ನೂತನ ಕೃಷಿ ಕಾಯ್ದೆ ಬೆಂಬಲಿಸಿ ಬಿಜೆಪಿ ಸೇರ್ಪಡೆಯಾದ ಕಮಲ್ ಹಾಸನ್ ಪಕ್ಷದ ಪ್ರಧಾನ ಕಾರ್ಯದರ್ಶಿ

ಕಮಲ್ ಹಾಸನ್​ರ ಮಕ್ಕಳ್ ನೀತಿ ಮಯ್ಯಮ್ ಪಕ್ಷದ ಸ್ಥಾಪಕ ಸದಸ್ಯ,ಪ್ರಧಾನಿ ಕಾರ್ಯದರ್ಶಿ ಎ. ಅರುಣಾಚಲಂ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಲು ಪಕ್ಷದ ವರಿಷ್ಠ ಕಮಲ್ ಹಾಸನ್ ನಿರಾಕರಿಸಿದ ಕಾರಣ ಬಿಜೆಪಿ ಸೇರ್ಪಡೆಯಾಗಿದ್ದಾಗಿ ಎ.ಅರುಣಾಚಲಂ ತಿಳಿಸಿದ್ದಾರೆ.

ನೂತನ ಕೃಷಿ ಕಾಯ್ದೆ ಬೆಂಬಲಿಸಿ ಬಿಜೆಪಿ ಸೇರ್ಪಡೆಯಾದ ಕಮಲ್ ಹಾಸನ್ ಪಕ್ಷದ ಪ್ರಧಾನ ಕಾರ್ಯದರ್ಶಿ
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಎ.ಅರುಣಾಚಲಂ
Edited By:

Updated on: Dec 25, 2020 | 6:44 PM

ಚೆನ್ನೈ: ಸಕ್ರಿಯ ರಾಜಕೀಯಕ್ಕೆ ಇಳಿದಿರುವ ಬಹುಭಾಷಾ ನಟ ಕಮಲ್ ಹಾಸನ್​ಗೆ ಸ್ವಪಕ್ಷದಿಂದಲೇ ಆಘಾತ ಉಂಟಾಗಿದೆ. ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲು ಯೋಜನೆ ರೂಪಿಸುತ್ತಿರುವ ಕಮಲ್ ಹಾಸನ್​ ಮಕ್ಕಳ್ ನೀತಿ ಮಯ್ಯಮ್ ಪಕ್ಷದ ಸ್ಥಾಪಕ ಸದಸ್ಯ, ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಲು ಪಕ್ಷದ ವರಿಷ್ಠ ಕಮಲ್ ಹಾಸನ್ ನಿರಾಕರಿಸಿದ ಕಾರಣ ಬಿಜೆಪಿ ಸೇರ್ಪಡೆ ಆಗಿದ್ದಾಗಿ ಎ.ಅರುಣಾಚಲಂ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದಂದೇ ಬಿಜೆಪಿಗೆ ಸೇರ್ಪಡೆಯಾಗಲು ಸಿಕ್ಕ ಅವಕಾಶವನ್ನು ಭಾಗ್ಯವೆಂದೇ ಅರುಣಾಚಲಂ ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ಕಾಯ್ದೆಗಳನ್ನು ರೂಪಿಸಿದ್ದು, ಈ ಕಾಯ್ದೆಗಳಿಂದ ಕೃಷಿಕರ ಬದುಕಲ್ಲಿ ಸುಧಾರಣೆಯಾಗುವುದು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಮಗೆ ಅರಿವಾಗಿದೆ. ಮಕ್ಕಳ್ ನೀತಿ ಮಯ್ಯಮ್ ಪಕ್ಷದ ಪ್ರಮುಖರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಕಾರಣ ನಾನು ಬಿಜೆಪಿ ಸೇರಬೇಕಾಯಿತು ಎಂದು ಎ.ಅರುಣಾಚಲಂ ತಿಳಿಸಿದ್ದಾರೆ.

ಬಿಜೆಪಿ ರೂಪಿಸಿದ ಕಾಯ್ದೆಗಳೆಂಬುದನ್ನು ಮರೆತು ಕೃಷಿ ಕಾಯ್ದೆಗಳು ಎಂದು ಅದನ್ನು ವಿಶ್ಲೇಷಿಸಿ ಎಂದು ಅರುಣಾಚಲಂ  ಈ ಮೊದಲು ಪಕ್ಷದ ಮುಖಂಡರಲ್ಲಿ ವಿನಂತಿಸಿದ್ದರು. ಆದರೆ, ಇದಕ್ಕೆ ಮುಖಂಡರು ಸಮ್ಮತಿಸಿರಲಿಲ್ಲ. ಅಲ್ಲದೆ, ಕಮಲ್ ಹಾಸನ್​ ಕೂಡ ಈ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದರು. ಹೀಗಾಗಿ, ಅವರು ಬಿಜೆಪಿ ಸೇರಿರುವುದಾಗಿ ಇಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಎ. ಅರುಣಾಚಲಂ ಪಕ್ಷ ತೊರೆದಿರುವುದು ಕಮಲ್ ಹಾಸನ್ ಪಕ್ಷ ಸಂಘಟನೆಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆ ತಮಿಳುನಾಡು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ.

ತಮಿಳುನಾಡು ರಾಜಕೀಯದಲ್ಲಿ ರಜನಿ-ಕಮಲ್​ ಮೈತ್ರಿ? ಸೂಚನೆ ನೀಡಿದ ಸ್ಟಾರ್​ ನಟ