ನಾಳೆಯಿಂದ ದೇಶಾದ್ಯಂತ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ; ಯಾತ್ರೆಯ ಉದ್ದೇಶವೇನು?

| Updated By: preethi shettigar

Updated on: Aug 15, 2021 | 1:23 PM

Jan Ashirwad Yatra: 39 ಕೇಂದ್ರ ಮಂತ್ರಿಗಳು ತೆರೆದ ವಾಹನದಲ್ಲಿ ತಲಾ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿದರೇ, ಕನಿಷ್ಠ 212 ಲೋಕಸಭಾ ಕ್ಷೇತ್ರಗಳನ್ನು ಸುತ್ತಬಹುದು ಎಂಬ ಯೋಜನೆ ಹಾಕಿಕೊಳ್ಳಲಾಗಿದೆ.

ನಾಳೆಯಿಂದ ದೇಶಾದ್ಯಂತ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ; ಯಾತ್ರೆಯ ಉದ್ದೇಶವೇನು?
ನೂತನವಾಗಿ ಸೇರ್ಪಡೆಯಾದ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಜುಲೈ ತಿಂಗಳ ಆರಂಭದಲ್ಲಿ ಮೋದಿ ಸಂಪುಟ ಪುನರ್ ರಚನೆ ವೇಳೆ ಕ್ಯಾಬಿನೆಟ್ ಸೇರಿದ 39 ಮಂದಿ ಕೇಂದ್ರ ಸಚಿವರು, ದೇಶಾದ್ಯಂತ ನಾಳೆಯಿಂದ ಜನ ಅಶೀರ್ವಾದ ಯಾತ್ರೆ ಕೈಗೊಳ್ಳುತ್ತಿದ್ದಾರೆ. 39 ಸಚಿವರು ತಲಾ 300 ರಿಂದ 400 ಕಿಲೋಮೀಟರ್ ಸಂಚಾರ ಮಾಡಿ ಯಾತ್ರೆ ಮಾಡಲಿದ್ದಾರೆ. ದೇಶದ 212 ಲೋಕಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗುವಂತೆ ಈಗಾಲೇ ಯೋಜನೆ ಮಾಡಲಾಗಿದೆ. ಹಾಗಿದ್ದರೆ ಜನ ಅಶೀರ್ವಾದ ಯಾತ್ರೆಯ ಉದ್ದೇಶವೇನು? ಯಾತ್ರೆಯ ವೇಳೆ ಸಚಿವರು ಮಾಡುವುದೇನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೇಂದ್ರದ ನೂತನ ಸಚಿವರಿಂದ ದೇಶದಲ್ಲಿ ಜನ ಆಶೀರ್ವಾದ ಯಾತ್ರೆ
ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳ 7 ರಂದು 43 ಮಂದಿಯನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆದರೆ, ಬಳಿಕ ಕೇಂದ್ರದ ನೂತನ ಸಚಿವರನ್ನು ಸಂಸತ್ ಅಧಿವೇಶನದ ವೇಳೆ ಲೋಕಸಭೆ, ರಾಜ್ಯಸಭೆಗೆ ಪರಿಚಯ ಮಾಡಿಕೊಡಲು ವಿಪಕ್ಷಗಳು ಅವಕಾಶ ಕೊಟ್ಟಿಲ್ಲ. ವಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸಿದ್ದವು. ಈ ರೀತಿ ನೂತನ ಸಚಿವರನ್ನು ಪರಿಚಯಿಸುವಾಗ ಗದ್ದಲ ಎದ್ದಿದ್ದು, ಇದೇ ಮೊದಲೇನೂ ಅಲ್ಲ, ಯುಪಿಎ ಸರ್ಕಾರದ ಕಾಲದಲ್ಲಿ 2004 ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ತಮ್ಮ ಸಂಪುಟದ ಸಚಿವರನ್ನು ಲೋಕಸಭೆಗೆ ಪರಿಚಯಿಸಲು ಬಿಜೆಪಿ ಸಂಸದರು ಕೂಡ ಅವಕಾಶ ಕೊಟ್ಟಿರಲಿಲ್ಲ. ಆಗ ಬಿಜೆಪಿ ಸಂಸದರು ಸದನದಲ್ಲಿ ಗದ್ದಲ ಎಬ್ಬಿಸಿದ್ದರು. ಅದೇ ಇತಿಹಾಸ ಈಗ ಪುನಾರಾವರ್ತನೆ ಆಗಿದೆ ಅಷ್ಟೇ.

