ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?

ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?
ಪಶ್ಚಿಮ ಬಂಗಾಳ ಚುನಾವಣಾ ಕಣ

ಒಂದೆಡೆ ತನ್ನ ಪ್ರಭಾವವಲಯ ವಿಸ್ತರಿಸಲು ಕಾಯುತ್ತಿರುವ ಬಿಜೆಪಿ. ಮತ್ತೊಂದೆಡೆ ಚೇತರಿಕೆ ಕಾಣಲು ಹವಣಿಸುತ್ತಿರುವ ಕಾಂಗ್ರೆಸ್. ಈ ನಡುವೆ, ಗೆದ್ದೇ ಗೆಲ್ಲುವೆವು ಎಂಬ ಪ್ರಾದೇಶಿಕ ಪಕ್ಷಗಳು. 2021ರಲ್ಲಿ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ತಂತ್ರ-ಪ್ರತಿತಂತ್ರಗಳೇನು? ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ?

ganapathi bhat

|

Feb 24, 2021 | 8:02 PM

ಕೊರೊನಾ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ದೇಶ ಈ ವರ್ಷ ಸಾಲುಸಾಲು ವಿಧಾನಸಭಾ ಚುನಾವಣೆಗಳಿಗೂ ಸಾಕ್ಷಿಯಾಗಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಗಳು ವ್ಯಕ್ತವಾಗಿವೆ.

ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಳ್ಳಲು, ಸಾಧ್ಯವಾದ ಎಲ್ಲ ಕಡೆ ಅಧಿಕಾರ ಹಿಡಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಚುನಾವಣೆಯ ಬಗ್ಗೆ ನಿರಾಸಕ್ತಿ ವಹಿಸಿರುವಂತೆ ವರ್ತಿಸುತ್ತಿರುವ ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಸೋಲನ್ನೇ ಹಿಂಬಾಲಿಸಿದಂತೆ ನಡೆಯುತ್ತಿದೆ. ಪ್ರಾದೇಶಿಕ ಪಕ್ಷಗಳು ಬಲವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕರಾಮತ್ತು ಪ್ರದರ್ಶಿಸಬಹುದೇ ಎಂದು ಕುತೂಹಲ ಹುಟ್ಟಿಕೊಂಡಿದೆ. ಯಾವ ಚುನಾವಣಾ ತಂತ್ರಗಳಿಂದ ಯಾರಿಗೆ ಲಾಭ ಎಂಬ ಲೆಕ್ಕಾಚಾರ ಚುನಾವಣೆಯ ನಿಯೋಜಿತ ದಿನಾಂಕ ಸಮೀಪಿಸುತ್ತಿರುವಂತೆ ಹೆಚ್ಚಾಗುತ್ತಿದೆ.

ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿ ಸದ್ಯ ಬೇರೆಬೇರೆ ಪಕ್ಷಗಳು ಆಡಳಿತ ನಡೆಸುತ್ತಿವೆ ಎನ್ನುವುದು ಗಮನಾರ್ಹ ಸಂಗತಿ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಮತ್ತು ಪುದುಚೆರಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿದೆ. ಕೇರಳದಲ್ಲಿ ಎಲ್​ಡಿಎಫ್, ತಮಿಳುನಾಡಿನಲ್ಲಿ ಎಐಡಿಎಂ​ಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವಿದೆ. ಅಸ್ಸಾಂ ಹಾಗೂ ಪುದುಚೆರಿ ಹೊರತುಪಡಿಸಿ ಉಳಿದ ಮೂರು ರಾಜ್ಯಗಳಲ್ಲೂ ಪ್ರಬಲ ಪ್ರಾದೇಶಿಕ ಪಕ್ಷಗಳ ಸರ್ಕಾರಗಳಿವೆ.

