ಶ್ರೀಲಂಕಾಗೆ ಭಾರತ ಕಚ್ಚತೀವು ಬಿಟ್ಟುಕೊಟ್ಟಿದ್ದು ಯಾಕೆ? ಅಂದು ನೆಹರೂ, ಇಂದಿರಾ, ಕರುಣಾನಿಧಿ ನಿಲುವು ಏನಿತ್ತು? ಇಲ್ಲಿದೆ ಡೀಟೇಲ್ಸ್

|

Updated on: Apr 01, 2024 | 10:38 AM

Katchatheevu Island Reality Check: ಕಚ್ಚತೀವು ದ್ವೀಪವನ್ನು 1974ರಲ್ಲಿ ಶ್ರೀಲಂಕಾಗೆ ಭಾರತ ಅಧಿಕೃತವಾಗಿ ಹಸ್ತಾಂತರಿಸಿದೆ. ಆಗ ಪ್ರಧಾನಿಯಾಗಿದ್ದವರು ಇಂದಿರಾ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿಯಾಗಿದ್ದವರು ಎಂ ಕರುಣಾನಿಧಿ. ಡಿಎಂಕೆ ಪಕ್ಷ ಕಚ್ಚತೀವು ವಿಚಾರದಲ್ಲಿ ಕಠಿಣ ನಿಲುವು ತಳೆದಿತ್ತು. ಕಚ್ಚತೀವು ಅನ್ನು ಶ್ರೀಲಂಕಾಗೆ ಬಿಟ್ಟುಕೊಡಲು ವಿರೋಧಿಸಿತ್ತು. ಆದರೆ, ಕೇಂದ್ರ ಸರ್ಕಾರದ ಮನವೊಲಿಕೆ ಬಳಿಕ ಕರುಣಾನಿಧಿ ಈ ದ್ವೀಪ ಹಸ್ತಾಂತರಕ್ಕೆ ಒಪ್ಪಿದರೆನ್ನಲಾಗಿದೆ.

ಶ್ರೀಲಂಕಾಗೆ ಭಾರತ ಕಚ್ಚತೀವು ಬಿಟ್ಟುಕೊಟ್ಟಿದ್ದು ಯಾಕೆ? ಅಂದು ನೆಹರೂ, ಇಂದಿರಾ, ಕರುಣಾನಿಧಿ ನಿಲುವು ಏನಿತ್ತು? ಇಲ್ಲಿದೆ ಡೀಟೇಲ್ಸ್
ಕಚ್ಚತೀವು ದ್ವೀಪ
Follow us on

ನವದೆಹಲಿ, ಏಪ್ರಿಲ್ 1: ಭಾರತಕ್ಕೆ ಸೇರಿದ್ದ ಕಚ್ಚತೀವು ದ್ವೀಪವನ್ನು (Katchatheevu Island) ಎಪ್ಪತ್ತರ ದಶಕದಲ್ಲಿ ಶ್ರೀಲಂಕಾಗೆ ಬಿಟ್ಟುಕೊಟ್ಟಿರುವ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ಈ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೇ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡಲಾಗಿತ್ತು. ಐತಿಹಾಸಿಕವಾಗಿಯೂ ಶ್ರೀಲಂಕಾ ಮತ್ತು ಭಾರತದ ಆಡಳಿತದ ಮಧ್ಯೆ ಹೊಯ್ದಾಡುತ್ತಿದ್ದ ಕಚ್ಚತೀವು ಅಂತಿಮವಾಗಿ 1974ರಲ್ಲಿ ಅಧಿಕೃತವಾಗಿ ಶ್ರೀಲಂಕಾಗೆ ವರ್ಗವಾಯಿತು. ಆಗ ಭಾರತದ ಪ್ರಧಾನಿಯಾಗಿದ್ದವರು ಇಂದಿರಾ ಗಾಂಧಿ, ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದವರು ಎಂ ಕರುಣಾನಿಧಿ ಅವರು. ಕಟ್ಟರ್ ದ್ರಾವಿಡ ಪರಂಪರೆ ಮತ್ತು ದ್ರಾವಿಡವಾದದ ಡಿಎಂಕೆ ಪಕ್ಷ ಕಚ್ಚತೀವು ಅನ್ನು ಶ್ರೀಲಂಕಾಗೆ ಬಿಟ್ಟುಕೊಡಲು ಹೇಗೆ ಒಪ್ಪಿತು ಎಂದು ಬಹಳಷ್ಟು ಮಂದಿಗೆ ಕುತೂಹಲ ಮೂಡಿಸಿರುವ ಸಂಗತಿ.