ತಮ್ಮ ಸಂಪುಟದ ಹೊಸ ಸಚಿವರನ್ನು ಲೋಕಸಭೆ, ರಾಜ್ಯಸಭೆಗೆ ಪರಿಚಯಿಸಲು ಅವಕಾಶ ಸಿಗದಿದ್ದರೇನಂತೆ, ನೇರವಾಗಿ ದೇಶದ ಜನರಿಗೆ ತಮ್ಮ ಸಂಪುಟದ ಹೊಸ ಸಚಿವರನ್ನು ಪರಿಚಯಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಸಂಪುಟಕ್ಕೆ ಸೇರ್ಪಡೆಯಾದ 43 ಸಚಿವರ ಪೈಕಿ 39 ಸಚಿವರು ಸಂಸತ್ ಅಧಿವೇಶನ ಮುಗಿದ ಬಳಿಕ ಜನ ಆಶೀರ್ವಾದ ಯಾತ್ರೆ ನಡೆಸಲು ಸೂಚಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಕೇಂದ್ರ ಘಟಕದಿಂದಲೇ ಯೋಜನೆ ಕೂಡ ಸಿದ್ಧವಾಗಿದೆ. ಆಗಸ್ಟ್ 13 ರವರೆಗೆ ಸಂಸತ್‌ನ ಮುಂಗಾರು ಅಧಿವೇಶನ ನಡೆಯಬೇಕಾಗಿತ್ತು. ಆದರೆ, ಎರಡು ದಿನ ಮುನ್ನವೇ ಸಂಸತ್ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಇಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ಈ ಸಮಾರಂಭದಲ್ಲಿ ಹೊಸ ಕೇಂದ್ರ ಸಚಿವರು ಸೇರಿದಂತೆ ಸಂಪೂರ್ಣ ಸಂಪುಟದ ಸಚಿವರು ಉಪಸ್ಥಿತರಿದ್ದರು. ನಾಳೆಯಿಂದಲೇ 43 ಕೇಂದ್ರ ಮಂತ್ರಿಗಳ ಪೈಕಿ 39 ಕೇಂದ್ರ ಸಚಿವರು ಜನ ಆಶೀರ್ವಾದ ಯಾತ್ರೆಯಲ್ಲಿ ಪಾಲ್ಗೋಳ್ಳಲಿದ್ದಾರೆ. ದೇಶದ 19 ರಾಜ್ಯಗಳಲ್ಲಿ ಕೇಂದ್ರ ಮಂತ್ರಿಗಳು ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ.

ಯಾತ್ರೆಯ ವೇಳೆ ಸಚಿವರು ಮಾಡುವುದೇನು?
ಕೇಂದ್ರ ಮಂತ್ರಿಗಳು ಆಗಸ್ಟ್ 16 ರಿಂದ ಮೂರು ದಿನಗಳ ಕಾಲ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಬೇಕು. ಜನರನ್ನು ಭೇಟಿಯಾಗಬೇಕು. ಅಲ್ಲಲ್ಲಿ ಜನರನ್ನು ಉದ್ದೇಶಿಸಿ ಚಿಕ್ಕ ಭಾಷಣಗಳನ್ನು ಮಾಡಬೇಕು. ಮೋದಿ ಸರ್ಕಾರದ ಉದ್ದೇಶ, ಕಾರ್ಯಕ್ರಮ, ತಮ್ಮ ಆದ್ಯತೆಗಳ ಬಗ್ಗೆ ಜನರನ್ನು ಉದ್ದೇಶಿಸಿ ಭಾಷಣ ಮಾಡಬೇಕೆಂದು ಸಚಿವರಿಗೆ ಸೂಚಿಸಲಾಗಿದೆ.