ಈ ಅಂಶಗಳನ್ನು ಗಮನಿಸಿದರೆ, ಅಸ್ಸಾಂ ಹೊರತುಪಡಿಸಿ ಉಳಿದ ಅಷ್ಟೂ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಪಕ್ಷಗಳೇ ಆಡಳಿತದಲ್ಲಿರುವುದು ಕಂಡುಬರುತ್ತದೆ. ರಾಷ್ಟ್ರೀಯ ಪಕ್ಷಗಳ ಮತಗಳಿಕೆಯನ್ನು ಗಮನಾರ್ಹ ಪ್ರಮಾಣದಲ್ಲಿ ಪ್ರಭಾವಿಸಬಲ್ಲ ಪರ್ಯಾಯ ಪಡೆಗಳು ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿವೆ. ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಗೆ ಈ ಚುನಾವಣೆಯ ಗೆಲುವು ದೊಡ್ಡ ಸವಾಲಾಗಿ ಪರಿಣಮಿಸಿದೆ. ತನ್ನ ಪ್ರಭಾ ವಲಯ ವಿಸ್ತರಿಸಲು ಬಯಸುತ್ತಿರುವ ಭಾರತೀಯ ಜನತಾ ಪಾರ್ಟಿಗೆ ಗೆಲುವು ಅನಿವಾರ್ಯ . ಅದಕ್ಕೆ ತಕ್ಕಂತೆ ಬಿಜೆಪಿ ಪಕ್ಷವು ಚುನಾವಣಾ ತಯಾರಿಯಲ್ಲಿ ಭರ್ಜರಿಯಾಗಿ ತೊಡಗಿಕೊಂಡಿದೆ.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ: ಕಮಲ ಪಕ್ಷದ ಘೋಷಣೆ

ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಡಿಎಂಕೆ ನಾಯಕ ಸ್ಟಾಲಿನ್

ಕೇರಳ ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಬಲಾಬಲ ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಪುದುಚೆರಿಯ ರಾಜಕಾರಣದ ವರಸೆಗಳು ವಿಭಿನ್ನ. ಕೇರಳ ಹಾಗೂ ತಮಿಳುನಾಡಿನಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳು ರಾಜಕೀಯ ದಾಳದಾಟದಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಕೇರಳದಲ್ಲಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್​ಡಿಎಫ್) ಹಾಗೂ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್​) ಹೆಸರಲ್ಲಿ ಹಲವು ಪಕ್ಷಗಳು ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸುತ್ತವೆ. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಡಿಎಂ​ಕೆ ಮತ್ತು ಪ್ರಭಾವಿ ವಿರೋಧ ಪಕ್ಷ ಡಿಎಂ​ಕೆ ಸಮಬಲ ಹೊಂದಿವೆ. ಪುದುಚೆರಿಯ ಪರಿಸ್ಥಿತಿ ತಮಿಳುನಾಡಿಗಿಂತ ಬಹಳ ಭಿನ್ನವೇನಲ್ಲ.

ರಾಜಕೀಯ ಬಲಾಬಲ ಹಂಚಿಹೋಗಿರುವ ಮತ್ತು ಏನೇ ಆದರೂ ಬಿಜೆಪಿಗೆ ಕಡಿವಾಣ ಹಾಕಲೇಬೇಕೆಂಬ ಹಟದಲ್ಲಿರುವ ಪ್ರಭಾವಿ ರಾಜಕೀಯ ಪಕ್ಷಗಳನ್ನು ಎದುರಿಸಿ, ಈ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಹರಸಾಹಸ ಮಾಡುತ್ತಿದೆ. ಸ್ಥಳೀಯ ಪಕ್ಷಗಳ ಜೊತೆ ಗೆಳೆತನಕ್ಕೆ ಮುಂದಾಗಿದೆ.  ತಮಿಳುನಾಡಿನಲ್ಲಿ ಬಿಜೆಪಿಯು ಎಐಎಡಿಎಂ​ಕೆ ಮೈತ್ರಿಯೊಂದಿಗೆ ಚುನಾವಣಾ ಕಣಕ್ಕಿಳಿಯಲಿದೆ ಎಂದು ಮಧುರೈನಲ್ಲಿ (ಜ.31) ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ ನೀಡಿದ್ದಾರೆ.

