಳನ್ನು ನಿರ್ಮಿಸಲು, ಮುಂದಿನ ಮೂರು ವರ್ಷಗಳವರೆಗೆ ಆಮದನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯಗಳನ್ನು ಕೇಳಿದೆ.

ದೇಶಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ. ಇದು ದೇಶದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಸೂಚಿಸುತ್ತದೆ ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಶನ್ ಹೇಳಿದೆ.

ಇದನ್ನೂ ಓದಿ: Semicon India 2022: ಬೆಂಗಳೂರಿನಲ್ಲಿ ಇಂದಿನಿಂದ ‘ಸೆಮಿಕಾನ್ ಇಂಡಿಯಾ 2022’ ಸಮ್ಮೇಳನ; ಪ್ರಧಾನಿ ಮೋದಿ ಉದ್ಘಾಟನೆ

PSI Recruitment Scam: ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್​ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