ಕಚ್ಚತೀವು ವಿಚಾರದಲ್ಲಿ ಕರುಣಾನಿಧಿ ನಿಲುವೇನಿತ್ತು?

ವರದಿಗಳ ಪ್ರಕಾರ, ಎಂ ಕರುಣಾನಿಧಿ ರಾಜಕೀಯ ಕಾರಣಕ್ಕೆ ಕಚ್ಚತೀವು ದ್ವೀಪವನ್ನು ಹಸ್ತಾಂತರಿಸುವುದನ್ನು ವಿರೋಧಿಸಿದ್ದರು. ಆದರೆ, ಮುಖ್ಯಮಂತ್ರಿಯಾಗಿ ಅವರು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಬೆಂಬಲ ಕೊಟ್ಟರೆನ್ನಲಾಗಿದೆ. 1974ರ ಜೂನ್ 19ರಂದು ಅಂದಿನ ಕೇಂದ್ರ ವಿದೇಶೀ ಕಾರ್ಯದರ್ಶಿ ಕೇವಲ್ ಸಿಂಗ್ ಅವರು ಅಂದಿನ ತಮಿಳುನಾಡು ಸಿಎಂ ಎಂ ಕರುಣಾನಿಧಿಯನ್ನು ಭೇಟಿ ಮಾಡಿ ವಿವರಣೆ ನೀಡಿದ್ದರು. ಐತಿಹಾಸಿಕವಾಗಿ ಕಚ್ಚತೀವು ದ್ವೀಪದ ಮೇಲೆ ಶ್ರೀಲಂಕಾಗೆ ಹೆಚ್ಚು ಹಕ್ಕು ಇರುವ ಸಂಗತಿಯನ್ನು ಕರುಣಾನಿಧಿಗೆ ವಿವರಿಸಿದ ಬಳಿಕ ಅವರು ಸಮ್ಮತಿ ವ್ಯಕ್ತಪಡಿಸಿದರೆನ್ನಲಾಗಿದೆ.

ಇದನ್ನೂ ಓದಿ: ಕಚ್ಚತೀವು ದ್ವೀಪ ಹಸ್ತಾಂತರ ಪ್ರತಿ ಭಾರತೀಯನನ್ನೂ ಕೆರಳಿಸಿದೆ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ವಾಸ್ತವವಾಗಿ ಅಂದಿನ ದಿನಗಳಲ್ಲಿ ಡಿಎಂಕೆ ಪಕ್ಷ ಕಚ್ಚತೀವು ಬಿಟ್ಟುಕೊಡುವ ಪ್ರಸ್ತಾವವನ್ನು ಕಟುವಾಗಿ ವಿರೋಧಿಸಿತ್ತು. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಅಣಿಯಾಗಿತ್ತು. ಆದರೆ, ಕೇಂದ್ರದ ಮನವೊಲಿಕೆ ಬಳಿಕ ಕರುಣಾನಿಧಿ ಒಪ್ಪಿದರು. ಆದರೆ, ಈ ವಿಚಾರದ ಬಗ್ಗೆ ಯಾವುದೇ ಸಾರ್ವಜನಿಕ ನಿಲುವು ತೆಗೆದುಕೊಳ್ಳುವುದಿಲ್ಲ ಎಂದು ಮಾತ್ರ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದರು.