ದಕ್ಷಿಣದ ರಾಜ್ಯಗಳ ಪರಿಸ್ಥಿತಿಗೆ ಹೋಲಿಸಿದರೆ ಈಗಾಗಲೇ ತನ್ನ ತೆಕ್ಕೆಯಲ್ಲಿರುವ ಅಸ್ಸಾಂನಲ್ಲಿ ಮತ್ತೆ ಗದ್ದುಗೆ ಏರುವುದು ಬಿಜೆಪಿಗೆ ಸುಲಭ. ಉತ್ತರದ ರಾಜ್ಯಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಪ್ರಭಾವ ವಿಸ್ತರಿಸಿಕೊಂಡಿರುವ ಬಿಜೆಪಿ ಇದೀಗ ಈಶಾನ್ಯ ರಾಜ್ಯಗಳೆಡೆಗೆ ಕಣ್ಣಿಟ್ಟಿರುವುದು ಸುಸ್ಪಷ್ಟ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಚುನಾವಣೆಯನ್ನು ಬಿಜೆಪಿ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗಿ ಕಾಣಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ಪ್ರಬಲವಾಗಿರುವುದು ಒಂದೇ ಪಕ್ಷ. ನಾಲ್ಕಾರು ಪಕ್ಷಗಳ ಕಣ್ಣಾಮುಚ್ಚಾಲೆ ಆಟಗಳಿಗೂ ಅಲ್ಲಿ ಬಲವಿಲ್ಲ. ಈ ಬಾರಿಯ ಬಜೆಟ್​ನಲ್ಲಿ ಪಶ್ಚಿಮ ಬಂಗಾಳಕ್ಕೆ ಭರಪೂರ ಕೊಡುಗೆ ಘೋಷಿಸಿರುವ ಬಿಜೆಪಿ, ರಾಜ್ಯವನ್ನು ಬಂಗಾರದ ಬಂಗಾಳ (ಸೋನಾರ್ ಬಾಂಗ್ಲಾ) ಮಾಡುತ್ತೇವೆ ಎಂದು ಘೋಷಿಸಿಕೊಂಡಿದೆ. ದೀದಿಯನ್ನು (ಮಮತಾ ಬ್ಯಾನರ್ಜಿ) ಮನೆಗೆ ಕಳಿಸುವ ಸಂಕಲ್ಪ ಮಾಡಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಸದ್ದಿಲ್ಲದೆ ತಯಾರಾಗುತ್ತಿದೆ ಬಿಜೆಪಿ ಪ್ರಣಾಳಿಕೆ

ಕೇರಳ ಮುಖ್ಯಮಂತ್ರಿ ಪಿಣರಯಿ ವಿಜಯನ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ, ದೀದಿ ವಿರುದ್ಧ ಪ್ರತಿಷ್ಠೆಯ ಕಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಒಂದನ್ನು ಬಗ್ಗುಬಡಿದರೆ ಬಿಜೆಪಿಗೆ ಮತ್ತೊಂದು ಎದುರಾಳಿಯ ಆತಂಕವಿಲ್ಲ. ಟಿಎಂಸಿ ಪಕ್ಷ ಮತ್ತು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಮೇಲೆ ಗುರಿ ಇಟ್ಟರೆ ಆಚೀಚೆಗೆ ನೋಡಬೇಕಾದ್ದಿಲ್ಲ. ಒಂದು ದಾಳ ಉರುಳಿಸುವತ್ತ ಸಂಘಟಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾದ್ದು ಬಿಜೆಪಿ. ಅದೇ ಕಾರಣದಿಂದ ಬಿಜೆಪಿ ಅತ್ತಕಡೆಗೇ ಹೆಚ್ಚು ಗಮನವಹಿಸಿದಂತೆ ಕಾಣುತ್ತದೆ. ಬಿಜೆಪಿ, ದೀದಿಯನ್ನು (ಮಮತಾ ಬ್ಯಾನರ್ಜಿ) ಗುರಿಯಾಗಿಸಿ ಪದೇ ಪದೇ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ-ಟಿಎಂಸಿ ನೇರ ಜಿದ್ದಾಜಿದ್ದಿ ಇರುವುದು ಖಚಿತವಾಗಿದೆ. ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವೂ ಆಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ನಿಯಮಿತವಾಗಿ ಪ್ರವಾಸ ಕೈಗೊಂಡಿದ್ದರು, ಕೈಗೊಳ್ಳುತ್ತಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಹಿತ ಹಲವು ಬಿಜೆಪಿ ನಾಯಕರು ಪಶ್ಚಿಮ ಬಂಗಾಳದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಟಿಎಂಸಿ ನಾಯಕ ಸುವೇಂದು ಅಧಿಕಾರಿ, 10 ಶಾಸಕರು, ಮತ್ತಿತರರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಕಾರಣಗಳಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣಾ ಕಣ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಮುಖ ಆಕರ್ಷಣೆಯಾಗಿದೆ.

ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ಜ.30ರಂದು ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಉಭಯ ರಾಜ್ಯಗಳ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಲೋಕ ಜನಶಕ್ತಿ ಪಕ್ಷ (LJP) ನಿರ್ಧರಿಸಿದೆ. ಈ ಬಗ್ಗೆ, ಎಲ್‌ಜೆಪಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಲೀಕ್ ಹೇಳಿಕೆ ನೀಡಿದ್ದಾರೆ. ಪಕ್ಷ ಸಂಘಟನೆ ಹಾಗೂ ವಿಸ್ತರಣೆಗೆ ಈ ನಡೆ ಸಹಾಯವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ರಂಗೇರಿರುವ ರಾಜಕೀಯಕ್ಕೆ, ಚಿರಾಗ್ ಪಾಸ್ವಾನ್ ನಾಯಕತ್ವದ ಎಲ್​ಜೆಪಿ ಕಾಲಿಟ್ಟಿದೆ. ಈ ಮೂಲಕ, ಬಿಹಾರ ಮಾದರಿಯ ಚುನಾವಣಾ ತಂತ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಪ್ರಯೋಗವಾಗುವ ಸೂಚನೆ ಲಭ್ಯವಾಗಿದೆ.

ಇದನ್ನೂ ಓದಿ: ದೀದಿ-ಶಾ ಗುದ್ದಾಟ, ಪಶ್ಚಿಮ ಬಂಗಾಳದಲ್ಲಿ ಎರಡನೇ ದಿನ ಅಮಿತ್ ಶಾ ಪ್ರವಾಸ

ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ

ಏನಿದು ಬಿಹಾರ ಮಾದರಿ? ಬಿಹಾರದಲ್ಲಿ ಎಲ್​ಜೆಪಿ ಪಾತ್ರವೇನಿತ್ತು? 2020ರ ಅಕ್ಟೋಬರ್​ನಲ್ಲಿ ನಡೆದ ಬಿಹಾರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (LJP) ಪೂರ್ಣ 243 ಕ್ಷೇತ್ರಗಳಲ್ಲಿ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿತ್ತು. ಸ್ಪರ್ಧಿಸಿದ್ದ 27 ಕ್ಷೇತ್ರಗಳಲ್ಲಿ ಜೆಡಿಯು ಸೋತ ಮತಗಳ ಸಂಖ್ಯೆ ಹಾಗೂ ಎಲ್​ಜೆಪಿ ಪಡೆದ ಮತಗಳ ಸಂಖ್ಯೆ ಸರಿಸುಮಾರಾಗಿ ಸಮಾನಾಗಿತ್ತು. ಈ ಮೂಲಕ, ಜೆಡಿಯು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಎಲ್​ಜೆಪಿ ತೊಡರುಗಾಲು ಕೊಟ್ಟಿತ್ತು. ಮಹಾಘಟಬಂಧನ್ ಹೆಚ್ಚು ಸ್ಥಾನ ಗೆಲ್ಲಲು ಕೂಡ ಇದರಿಂದ ಸಾಧ್ಯವಾಯಿತು ಎಂಬ ಮಾತುಗಳು ಕೇಳಿಬಂದಿತ್ತು. ಕಡಿಮೆ ಕ್ಷೇತ್ರಗಳನ್ನು ಗೆದ್ದ ಕಾರಣ, ಜೆಡಿಯು ಬಿಜೆಪಿ ಸಹಾಯ ಪಡೆದು ಅಧಿಕಾರಕ್ಕೇರುವಂತಾಯಿತು. ಆರ್​ಜೆಡಿ ಹೆಚ್ಚು ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದ ಸ್ಥಾನ ಪಡೆಯಿತು.

