JNU Elections: ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಡಪಕ್ಷ ಬೆಂಬಲಿತ ಗುಂಪಿಗೆ ಭರ್ಜರಿ ಗೆಲುವು

|

Updated on: Mar 25, 2024 | 2:12 PM

ಗೆಲುವಿನ ನಂತರ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಧನಂಜಯ್, "ಈ ಗೆಲುವು ಜೆಎನ್‌ಯು ವಿದ್ಯಾರ್ಥಿಗಳು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ತಿರಸ್ಕರಿಸುವ ಜನಾಭಿಪ್ರಾಯವಾಗಿದೆ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸವನ್ನು ತೋರಿಸಿದ್ದಾರೆ. ನಾವು ಅವರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.

JNU Elections: ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಡಪಕ್ಷ ಬೆಂಬಲಿತ ಗುಂಪಿಗೆ ಭರ್ಜರಿ ಗೆಲುವು
ಜೆಎನ್​​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಧನಂಜಯ್
Follow us on

ದೆಹಲಿ ಮಾರ್ಚ್ 25: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ಒಕ್ಕೂಟ(JNUSU) ಚುನಾವಣೆಯಲ್ಲಿ ಎಡಪಕ್ಷ ಬೆಂಬಲಿತ ಗುಂಪು ಭರ್ಜರಿ ಗೆಲುವು ಸಾಧಿಸಿದೆ. ಸುಮಾರು ಮೂರು ದಶಕಗಳ ನಂತರ ಪ್ರಸ್ತುತ ವಿವಿಯಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ದಲಿತ (Dalit) ವಿದ್ಯಾರ್ಥಿಯೊಬ್ಬರು ಆಯ್ಕೆಯಾಗಿದ್ದಾರೆ. ಯುನೈಟೆಡ್ ಲೆಫ್ಟ್  (United Left) ಗುಂಪು ಭಾನುವಾರ ಜೆಎನ್‌ಯುಎಸ್‌ಯು ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ್ದು ತಮ್ಮ ಸಮೀಪದ ಪ್ರತಿಸ್ಪರ್ಧಿ  ಎಬಿವಿಪಿಯನ್ನು(ABVP) ಸೋಲಿಸಿತು.

ನಾಲ್ಕು ವರ್ಷಗಳ ಗ್ಯಾಪ್ ನಂತರ ನಡೆದ ಚುನಾವಣೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಧನಂಜಯ್ ಅವರು 1,676 ಮತಗಳನ್ನು ಗಳಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಉಮೇಶ್ ಸಿ ಅಜ್ಮೀರಾ ವಿರುದ್ಧ 2,598 ಮತಗಳನ್ನು ಪಡೆಯುವ ಮೂಲಕ ಜೆಎನ್‌ಯುಎಸ್‌ಯು ಅಧ್ಯಕ್ಷ ಸ್ಥಾನ ಗೆದ್ದಿದ್ದಾರೆ.

ಜೆಎನ್​​ಯುನಲ್ಲಿ ಸಂಭ್ರಮಾಚರಣೆ


1996-97ರಲ್ಲಿ ಚುನಾಯಿತರಾದ ಬಟ್ಟಿ ಲಾಲ್ ಬೈರ್ವಾ ನಂತರ ಎಡಪಕ್ಷದಿಂದ ಮೊದಲ ದಲಿತ ಅಧ್ಯಕ್ಷರಾಗಿದ್ದಾರೆ ಧನಂಜಯ್. School of Arts and Aesthetics ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಧನಂಜಯ್ ಬಿಹಾರದ ಗಯಾ ಮೂಲದವರಾಗಿದ್ದಾರೆ.

ಗೆಲುವಿನ ನಂತರ ಪಿಟಿಐ ಜೊತೆ ಮಾತನಾಡಿದ ಧನಂಜಯ್, “ಈ ಗೆಲುವು ಜೆಎನ್‌ಯು ವಿದ್ಯಾರ್ಥಿಗಳು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ತಿರಸ್ಕರಿಸುವ ಜನಾಭಿಪ್ರಾಯವಾಗಿದೆ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸವನ್ನು ತೋರಿಸಿದ್ದಾರೆ. ನಾವು ಅವರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.