39 ಕೇಂದ್ರ ಮಂತ್ರಿಗಳು ತೆರೆದ ವಾಹನದಲ್ಲಿ ತಲಾ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿದರೇ, ಕನಿಷ್ಠ 212 ಲೋಕಸಭಾ ಕ್ಷೇತ್ರಗಳನ್ನು ಸುತ್ತಬಹುದು ಎಂಬ ಯೋಜನೆ ಹಾಕಿಕೊಳ್ಳಲಾಗಿದೆ. 265 ಜಿಲ್ಲೆಗಳನ್ನು ಸಚಿವರು ಸುತ್ತಲಿದ್ದಾರೆ. ಕೇಂದ್ರ ಮಂತ್ರಿಯೊಬ್ಬರು 300 ರಿಂದ 400 ಕಿಲೋಮೀಟರ್ ಸಂಚಾರ ಮಾಡಬೇಕು. 39 ಮಂತ್ರಿಗಳು ಸುಮಾರು 19,567 ಕಿಲೋಮೀಟರ್ ಸಂಚಾರ ಮಾಡಲಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ್ ರಾಜ್ಯಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ಜನ ಆಶೀರ್ವಾದ ಯಾತ್ರೆ ಮೂಲಕವೇ ತಮ್ಮ ಸ್ವಕ್ಷೇತ್ರ ಪ್ರವೇಶ
ಕೇಂದ್ರದ ಇಂಧನ ಖಾತೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ಪಡೆದಿರುವ ಆರ್‌.ಕೆ.ಸಿಂಗ್ ಅವರು ಬಿಹಾರದ ಗಯಾಗೆ ಮೊದಲು ಭೇಟಿ ನೀಡುವರು. ಗಯಾದಿಂದ ತಮ್ಮ ಲೋಕಸಭಾ ಕ್ಷೇತ್ರವಾದ ಅರಾ ಕಡೆಗೆ ಸಂಚಾರ ಮಾಡಲಿದ್ದಾರೆ. ಗಯಾದಿಂದ ಅರಾ ಮಧ್ಯೆ ಸಿಗುವ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಆರ್.ಕೆ.ಸಿಂಗ್ ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ.

ಇದೇ ರೀತಿ ಕೇಂದ್ರದ ಕಾರ್ಮಿಕ ಖಾತೆ ಮಂತ್ರಿಯಾಗಿ ಸಂಪುಟಕ್ಕೆ ಸೇರ್ಪಡೆ ಆಗಿರುವ ಭೂಪೇಂದ್ರ ಯಾದವ್, ತಮ್ಮ ತವರು ರಾಜ್ಯವಾದ ರಾಜಸ್ಥಾನದಲ್ಲಿ ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ. ಮಾರ್ಗ ಮಧ್ಯೆ ಸಿಗುವ ಸಣ್ಣ ಹಳ್ಳಿ, ಸಣ್ಣ ಟೌನ್ ಗಳಲ್ಲೇ ಭೂಪೇಂದ್ರ ಯಾದವ್ ಸೇರಿದಂತೆ ಕೇಂದ್ರ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಮಾರ್ಗ ಮಧ್ಯೆ ಎಲ್ಲ ವರ್ಗದ ಜನರನ್ನು ಕೇಂದ್ರ ಸಚಿವರು ಭೇಟಿಯಾಗುವರು. ಮಾರ್ಗ ಮಧ್ಯೆ ಸಿಗುವ ಧಾರ್ಮಿಕ ಸಂತರು, ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರೀಯ, ರಾಜ್ಯ ಮಟ್ಟದ ಆಟಗಾರರು, ಹುತಾತ್ಮ ಸೈನಿಕರ ಕುಟುಂಬ, ಪಕ್ಷದ ಕೇಡರ್ ಸೇರಿದಂತೆ ಎಲ್ಲರನ್ನೂ ಭೇಟಿಯಾಗಲಿದ್ದಾರೆ. ಧಾರ್ಮಿಕ ಸ್ಥಳಗಳಿಗೂ ಕೇಂದ್ರ ಸಚಿವರು ಭೇಟಿ ಮಾಡಲಿದ್ದಾರೆ.

