Joshimath: ಜೋಶಿಮಠದಲ್ಲಿ ಮೂರು ದಿನಗಳಿಂದ ಬಿರುಕು ಹೆಚ್ಚಾಗಿಲ್ಲ; ವಿಪತ್ತು ನಿರ್ವಹಣಾ ಕಾರ್ಯದರ್ಶಿ

|

Updated on: Jan 21, 2023 | 11:30 AM

ಜೋಶಿಮಠದಲ್ಲಿ ಕಳೆದ ಮೂರು ದಿನಗಳಿಂದ ಬಿರುಕು ಹೆಚ್ಚಾಗಿಲ್ಲ ಎಂಬುದು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ ಅಳವಡಿಸಿರುವ ಗೇಜ್ ಮೀಟರ್​ಗಳಿಂದ ತಿಳಿದುಬಂದಿದೆ.

Joshimath: ಜೋಶಿಮಠದಲ್ಲಿ ಮೂರು ದಿನಗಳಿಂದ ಬಿರುಕು ಹೆಚ್ಚಾಗಿಲ್ಲ; ವಿಪತ್ತು ನಿರ್ವಹಣಾ ಕಾರ್ಯದರ್ಶಿ
ಜೋಶಿಮಠದ ಮನೆಗಳಲ್ಲಿ ಬಿರುಕು (ಸಂಗ್ರಹ ಚಿತ್ರ)
Image Credit source: Twitter
Follow us on

ಜೋಶಿಮಠ: ಕಳೆದ ಹಲವು ದಿನಗಳಿಂದ ಭೂ ಕೂಸಿತದ ಭೀತಿ ಎದುರಿಸುತ್ತಿರುವ ಉತ್ತರಾಖಂಡದ (Uttarakhand) ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ (Joshimath) ಸದ್ಯ ಪರಿಸ್ಥಿತಿ ಉತ್ತಮಗೊಂಡಿದೆ. ಕಳೆದ ಮೂರು ದಿನಗಳಿಂದ ಬಿರುಕು ಹೆಚ್ಚಾಗಿಲ್ಲ ಎಂಬುದು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ ಅಳವಡಿಸಿರುವ ಗೇಜ್ ಮೀಟರ್​ಗಳಿಂದ ತಿಳಿದುಬಂದಿದೆ ಎಂದು ‘ಎಎನ್​ಐ’ ಸುದ್ದಿಸಂಸ್ಥೆ ವರದಿ ಮಾಡಿದೆ. ‘ಕಳೆದ ಮೂರು ದಿನಗಳಿಂದ ಜೋಶಿಮಠದ ಕಟ್ಟಡಗಳಲ್ಲಿ ಬಿರುಕು ಹೆಚ್ಚಾಗಿಲ್ಲ. ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ ಅಳವಡಿಸಿರುವ ಮೀಟರ್​ಗಳಿಂದ ಇದು ದೃಢಪಟ್ಟಿದೆ. ಇದು ಸಕಾರಾತ್ಮಕ ಬೆಳವಣಿಗೆ’ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಡಾ. ರಂಜಿತ್ ಕುಮಾರ್ ಸಿನ್ಹಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಹಣಕಾಸು ಕಾರ್ಯದರ್ಶಿ, ನಗರಾಭಿವೃದ್ಧಿ ಕಾರ್ಯದರ್ಶಿಗಳ ಸಭೆ ನಡೆಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಏಜೆನ್ಸಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾರ್ಯವನ್ನು ಕ್ಷಿಪ್ರವಾಗಿ ಮಾಡಬೇಕು ಎಂದು ಅವರು (ಸಿಎಂ ಧಾಮಿ) ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಜೋಶಿಮಠದಲ್ಲಿ ವಿಪತ್ತು ನಿರ್ವಹಣೆ ಕಾಮಗಾರಿಗೆ ಹಣದ ಕೊರತೆಯಾಗದು ಎಂದೂ ಅವರು ಭರವಸೆ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆಗೆ ಪ್ರತಿ ಜಿಲ್ಲೆಯಲ್ಲಿ ಪರಿಣಾಮಕಾರಿ ನಗರ ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಬೆಟ್ಟ ಪ್ರದೇಶದ ಪಟ್ಟಣಗಳಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ ಎಂಬುದಾಗಿ ರಂಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ: Sinking Joshimath: ಉತ್ತರಾಖಂಡದ ಜೋಶಿಮಠ ಭೂಕುಸಿತಕ್ಕೆ ಕಾರಣವೇನು? ಇಲ್ಲಿದೆ ವಿವರ

ಬದರಿನಾಥದ ಹೆಬ್ಬಾಗಿಲು ಎಂದೇ ಪ್ರಸಿದ್ಧಿ ಪಡೆದಿರುವ ಜೋಶಿಮಠದಲ್ಲಿ ಕೆಲವು ದಿನಗಳ ಹಿಂದೆ ಭೂಮಿ ಬಿರುಕುಬಿಡಲು ಆರಂಭವಾಗಿತ್ತು. ಮನೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಶುರುವಾಗಿತ್ತು. ಕೇವಲ 12 ದಿನಗಳಲ್ಲಿ ಭೂಮಿ 5.4 ಸೆಂ.ಮೀನಷ್ಟು ಬಿರುಕು ಬಿಟ್ಟಿದೆ ಎಂಬ ಮಾಹಿತಿ ಇಸ್ರೋದ ಅಧ್ಯಯನದಿಂದ ಬಹಿರಂಗಗೊಂಡಿತ್ತು. ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಜೋಶಿಮಠ ನಗರದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Sat, 21 January 23