ಕಿಂಗ್ ಮೇಕರ್ ಆಗುತ್ತೇನೆ ಎಂದು ಹೊರಟಿದ್ದ ಎಲ್​ಜೆಪಿ, ಗೆಲುವು ಸಾಧಿಸಿದ್ದು ಕೇವಲ ಒಂದು ಕ್ಷೇತ್ರದಲ್ಲಿ. ಆದರೆ, ಮತ ಎಣಿಕೆ ಬಳಿಕ ಎಲ್​ಜೆಪಿ, ಬಿಹಾರದ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವಷ್ಟು ಸಾಮರ್ಥ್ಯ ಮೆರೆದದ್ದು ಖಚಿತವಾಯಿತು. ಒಂದು ವೇಳೆ, ಎಲ್​ಜೆಪಿ ಸ್ಪರ್ಧಿಸದಿದ್ದರೆ ಜೆಡಿಯು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿತ್ತೇ ಎಂಬ ಪ್ರಶ್ನೆಗಳೂ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಜೆಡಿಯು ಮತಗಳನ್ನು ಕಸಿದು, ಪಕ್ಷದ ಬಲ ಕಡಿಮೆ ಮಾಡಿ, ಮೈತ್ರಿ ಸರ್ಕಾರದ ಜುಟ್ಟು ಬಿಜೆಪಿ ಕೈ ಸೇರುವಂತೆ ಮಾಡುವಲ್ಲಿ ಎಲ್​ಜೆಪಿ ಗಮನಾರ್ಹ ಪಾತ್ರ ನಿರ್ವಹಿಸಿತು ಎಂಬ ಮಾತುಗಳು ಕೇಳಿಬಂದವು.

ಇದನ್ನೂ ಓದಿ: ಚುನಾವಣಾ ಟೆನ್ಷನ್​ ಮರೆತು ನೃತ್ಯ ಮಾಡಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಪ್ರವಾಸ (ಸಂಗ್ರಹ ಚಿತ್ರ)

ಪಶ್ಚಿಮ ಬಂಗಾಳದಲ್ಲಿ ಎಲ್​ಜೆಪಿ ಏನು ಮಾಡಬಹುದು? ಈವರೆಗೂ ಕಮ್ಯುನಿಸ್ಟರ ಪ್ರಾಬಲ್ಯ ಹೊಂದಿದ್ದ ಪಶ್ಚಿಮ ಬಂಗಾಳ ಪ್ರದೇಶದಲ್ಲಿ ಜಾತಿ ರಾಜಕಾರಣಕ್ಕೆ ಅವಕಾಶ ಕಡಿಮೆ. ಆದರೆ, ಬುಡಕಟ್ಟು ಜನಾಂಗಗಳು, ಸಣ್ಣ ಸಮುದಾಯಗಳನ್ನು ಕೇಂದ್ರೀಕರಿಸಿ ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆಯನ್ನು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತೋರುತ್ತಿದೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಭೇಟಿ ಸಂದರ್ಭದಲ್ಲಿ ಬುಡಕಟ್ಟು ಜನಾಂಗವನ್ನು ಉದ್ದೇಶಿಸಿ ಭಾಷಣ ಮಾಡುವುದು. ಬೋಡೊಲ್ಯಾಂಡ್ ಟೆರಿಟೊರಿಯಲ್ ಒಪ್ಪಂದದ ಬಗ್ಗೆ ಉಲ್ಲೇಖಿಸುವುದು. ಬುಡಕಟ್ಟು ಜನಾಂಗದವರ ಮನೆಯಲ್ಲಿ ಊಟ ಮಾಡುವುದು, ರೈತ ಸಮುದಾಯವನ್ನು ಒಗ್ಗೂಡಿಸುವುದು ಮುಂತಾದ ಪ್ರಯತ್ನಗಳು ನಡೆಯುತ್ತಲೇ ಇದೆ.

ಮೊನ್ನೆ (ಜ.29)ರಂದು ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಬಾಂಬ್ ಸ್ಪೋಟವಾಗದಿದ್ದರೆ ಜ 30, 31ರಂದು ಕೂಡ ಅಮಿತ್ ಶಾ ಬಂಗಾಳ ಪ್ರವಾಸದಲ್ಲಿ ಇರಬೇಕಿತ್ತು. ಮಟುವಾ ಸಮುದಾಯದ ಜನರನ್ನು ಭೇಟಿಯಾಗಬೇಕಿತ್ತು. ಹೀಗೆ ಸಣ್ಣ ಸಮುದಾಯಗಳನ್ನು ಸಂಘಟಿಸುವ ಕೆಲಸಕ್ಕೆ ಬಿಜೆಪಿ ಹೆಚ್ಚು ಒತ್ತು ನೀಡುತ್ತಿದೆ.