ಕರ್ನಾಟಕದಲ್ಲೂ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ
ಕರ್ನಾಟಕದಿಂದ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ಆನೇಕಲ್ ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಕೂಡ ಕರ್ನಾಟಕದಲ್ಲಿ ತಲಾ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ. ರಾಜೀವ್ ಚಂದ್ರಶೇಖರ್ ಆಗಸ್ಟ್ 16 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 17ರಂದು ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಆಗಸ್ಟ್ 18 ರಂದು ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಹಾಗೂ ಆಗಸ್ಟ್ 19 ರಂದು ಬೆಂಗಳೂರಿನಲ್ಲಿ ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ. ಆಗಸ್ಟ್ 16 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಜನ ಆಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ.

ಕೇಂದ್ರದ ಕೃಷಿ, ರೈತ ಕಲ್ಯಾಣ ಖಾತೆ ರಾಜ್ಯ ಮಂತ್ರಿಯಾಗಿರುವ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸುತ್ತಲಿನ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಜನ ಆಶೀರ್ವಾದ ಯಾತ್ರೆ ಕೈಗೊಂಡು ತಮ್ಮ ಸ್ವಕ್ಷೇತ್ರ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಪ್ರವೇಶಿಸಲಿದ್ದಾರೆ. ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾದ ಬಳಿಕ ನೇರವಾಗಿ ಉಡುಪಿ-ಚಿಕ್ಕಮಗಳೂರಿಗೆ ಹೋಗಲು ಅವಕಾಶವಿಲ್ಲ. ಜನ ಆಶೀರ್ವಾದ ಯಾತ್ರೆಯ ಮೂಲಕವೇ ಈಗ ಕೇಂದ್ರದ ನೂತನ ಸಚಿವರು ತಮ್ಮ ಲೋಕಸಭಾ ಕ್ಷೇತ್ರ ಪ್ರವೇಶ ಮಾಡಬೇಕಾಗಿದೆ.

ಶೋಭಾ ಕರಂದ್ಲಾಜೆ ಅವರು ಜನ ಆಶೀರ್ವಾದ ಯಾತ್ರೆ ಮೂಲಕ ಆಗಸ್ಟ್ 17 ರಂದು ಮಂಡ್ಯ, ಚಾಮರಾಜನಗರ ಜಿಲ್ಲೆ, ಆಗಸ್ಟ್ 18ಕ್ಕೆ ಮೈಸೂರು, ಹಾಸನ, ಆಗಸ್ಟ್ 20ಕ್ಕೆ ಉಡುಪಿಗೆ ಭೇಟಿ ನೀಡಲಿದ್ದಾರೆ.
ಇನ್ನೂ ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ಸಚಿವ ಆನೇಕಲ್ ನಾರಾಯಣಸ್ವಾಮಿ ಅವರು, ಆಗಸ್ಟ್ 17 ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ, ತುಮಕೂರು, ಆಗಸ್ಟ್ 18ಕ್ಕೆ ಚಿತ್ರದುರ್ಗ, ದಾವಣಗೆರೆ, ಆಗಸ್ಟ್ 19ಕ್ಕೆ ಹಾವೇರಿ, ಗದಗ ಜಿಲ್ಲೆಯಲ್ಲಿ ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ. ಈ ಮೂವರು ಕೇಂದ್ರ ಸಚಿವರೇ ಕರ್ನಾಟಕದ 17 ಜಿಲ್ಲೆಗಳಲ್ಲಿ ಸಂಚಾರ ಮಾಡಲಿದ್ದಾರೆ. ಇದೇ ರೀತಿ ಕೇಂದ್ರದ ರಾಸಾಯನಿಕ, ರಸಗೊಬ್ಬರ ಖಾತೆ ಸಚಿವ ಭಗವಂತ್ ಖೂಬಾ ಕೂಡ ಮೂರರಿಂದ ನಾಲ್ಕು ಜಿಲ್ಲೆಗಳಲ್ಲಿ ಜನ ಆಶೀರ್ವಾದ ಯಾತ್ರೆ ಮಾಡಲಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ನಾಯಕಿ ಪಂಕಜಾ ಮುಂಡೆ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆಯ ಮೇಲುಸ್ತುವಾರಿ ನೋಡಿಕೊಳ್ಳುವರು. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಜನ ಆಶೀರ್ವಾದ ಯಾತ್ರೆಯ ಸಿದ್ಧತೆಯ ಸಭೆಗಳು ನಡೆದಿವೆ.