“ಕ್ಯಾಂಪಸ್‌ನಲ್ಲಿ ಮಹಿಳೆಯರ ಸುರಕ್ಷತೆ, ನಿಧಿ ಕಡಿತ, ವಿದ್ಯಾರ್ಥಿವೇತನ ಹೆಚ್ಚಳ, ಮೂಲಸೌಕರ್ಯ ಮತ್ತು ನೀರಿನ ಬಿಕ್ಕಟ್ಟು ಪರಿಹಾರ ವಿದ್ಯಾರ್ಥಿಗಳ ಒಕ್ಕೂಟದ ಪ್ರಮುಖ ಆದ್ಯತೆಗಳಲ್ಲಿ ಸೇರಿವೆ” ಎಂದು ಅವರು ಹೇಳಿದರು.

‘ಲಾಲ್ ಸಲಾಂ’ ಮತ್ತು ‘ಜೈ ಭೀಮ್’ ಘೋಷಣೆಗಳ ನಡುವೆ ವಿಜೇತ ವಿದ್ಯಾರ್ಥಿಗಳನ್ನು ಅವರ ಬೆಂಬಲಿಗರು ಶ್ಲಾಘಿಸಿದರು. ಅಭ್ಯರ್ಥಿಗಳ ಗೆಲುವು ಸಂಭ್ರಮಾಚಾರಣೆ ವೇಳೆ ವಿದ್ಯಾರ್ಥಿಗಳು ಕೆಂಪು, ಬಿಳಿ ಮತ್ತು ನೀಲಿ ಬಾವುಟಗಳನ್ನು ಬೀಸಿ ಘೋಷಣೆ ಕೂಗಿದ್ದಾರೆ.

ಭಾರತೀಯ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಅವಿಜಿತ್ ಘೋಷ್ ಅವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು 927 ಮತಗಳಿಂದ ಸೋಲಿಸಿ ಉಪಾಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ. ಶರ್ಮಾ ಅವರ 1,482 ಮತಗಳ ವಿರುದ್ಧ ಘೋಷ್ ಅವರು 2,409 ಮತಗಳನ್ನು ಪಡೆದರು.
ಎಡಪಕ್ಷಗಳ ಬೆಂಬಲಿತ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿಗಳ ಸಂಘದ (ಬಾಪ್ಸಾ) ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು 926 ಮತಗಳಿಂದ ಸೋಲಿಸುವ ಮೂಲಕ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಗೆದ್ದಿದ್ದಾರೆ. ಆರ್ಯ 2,887 ಮತಗಳನ್ನು ಪಡೆದರೆ, ಆನಂದ್ 1961 ಮತಗಳನ್ನು ಪಡೆದರು.

ತನ್ನ ಅಭ್ಯರ್ಥಿ ಸ್ವಾತಿ ಸಿಂಗ್ ಅವರ ಉಮೇದುವಾರಿಕೆಯನ್ನು ಎಬಿವಿಪಿ ಪ್ರಶ್ನಿಸಿ, ಚುನಾವಣಾ ಸಮಿತಿಯು ನಾಮನಿರ್ದೇಶನವನ್ನು ರದ್ದುಗೊಳಿಸಿದ ನಂತರ ಯುನೈಟೆಡ್ ಲೆಫ್ಟ್ ಆರ್ಯ ಅವರಿಗೆ ಬೆಂಬಲವನ್ನು ನೀಡಿತು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಡಪಕ್ಷಗಳ ಮೊಹಮ್ಮದ್ ಸಾಜಿದ್ ಅವರು ಎಬಿವಿಪಿಯ ಗೋವಿಂದ ಡಾಂಗಿ ಅವರನ್ನು 508 ಮತಗಳಿಂದ ಸೋಲಿಸಿದರು. ಎಲ್ಲಾ ನಾಲ್ಕು ವಿಜೇತರಲ್ಲಿ ಅವರದು ಅತ್ಯಂತ ಕಡಿಮೆ ಅಂತರದ ಗೆಲುವು ಆಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ತಮಿಳುನಾಡು ಸಚಿವರ ವಿರುದ್ಧ ಪ್ರಕರಣ ದಾಖಲು

AISA, ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (DSF), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (AISF) ಒಗ್ಗಟ್ಟಾಗಿ  ಯುನೈಟೆಡ್ ಲೆಫ್ಟ್  ಗುಂಪು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಶುಕ್ರವಾರ ನಡೆದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಳೆದ 12 ವರ್ಷಗಳಲ್ಲೇ ಅತಿ ಹೆಚ್ಚು ಶೇ.73ರಷ್ಟು ಮತದಾನವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