ಒಂದು ವೇಳೆ ಈ ತಂತ್ರ ಬಿಜೆಪಿಗೆ ಮುಳುವಾದರೆ, ನಿರೀಕ್ಷಿತ ಮತ ಪಡೆಯಲು ಅಸಾಧ್ಯವಾದರೆ ಎಂಬ ಸಾಧ್ಯತೆಯೂ ಬಿಜೆಪಿ ಕಣ್ಣಮುಂದಿದೆ. ಈ ಕಾರಣಕ್ಕಾಗಿ, ಪರೋಕ್ಷ ಮೈತ್ರಿಯಲ್ಲಿ ಇರುವ ಎಲ್​ಜೆಪಿ ಮೂಲಕ ಸಾಧ್ಯವಾದಷ್ಟು ಮತ ಒಡೆಯುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿರಬಹುದು. ಎಡಪಕ್ಷಗಳು ಮತ್ತು ಮಮತಾಗೆ ಹೋಗಲಿರುವ ಮತಗಳನ್ನು ಎಲ್​ಜೆಪಿ ಕೂಡ ಹಂಚಿಕೊಂಡರೆ, ಎಡ ಪಕ್ಷದ ಬಲ ಕುಂಠಿತವಾಗಬಹುದು. ದೀದಿ ಪಕ್ಷದ ಮತಗಳಿಕೆ ಕಡಿಮೆ ಆಗಬಹುದು. ಈ ಲೆಕ್ಕಾಚಾರಗಳನ್ನೇ ಆಧಾರವಾಗಿರಿಸಿಕೊಂಡು ಯೋಚಿಸಿದರೆ, ಬಿಜೆಪಿಗೆ ಎಲ್​ಜೆಪಿ ಪರೋಕ್ಷ ಬೆಂಬಲ ಕೊಡಬಹುದು ಎಂಬ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: Budget 2021 | ನಾಲ್ಕು ರಾಜ್ಯಗಳ ಚುನಾವಣೆಗೆ ‘ಹೆದ್ದಾರಿ’ ನಿರ್ಮಿಸಿದ ಕೇಂದ್ರ ಬಜೆಟ್​

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಎಬಿಪಿ, ಸಿ-ವೋಟರ್ ಸಮೀಕ್ಷೆಯ ಅಂಕಿಅಂಶಗಳು ಏನು ಸೂಚಿಸುತ್ತಿವೆ? ಒಂದೆಡೆ ಬಿಜೆಪಿ ಗೆಲುವಿಗಾಗಿ ಹರಸಾಹಸ ಮಾಡುತ್ತಿದ್ದರೂ ಎಬಿಪಿ, ಸಿ-ವೋಟರ್ ಅಂಕಿಅಂಶಗಳು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವೇ ಅಧಿಕಾರಕ್ಕೆ ಬರಬಹುದು ಎಂಬ ಸೂಚನೆ ಕೊಟ್ಟಿವೆ. ಕೇರಳದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಎಲ್​ಡಿಎಫ್, ತಮಿಳುನಾಡಿನಲ್ಲಿ ಪ್ರಸ್ತುತ ವಿರೋಧ ಪಕ್ಷದಲ್ಲಿರುವ ಡಿಎಂ​ಕೆ ಅಧಿಕಾರಕ್ಕೆ ಬರಬಹುದು ಎಂದು ಎಬಿಪಿ, ಸಿ-ವೋಟರ್ ಜೊತೆಯಾಗಿ ನಡೆಸಿದ ಸಮೀಕ್ಷೆಯ ಅಂಕಿಅಂಶಗಳು ಸೂಚಿಸಿವೆ.