ಎಲ್ಲ ಬಿಜೆಪಿ ಲೋಕಸಭಾ ಸದಸ್ಯರು ಆಗಸ್ಟ್ 16 ರಿಂದ ತಮ್ಮ ಕ್ಷೇತ್ರಗಳಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸಚಿವರು ಜನರ ಕೈಗೆ ಸಿಗಲ್ಲ. ಜನರಿಂದ ದೂರ ಇರುತ್ತಾರೆ ಎಂಬ ಟೀಕೆಗಳಿವೆ. ಇದನ್ನು ಹೋಗಲಾಡಿಸಲು ಪ್ರಧಾನಿ ಮೋದಿ, ಈ ಜನ ಆಶೀರ್ವಾದ ಯಾತ್ರೆ ಕೈಗೊಳ್ಳಲು ಕೇಂದ್ರ ಸಚಿವರಿಗೆ ಸೂಚಿಸಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಎಲ್ಲ ಕೇಂದ್ರ ಸಚಿವರು ಜನರೊಂದಿಗೆ ಸಂಪರ್ಕ ಹೊಂದಿರಬೇಕು. ಜನರಿಗೂ ಕೂಡ ತಾವು ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂಬ ಭಾವನೆ ಬರಬೇಕೆಂದು ಬಿಜೆಪಿ ಪಕ್ಷದ ಜನ ಆಶೀರ್ವಾದ ಯಾತ್ರೆಯ ಸೂಚನಾ ಪತ್ರದಲ್ಲಿ ಹೇಳಿದ್ದಾರೆ.

ಜೂನ್ ಆರಂಭದಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ಸಮತೋಲನದ ಸಂಪುಟ ರಚಿಸಲಾಗಿದೆ. ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. 11 ಮಂದಿ ಮಹಿಳಾ ಮಂತ್ರಿಗಳು ಮೋದಿ ಸಂಪುಟದಲ್ಲಿದ್ದಾರೆ. ಎಲ್ಲ ವಲಯಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ಬಿಜೆಪಿ ಪಕ್ಷದ ಸೂಚನಾ ಪತ್ರದಲ್ಲಿ ಹೇಳಲಾಗಿದೆ.

ಬಹಳಷ್ಟು ಓಬಿಸಿ ಸಮುದಾಯಗಳು, ಹಿಂದುಳಿದ ವರ್ಗಗಳಿಗೆ ಸಂಪುಟ ಪುನರ್ ರಚನೆಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಜನರಿಗೂ ತಮ್ಮ ಸಮುದಾಯದವರು ಕೇಂದ್ರದ ಸಂಪುಟದಲ್ಲಿದ್ದಾರೆ  ಎಂಬ ಸಂದೇಶ ನೀಡಲು ಜನ ಆಶೀರ್ವಾದ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಜನ ಆಶೀರ್ವಾದ ಯಾತ್ರೆಯು ಅದ್ದೂರಿ, ಆಕರ್ಷಕ ಮತ್ತು ಪರಿಣಾಮಕಾರಿಯಾಗಿದ್ದು, ಸಾಮಾನ್ಯ ಜನರನ್ನು ತಲುಪಬೇಕು. ಸಚಿವರು ಹೊಸ ಜಿಲ್ಲೆಗೆ ಪ್ರವೇಶಿಸಿದಾಗ ಭವ್ಯ, ಪ್ರೀತಿಪೂರ್ವಕ ಸ್ವಾಗತ ಕೋರಬೇಕು ಎಂದು ಬಿಜೆಪಿ ಪಕ್ಷದ ಸೂಚನಾ ಪತ್ರದಲ್ಲಿ ಎಲ್ಲ ನಾಯಕರಿಗೆ ಸೂಚಿಸಲಾಗಿದೆ.

