ಕೋಲ್ಕತ್ತ: ಪಂಚರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಗಳ ಮತಬೇಟೆ ಪ್ರಯತ್ನಗಳು ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಇಂದು (ಫೆ.6) ‘ಪರಿವರ್ತನಾ ಯಾತ್ರೆ’ಗೆ (Parivartan Yatra) ಚಾಲನೆ ನೀಡಲಿದ್ದಾರೆ. ನದಿಯಾ ಜಿಲ್ಲೆ ನವದ್ವಿಪ್ನ ಶ್ರೀ ಶ್ರೀ ಗೌರಂಗ ಜನ್ಮಸ್ಥಾನ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಪರಿವರ್ತನಾ ಯಾತ್ರೆಗೆ ಹಸಿರು ನಿಶಾನೆ ತೋರಲಿದ್ದಾರೆ.
ಕೊವಿಡ್-19 ನಡುವೆ ಪರಿವರ್ತನಾ ಯಾತ್ರೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಕೋಲ್ಕತ್ತ ಹೈಕೋರ್ಟ್ನಲ್ಲಿದೆ. ಆದರೆ, ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾರಂಭ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಪರಿವರ್ತನಾ ಯಾತ್ರೆ ಉದ್ಘಾಟನೆಗೊಳ್ಳಲಿದೆ.
ರಾಜ್ಯ ಸರ್ಕಾರವು ಪರಿವರ್ತನಾ ಯಾತ್ರೆಗೆ ಅನುಮತಿ ನೀಡದೇ ಇದ್ದರೂ, ಯಾತ್ರೆಯನ್ನು ನಡೆಸುವಂತೆ ಪಕ್ಷದ ವರಿಷ್ಠರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಯಾತ್ರೆ ಕೈಗೊಳ್ಳಲು ಪೂರ್ಣ ಒಪ್ಪಿಗೆ ಸಿಗದೇ ಇದ್ದರೂ, ಯಾತ್ರೆ ನಡೆಸುವ ವಿಚಾರವಾಗಿ ಸಲ್ಲಿಸಿರುವ ಅರ್ಜಿ ತಿರಸ್ಕೃತವಾಗಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ಐದು ಸಂಘಟನಾ ವಲಯಗಳಿಂದ ಯಾತ್ರೆ ನಡೆಸಲು ಪಶ್ಚಿಮ ಬಂಗಾಳ ಬಿಜೆಪಿ ಯೋಜನೆ ಹಾಕಿಕೊಂಡಿದೆ. ಫೆ. 11ರಂದು ಪಶ್ಚಿಮ ಬಂಗಾಳದ ಕೂಚ್ ಬೆಹರ್ನಲ್ಲಿ ನಡೆಯುವ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ. ಕಾನೂನು ತೊಡಕುಗಳನ್ನು ಮೀರಿ, ಬಿಜೆಪಿ ಪರಿವರ್ತನಾ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ರಾಜ್ಯದ 5 ವಿವಿಧ ಪ್ರದೇಶಗಳಲ್ಲಿ ಪರಿವರ್ತನಾ ಯಾತ್ರೆಗಳನ್ನು ಬಿಜೆಪಿ ಕೈಗೊಳ್ಳಲಿದೆ. ಯಾತ್ರೆಗೆ ಸಂಬಂಧಿಸಿ 5 ರಥಗಳು ಸಂಚಾರ ನಡೆಸಲಿವೆ.
ತೃಣಮೂಲ ಕಾಂಗ್ರೆಸ್ನಿಂದ (ಟಿಎಂಸಿ) ‘ಜನಸಮರ್ಥನ್ ಯಾತ್ರ’
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಕೈಗೊಂಡಿರುವ ಬೆನ್ನಲ್ಲೇ, ತೃಣಮೂಲ ಯುವ ಕಾಂಗ್ರೆಸ್ ಸಂಘಟನೆ ಜನಸಮರ್ಥನ್ ಯಾತ್ರೆ ನಡೆಸಲು ತೀರ್ಮಾನಿಸಿದೆ. ಎರಡು ದಿನಗಳ ಜನಸಮರ್ಥನ್ ಯಾತ್ರೆ ಇಂದು ಮತ್ತು ನಾಳೆ (ಫೆ.6,7) ನಡೆಯಲಿದೆ. ಸಾವಿರಾರು ಬೈಕ್ಗಳಲ್ಲಿ ತೃಣಮೂಲ ಯುವ ಕಾಂಗ್ರೆಸ್ ಸದಸ್ಯರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆ ನಡೆಸಲು ಉದ್ದೇಶಿಸಿರುವ ನದಿಯಾ ಜಿಲ್ಲೆಯಲ್ಲೇ ಟಿಎಂಸಿ ಬೈಕ್ ಯಾತ್ರೆ ಕೈಗೊಳ್ಳಲಿದೆ. ಎರಡೂ ಪಕ್ಷಗಳು ಒಂದೇ ದಿನ, ಒಂದೇ ಸಮಯಕ್ಕೆ, ಒಂದೇ ಕಡೆಯಲ್ಲಿ ಯಾತ್ರೆ ಕೈಗೊಂಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಉಭಯ ಪಕ್ಷಗಳ ಯಾತ್ರೆಗಳು ಒಂದೇ ಮಾರ್ಗದಲ್ಲಿ ಸಂಧಿಸಲಿದೆಯಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?
Published On - 1:11 pm, Sat, 6 February 21