
ನವದೆಹಲಿ, ಡಿಸೆಂಬರ್ 21: ಜಗತ್ತಿನ ಎಲ್ಲಾ ಧರ್ಮಗಳನ್ನು ಯಾವುದೇ ಭೇದವಿಲ್ಲದೇ ಕುಟುಕುವ ಬಾಲಿವುಡ್ ಚಿತ್ರ ಸಾಹಿತಿ, ಕವಿ ಹಾಗೂ ವಿಚಾರವಂತರಾದ ಜಾವೇದ್ ಅಖ್ತರ್ (Javed Akhtar), ಮತ್ತೊಮ್ಮೆ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದಾರೆ. ದಿ ಲಲ್ಲನ್ಟಾಪ್ ಎನ್ನುವ ಯೂಟ್ಯೂಬ್ ಪೋಡ್ಕ್ಯಾಸ್ಟ್ನಲ್ಲಿ ಇಸ್ಲಾಮೀ ವಿದ್ವಾಂಸ ಮುಫ್ತಿ ಷಮಾಯಿಲ್ ನದ್ವಿ (Mufti Shamail Nadwi) ಮತ್ತು ಜಾವೇದ್ ಅಖ್ತರ್ ನಡುವೆ ದೇವರ ಅಸ್ತಿತ್ವ ವಿಚಾರ ಕುರಿತು ನಡೆದ ಚರ್ಚೆ ಸಾಕಷ್ಟು ಪ್ರತಿಕ್ರಿಯೆ ಪಡೆಯುತ್ತಿದೆ.
ಈ ವೇಳೆ, ಅಖ್ತರ್ ಅವರು ಪ್ಯಾಲೆಸ್ಟೀನ್ ಹಿಂಸೆಯ ಪರಿಸ್ಥಿತಿ ಉಲ್ಲೇಖಿಸಿ, ಆ ದೇವರಿಗಿಂತ ನರೇಂದ್ರ ಮೋದಿಯೇ ವಾಸಿ ಎಂದು ಈ ಡಿಬೇಟ್ನಲ್ಲಿ ವಾದಿಸಿದ್ದೂ ಉಂಟು. ದೇವರು ಅಸ್ತಿತ್ವದಲ್ಲಿದ್ದಾನಾ ಇಲ್ಲವಾ ಎಂಬುದು ಈ ಡಿಬೇಟ್ನ ಮುಖ್ಯ ವಿಷಯವಾಗಿತ್ತು. ಚರ್ಚೆಯ ವೇಳೆ, ಜಾವೇದ್ ಅಖ್ತರ್ ಅವರು ಗಾಜಾ ಸಂಘರ್ಷದ ಘಟನೆಗಳನ್ನು ಉಲ್ಲೇಖಿಸಿ ವಾದಿಸಿದರು.
ಇದನ್ನೂ ಓದಿ: ಅಸ್ಸಾಮ್ನಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನೇ ಹೊಣೆ ಮಾಡುವುದೇಕೆ? ಖರ್ಗೆ ಪ್ರಶ್ನೆ
‘ಇಸ್ರೇಲ್-ಪ್ಯಾಲೆಸ್ಟೀನ್ ಭಾಗದ ಗಾಜಾದಲ್ಲಿ 70,000 ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದಾರೆ. ನೀನು (ದೇವರು) ಸರ್ವಾಂತರ್ಯಾಮಿಯೇ ಆಗಿದ್ದರೆ ಗಾಜಾದಲ್ಲೂ ಇರಬೇಕು. ಅಲ್ಲಿ ಮಕ್ಕಳ ನರಮೇಧ ಆಗುತ್ತಿರುವುದನ್ನು ಕಂಡಿರಬೇಕು. ಆದರೂ ಸುಮ್ಮನಿದ್ದೀಯ ಎಂದರೆ ನಿನ್ನನ್ನು ಹೇಗೆ ನಂಬಲು ಸಾಧ್ಯ?’ ಎಂದು ಜಾವೇದ್ ಅಖ್ತರ್ ಹೇಳುತ್ತಾ, ಈ ವಾದಕ್ಕೆ ನರೇಂದ್ರ ಮೋದಿ ಅವರನ್ನೂ ಪ್ರಸ್ತಾಪಿಸಿದರು.
‘ಅದಕ್ಕೆ (ದೇವರು) ಹೋಲಿಸಿದರೆ ನಮ್ಮ ಪ್ರಧಾನಿಯೇ ಉತ್ತಮ ಎನಿಸುತ್ತದೆ. ಅವರು ನಮ್ಮಗಳ ಯೋಗಕ್ಷೇಮವನ್ನಾದರೂ ನೋಡಿಕೊಳ್ಳುತ್ತಾರೆ’ ಎಂದು ಜಾವೇದ್ ಅಖ್ತರ್ ಆ ಡಿಬೇಟ್ನಲ್ಲಿ ಹೇಳಿದರು.
‘ಈ ದೇವರ ವಿಷಯ ಬಂದರೆ ಯಾಕೆ ಎಲ್ಲವೂ ನಿಂತುಬಿಡುತ್ತದೆ? ನಾವು ಯಾಕೆ ಪ್ರಶ್ನಿಸೋದನ್ನೇ ನಿಲ್ಲಿಸಬೇಕು? ಮಕ್ಕಳ ಮೇಲೆ ಬಾಂಬ್ ಹಾಕಲು ಅನುಮತಿಸುವ ದೇವರು ಎಂಥವನು? ಅವನು ಅಸ್ತಿತ್ವದಲ್ಲಿದ್ದೂ ಇದಕ್ಕೆ ಅವಕಾಶ ಕೊಡುತ್ತಾನೆಂದರೆ ಹೇಗೆ’ ಎಂದು ಅಖ್ತರ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ
ಜಾವೇದ್ ಅಖ್ತರ್ ಅವರ ತೀಕ್ಷ್ಣ ಪ್ರಶ್ನೆಗಳಿಗೆ ಇಸ್ಲಾಮೀ ಧರ್ಮಗುರು ಮುಫ್ತಿ ಷಮಾಯಿಲ್ ನದ್ವಿ ಒಂದಷ್ಟು ಸಮಾಧಾನದ ಉತ್ತರ ಕೊಡಲು ಯತ್ನಿಸಿದರು. ದೇವರಿಂದ ಕೆಟ್ಟದ್ದೂ ಸೃಷ್ಟಿಯಾಗಿದೆಯೇ ವಿನಃ ದೇವರೇ ಕೆಟ್ಟವನಲ್ಲ. ಜನರು ತಮಗೆ ಸಿಕ್ಕಿರುವ ಮುಕ್ತ ವಿವೇಚನೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ದುರುಳರು. ಹಿಂಸಾಚಾರ, ಅತ್ಯಾಚಾರ ಇವೆಲ್ಲವೂ ಮನುಷ್ಯನ ಆಯ್ಕೆಯೇ ಹೊರತು ದೇವರ ಉದ್ದೇಶವಲ್ಲ ಎಂದು ಧರ್ಮಗುರು ವಾದಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