ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಕಿಸ್ಟ್ವಾರ್ ಅರಣ್ಯದಲ್ಲಿ ಫೈರಿಂಗ್ ಬಳಿಕ ಇಬ್ಬರು ಎಸ್​​​ಪಿಒ ಪೊಲೀಸರು ನಾಪತ್ತೆ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮತ್ತೆ ತೀವ್ರಗೊಂಡಿವೆ. ಕಿಸ್ಟ್ವಾರ್‌ನಲ್ಲಿ ಗುಂಡಿನ ಚಕಮಕಿ ಬಳಿಕ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ, ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಘಟನೆಗಳು ಭದ್ರತಾ ಪಡೆಗಳಿಗೆ ಸವಾಲಾಗಿದ್ದು, ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಕಿಸ್ಟ್ವಾರ್ ಅರಣ್ಯದಲ್ಲಿ ಫೈರಿಂಗ್ ಬಳಿಕ ಇಬ್ಬರು ಎಸ್​​​ಪಿಒ ಪೊಲೀಸರು ನಾಪತ್ತೆ
ಸಾಂದರ್ಭಿಕ ಚಿತ್ರ

Updated on: Nov 11, 2026 | 10:37 PM

ಜಮ್ಮು, ನ.11: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಚಟುವಟಿಕೆಗಳು ಮತ್ತೆ ತೀವ್ರಗೊಂಡಿದ್ದು, ಒಂದೇ ದಿನ ಎರಡು ಬೇರೆ ಬೇರೆ ಕಡೆ ಭೀಕರ ಘಟನೆಗಳು ಸಂಭವಿಸಿ ಭದ್ರತಾ ಪಡೆಗಳಿಗೆ ಸವಾಲು ಎದುರಾಗಿದೆ. ಕಿಸ್ಟ್ವಾರ್ ಜಿಲ್ಲೆಯ ಮರ್ವಾಹ್ ಅರಣ್ಯ ಪ್ರದೇಶದಲ್ಲಿ ದಟ್ಟ ಗುಂಡಿನ ಚಕಮಕಿ ಬಳಿಕ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆಯಾಗಿದ್ದರೆ, ಇತ್ತ ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ಉಗ್ರರು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ.

ಕಿಸ್ಟ್ವಾರ್ ಜಿಲ್ಲೆಯ ಮರ್ವಾಹ್‌ನ ದೇಹರ್ನಾ ಅರಣ್ಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭೀಕರ ಗುಂಡಿನ ಶಬ್ದ ಕೇಳಿಬಂದಿದೆ. ಇದರ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆ ಪಡೆ ಯೂನಿಟ್‌ನ ಋಷಿಪಾಲ್ ಹಾಗೂ ಬಾಬಿ ಚಂದ್ ಎಂಬ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಅಪ್ಪರ್ ರಿಡ್ಜ್ ದೇಹರ್ನಾದ ಇಂದರ್‌ವಾನ್ ಪ್ರದೇಶದ ಬಸ್ನಾನ್‌ನಲ್ಲಿ ನಿಯೋಜನೆಗೊಂಡಿದ್ದ ಸೇನೆಯ 17 ರಾಷ್ಟ್ರೀಯ ರೈಫಲ್ಸ್ (17 RR) ಪಡೆಯನ್ನು ಬದಲಾಯಿಸಲುಇಬ್ಬರೂ ಕಿಯಾರ್ ದಚ್ಛನ್‌ನಿಂದ ತೆರಳುತ್ತಿದ್ದರು.

Loading...

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದ ನಾಗಮಂಗಲದ ಕುಟುಂಬದಲ್ಲಿ ಸೂತಕ: ಕಮರಿಹೋಯ್ತು ಇಬ್ಬರು ಯುವತಿಯರ ಕನಸು

ಮಧ್ಯಾಹ್ನ 3:30 ರ ಸುಮಾರಿಗೆ ಹೆದ್ದಾರಿ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅದೇ ವೇಳೆಗೆ ಮರ್ವಾಹ್ ಪ್ರದೇಶದಲ್ಲಿ ಏರ್‌ಟೆಲ್ ಮೊಬೈಲ್ ನೆಟ್‌ವರ್ಕ್ ಸೇವೆಯೂ ಸ್ಥಗಿತಗೊಂಡಿದೆ. ಸಂಜೆ 7 ಗಂಟೆ ಸುಮಾರಿಗೆ ಎಸ್‌ಒಜಿ ತಂಡವು ಎಸ್‌ಎಚ್‌ಒ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಬೃಹತ್ ಶೋಧ ಕಾರ್ಯ ಆರಂಭಿಸಿದೆ. ಮತ್ತೊಂದೆಡೆ, ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಬಳಿಯ ಅಖ್ರಾನ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೂ ಉಗ್ರರು ಭೀಕರ ದಾಳಿ ನಡೆಸಿದ್ದಾರೆ.

ಮಧ್ಯಾಹ್ನ 2:15ರ ವೇಳೆಗೆ ಬೈಕ್‌ನಲ್ಲಿ ಬಂದ ಉಗ್ರರು ಚೆಕ್‌ಪೋಸ್ಟ್ ಮೇಲೆ ಏಕಾಏಕಿ ಮೆಷಿನ್ ಗನ್‌ಗಳಿಂದ ಗುಂಡಿನ ಮಳೆಗರೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರಂಭದ ಕೇವಲ 15 ಸೆಕೆಂಡ್‌ಗಳಲ್ಲಿ ಸುಮಾರು 30 ಸುತ್ತು ಗುಂಡು ಹಾರಿಸಿದ ಶಬ್ದ ಸ್ಪಷ್ಟವಾಗಿ ಕೇಳಿಬಂದಿದೆ. ನಂತರದ ಒಂದು ನಿಮಿಷದೊಳಗೆ ಮತ್ತೆ 12 ಸುತ್ತು (ಒಟ್ಟು 42 ಸುತ್ತು) ಗುಂಡು ಹಾರಿಸಲಾಗಿದ್ದು, ದಾಳಿಯಲ್ಲಿ ರಾಕೇಶ್ ದಾಸ್, ಸಂತೋಷ್ ಚಂದ್ರು ಮತ್ತು ಸೋಮವೀರ್ ಸಿಂಗ್ ಎಂಬ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಯೋಧರು ಕೂಡಲೇ ಪ್ರತಿ ದಾಳಿ ನಡೆಸಿ ಧೈರ್ಯದಿಂದ ಉಗ್ರರಿಗೆ ಸವಾಲು ಹಾಕಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಗಳಿಗೆ ಹೆಚ್ಚುವರಿ ಸೇನಾ ಪಡೆಗಳನ್ನು ರವಾನಿಸಲಾಗಿದ್ದು, ಇಡೀ ಕಿಸ್ಟ್ವಾರ್ ಹಾಗೂ ಕುಲ್ಗಾಮ್ ಅರಣ್ಯ ಪ್ರದೇಶವನ್ನು ಸೀಲ್ ಡೌನ್ ಮಾಡಿ ಉಗ್ರರಿಗಾಗಿ ಬೃಹತ್ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us