ಅದರಂತೆ ನೋಡಿದರೆ, ತಮಿಳುನಾಡಿನಲ್ಲಿ ಕೂಡ ಬಿಜೆಪಿ-ಎಐಡಿಎಂ​ಕೆ ಮೈತ್ರಿಗೆ ಹಿನ್ನಡೆ ಉಂಟಾಗುವ ಸಂಭವವಿದೆ. ಅಸ್ಸಾಂನಲ್ಲಿ ಮತ್ತೆ ಎನ್​ಡಿಎ ಅಧಿಕಾರಕ್ಕೆ ಬರಬಹುದು ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡು ಅಥವಾ ಕೇರಳದಲ್ಲಿ ಪಕ್ಷಗಳ ಆಡಳಿತ ಮರುಕಳಿಸಿದ ಉದಾಹರಣೆಗಳು ಕಡಿಮೆ. ಒಂದು ಅವಧಿಗೆ ಅಧಿಕಾರ ಪಡೆದ ಪಕ್ಷ ಮತ್ತೊಂದು ಆವರ್ತಕ್ಕೆ ಸ್ಥಾನ ಕಳೆದುಕೊಳ್ಳುವುದು ಇತಿಹಾಸದಿಂದ ತಿಳಿಯಬಹುದಾದ ಅಂಶ. ಆದರೆ ಈ ಬಾರಿ, ಕೇರಳದಲ್ಲಿ ಈ ಲೆಕ್ಕಾಚಾರ ಸುಳ್ಳಾಗುವ ಸೂಚನೆ ಲಭಿಸಿದೆ. ಸಮೀಕ್ಷೆಯಂತೆ ತೀರ್ಪು ಬಂದರೆ, ಕಾಂಗ್ರೆಸ್ ಕೇರಳದಲ್ಲೂ ಹಿನ್ನಡೆ ಅನುಭವಿಸಬಹುದು.

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕಾವೇರಿರುವ ವಿಧಾನಸಭಾ ಚುನಾವಣಾ ಕಣದ ಬಗ್ಗೆ ರಾಜಕೀಯ ಆಸಕ್ತರು ಕುತೂಹಲವಿಟ್ಟಿದ್ದಾರೆ. ಪ್ರಭಾವಲಯ ವಿಸ್ತರಣೆಗೆ ಕಾಯುತ್ತಿರುವ ಬಿಜೆಪಿಗೆ ಮುನ್ನಡೆ ಸಿಗಬಹುದಾ? ಕಾಂಗ್ರೆಸ್, ಸೋಲಿನ ಸುಳಿಯಿಂದ ಹೊರಬಂದು ರಾಷ್ಟ್ರ ರಾಜಕಾರಣದಲ್ಲಿ ಬಲ ಕಂಡುಕೊಳ್ಳಬಹುದಾ ಅಥವಾ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸುತ್ತವಾ? ಪ್ರಜೆಗಳ ಅಭಿಮತ ಏನು ಎಂಬ ಪ್ರಶ್ನೆಗಳಿಗೆ ಚುನಾವಣಾ ಫಲಿತಾಂಶವೇ ಖಚಿತ ಉತ್ತರ ಕೊಡಬೇಕಿದೆ.

ಇಂಡಿಯಾ ಟುಡೆ ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ?

ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಮಮತಾ ಬ್ಯಾನರ್ಜಿ ಒಬ್ಬಂಟಿಯಾಗುತ್ತಾರೆ..: ಗೃಹ ಸಚಿವ ಅಮಿತ್​ ಶಾ

ಅಧಿಕಾರ ನಡೆಸಲು ಆಗದಿದ್ದರೆ ಪದತ್ಯಾಗ ಮಾಡಿ -ಪ್ರಧಾನಿ ಮೋದಿ, ಶಾ ಅವರಿಗೆ ಸಿಎಂ ಮಮತಾ ಬ್ಯಾನರ್ಜಿ ಆಗ್ರಹ

ಪಶ್ಚಿಮ ಬಂಗಾಳ ಭೇಟಿಯಿಂದ ದಿಢೀರನೆ ಹಿಂದೆ ಸರಿದ ಗೃಹ ಸಚಿವ ಅಮಿತ್​ ಶಾ! ಕಾರಣವೇನು?

Follow us on

Related Stories

Most Read Stories

Click on your DTH Provider to Add TV9 Kannada