ಈ ದ್ವೀಪಕ್ಕಿಂತ ದ್ವಿಪಕ್ಷೀಯ ಸಂಬಂಧ ಮುಖ್ಯ ಎಂದಿದ್ದ ನೆಹರೂ

ಎರಡು ಚದರ ಕಿಮೀಗಿಂತಲೂ ಕಡಿಮೆ ವಿಸ್ತೀರ್ಣದ ಈ ಪುಟ್ಟ ದ್ವೀಪದ ಬಗ್ಗೆ ಶ್ರೀಲಂಕಾ ಹಠಮಾರಿ ನಿಲುವು ಹೊಂದಿತ್ತು. ಅದು ತನ್ನದು ಎಂಬುದು ಅದರ ಅಚಲ ನಂಬಿಕೆ. ಲಡಾಖ್​ಗೆ ಸೇರಿದ್ದ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಒಂದು ಹಲ್ಲು ಕೂಡ ಬೆಳೆಯುವುದಿಲ್ಲ ಎಂದು ಅದನ್ನು ಚೀನಾಗೆ ಬಿಟ್ಟುಕೊಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಜವಾಹರಲಾಲ್ ನೆಹರೂ, ಕಚ್ಚತೀವು ವಿಚಾರದಲ್ಲೂ ಬಹುತೇಕ ಅದೇ ರೀತಿಯ ನಿಲುವು ಹೊಂದಿದ್ದರು.

ಇದನ್ನೂ ಓದಿ: ಕಡಲ್ಗಳ್ಳರಿಂದ ರಕ್ಷಣೆ: ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪಾಕಿಸ್ತಾನೀಯರು

‘ಈ ಪುಟ್ಟ ದ್ವೀಪಕ್ಕೆ (ಕಚ್ಚತೀವು) ನಾನು ಯಾವುದೇ ಮಹತ್ವ ನೀಡುವುದಿಲ್ಲ. ನಮ್ಮ ಹಕ್ಕು ಬಿಟ್ಟುಕೊಡಲು ನನಗೇನೂ ಅಭ್ಯಂತರ ಇಲ್ಲ. ಇಂಥ ವಿಚಾರ ಸಂಸತ್​ನಲ್ಲಿ ಪದೇ ಪದೇ ಪ್ರಸ್ತಾಪವಾಗುವುದು ನನಗಿಷ್ಟ ಇಲ್ಲ. ಈ ದ್ವೀಪಕ್ಕಿಂತ ನಮಗೆ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿರುವುದು ಮುಖ್ಯ,’ ಎಂದು 1961ರಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರೂ ಹೇಳಿದ್ದರು.

ಕಚ್ಚತೀವು ವಿಚಾರ ಈಗ್ಯಾಕೆ?

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಕಚ್ಚತೀವು ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಅನ್ನು ಕುಟುಕಿದ್ದರು. ಬಳಿಕ ಇದು ಹೆಚ್ಚು ಸದ್ದು ಮಾಡಲಿಲ್ಲ. ತಮಿಳುನಾಡಿನ ಬಿಜೆಪಿ ನಾಯಕ ಹಾಗು ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಆರ್​ಟಿಐ ಮೂಲಕ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸಲಾದ ವಿಚಾರದಲ್ಲಿ ಅಧಿಕೃತ ದಾಖಲೆಗಳನ್ನು ಪಡೆದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಸುಪ್ರೀಂಕೋರ್ಟ್‌ನಿಂದಲೂ ಜಾಮೀನು ಸಿಗುತ್ತಿಲ್ಲ: ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ಎಲ್ಲಿದೆ ಈ ಕಚ್ಚತೀವು?

ಭಾರತ ಮತ್ತು ಶ್ರೀಲಂಕಾ ಮಧ್ಯ ಇರುವ ವಿವಿಧ ಪುಟ್ಟ ದ್ವೀಪಗಳಲ್ಲಿ ಕಚ್ಚತೀವು ಒಂದು. ರಾಮನಾಥಪುರಂನಿಂದ 20 ಕಿಮೀ ದೂರದಲ್ಲಷ್ಟೇ ಇದು ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