ಜತೆಗೆ ಕೊರೊನಾ ತಡೆ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯಾತ್ರೆ ಸಾಗುವ ಮಾರ್ಗದಲ್ಲಿ ಕೇಂದ್ರದ ಮೋದಿ ಸರ್ಕಾರದ ಸಾಧನೆ, ಯೋಜನೆಯ ಕಟೌಟ್, ಬಿತ್ತಿಪತ್ರಗಳನ್ನು ಅಂಟಿಸಬೇಕು. ಜೊತೆಗೆ ಪ್ರಧಾನಿ ಮೋದಿ ಪೋಟೋ ಹಾಗೂ ಬಿಜೆಪಿಯ ಚಿಹ್ನೆಯಾದ ಕಮಲದ ಚಿಹ್ನೆಯೂ ಇರಬೇಕೆಂದು ಸೂಚನಾ ಪತ್ರದಲ್ಲಿ ಹೇಳಿದ್ದಾರೆ.

ದೇಶದ 22 ರಾಜ್ಯಗಳಲ್ಲಿ ಬಿಜೆಪಿಯ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ ಸಾಗಲಿದೆ. ದೆಹಲಿ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ತ್ರಿಪುರ, ಜಾರ್ಖಂಡ್, ಗುಜರಾತ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ತಮಿಳುನಾಡು, ಒರಿಸ್ಸಾ, ಮಣಿಪುರ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿಯ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ ಸಾಗಲಿದೆ. ಜನ ಆಶೀರ್ವಾದ ಯಾತ್ರೆಯ ಯೋಜನೆ ಮಾಡುವ ಜವಾಬ್ದಾರಿಯನ್ನು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಿಗೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಆರು ಕೇಂದ್ರ ಸಚಿವರು 3,675 ಕಿಲೋಮೀಟರ್ ಜನ ಆಶೀರ್ವಾದ ಯಾತ್ರೆ ಮಾಡುವರು.

ಯಾತ್ರೆಯ ಮೂಲಕ ಕೊರೊನಾ ಹರಡುವಿಕೆ?
ಬಿಜೆಪಿಯ ಜನ ಆಶೀರ್ವಾದ ಯಾತ್ರೆಯು ಕೊರೊನಾದ ಸೂಪರ್ ಸ್ಪ್ಪೆಡರ್ ಯಾತ್ರೆಯಾಗಲಿದೆ. ಇದರಿಂದ ಕೊರೊನಾದ ಮೂರನೇ ಅಲೆಗೆ ಆಹ್ವಾನ ನೀಡಿದಂತಾಗುತ್ತದೆ. ಕೇಂದ್ರ ಸರ್ಕಾರ ಉಪಚುನಾವಣೆ ನಡೆಸುತ್ತಿಲ್ಲ. ಆದರೆ, ಯಾತ್ರೆಗೆ ಅವಕಾಶ ಕೊಡುತ್ತಿದೆ. ಈ ದುರಂತವನ್ನು ನಿಲ್ಲಿಸಿ ಎಂದು ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿ ಯಾತ್ರೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರಿಂದ ಆ.16 ರಿಂದ ದೇಶಾದ್ಯಂತ ಜನ ಆಶೀರ್ವಾದ ಯಾತ್ರೆ: ಟೂರ್​ ಪ್ಲ್ಯಾನ್​ ವಿವರ ಹೀಗಿದೆ

ಜನರ ಆಶೀರ್ವಾದ ಕೇಳಲು ಹೊರಡುತ್ತಿದ್ದಾರೆ ಕೇಂದ್ರ ಸಚಿವರು; ಆಗಸ್ಟ್​ 16ರಿಂದ ಪ್ರಾರಂಭ ಬಿಜೆಪಿ ಜನಾಶೀರ್ವಾದ ಯಾತ್ರೆ