ದೆಹಲಿ: ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇದ್ದಕ್ಕಿದ್ದಂತೆ ಹಾಸ್ಟೆಲ್ ಶುಲ್ಕ ಏರಿಕೆ ವಿರೋಧಿಸಿ ವಿದ್ಯಾರ್ಥಿಗಳು ಬಹಳ ದಿನದಿಂದ ಪ್ರತಿಭಟನೆ ನಡೆಸ್ತಿದ್ದಾರೆ. ಜೆಎನ್ಯುನಲ್ಲಿ ನಡೆದಿದ್ದ ಪದವಿ ಪ್ರದಾನ ಸಮಾರಂಭಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಿದ್ದ ವೇಳೆ, ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಆದ್ರೆ, ಜೆಎನ್ಯು ಆಡಳಿತ ಮಂಡಳಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಇದ್ರಿಂದ ಆಕ್ರೋಶಗೊಂಡ ಜೆಎನ್ಯು ವಿದ್ಯಾರ್ಥಿ ಸಂಘ ಸೋಮವಾರ ಸಂಸದರನ್ನ ಭೇಟಿ ಮಾಡಲು ಮುಂದಾಗಿದೆ. ಆದ್ರೆ, ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಇದ್ರಿಂದ ಲುಟೆನ್ಸ್ ದೆಹಲಿ ರಸ್ತೆಗಳು ರಣಾಂಗಣವಾಗಿ ಪರಿವರ್ತಿತವಾಯಿತು.
ರಣಾಂಗಣವಾಗಿ ಬದಲಾದ ಲುಟೆನ್ಸ್ ದೆಹಲಿಯ ರಸ್ತೆಗಳು!
ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜೆಎನ್ಯು ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಆವರಣದಿಂದ ಸಂಸತ್ವರೆಗೆ ಜಾಥಾ ನಡೆಸಿದ್ದಾರೆ. ವಿದ್ಯಾರ್ಥಿಗಳು ಜಾಥಾ ನಡೆಸ್ತಾರೆ ಅಂತಾ ಗೊತ್ತಾಗಿ, ದೆಹಲಿ ಪೊಲೀಸರು ಜಾಥಾ ಸಾಗುವ ರಸ್ತೆಗಳ ಉದ್ದಕ್ಕೂ ಬ್ಯಾರಿಕೇಡ್ಗಳನ್ನ ಹಾಕಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ.
ಆದ್ರೆ, ವಿದ್ಯಾರ್ಥಿಗಳು ಸಫ್ದರ್ಜಂಗ್ ಸಮಾಧಿ ಬಳಿ ಬಂದಿದ್ದಾರೆ. ಆಗ ಪೊಲೀಸರು ಸಂಸತ್ ಕಡೆ ತೆರಳದಂತೆ ತಡೆಯೊಡ್ಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಜೊತೆ ಘರ್ಷಣೆ ನಡಿದಿದ್ದು, ಜೆಎನ್ಯು ಅಧ್ಯಕ್ಷ ಐಶೆ ಘೋಷ್ ಸೇರಿ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಾವಾಗ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಕೆಲವು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದ್ರೋ, ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆ ಒಡೀತು. ಸಂಸತ್ಗೆ ತೆರಳುವ ಮಾರ್ಗದಲ್ಲೇ ಧರಣಿ ಆರಂಭಿಸಿದ್ರು. ಇದ್ರಿಂದ ಲುಟೆನ್ಸ್ ದೆಹಲಿ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯ್ತು. ಕೊನೆಗೆ ಸೋಮವಾರ ರಾತ್ರಿ 7.30ರ ವೇಳೆಗೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಚದುರಿಸಿದ್ರು.
ಜೆಎನ್ಯು ವಿದ್ಯಾರ್ಥಿಗಳು ಹಾಸ್ಟೆಲ್ ಶುಲ್ಕ ಏರಿಕೆಯನ್ನ ವಿರೋಧಿಸಿ ಮತ್ತಷ್ಟು ದಿನ ಪ್ರತಿಭಟನೆ ನಡೆಸೋ ಸಾಧ್ಯತೆ ಇದೆ. ಇದರ ನಡುವೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಭೇಟಿ ನೀಡಿ ಜೆಎನ್ಯು ವಿದ್ಯಾರ್ಥಿಗಳ ನಿಯೋಗ ತಮ್ಮ ಬೇಡಿಕೆ ಪಟ್ಟಿಯನ್ನ ಸಲ್ಲಿಸಿದೆ. ಇದಾದ ಬಳಿಕ ಪ್ರತಿಭಟನಾನಿರತ ವಿದ್ಯಾರ್ಥಿಗಳು ಜೆಎನ್ಯು ಕ್ಯಾಂಪಸ್ಗೆ ಮರಳಿದ್ದಾರೆ.
Published On - 2:43 pm, Tue, 19 November 19