ಚೆನ್ನೈ, (ಏಪ್ರಿಲ್ 03): ಕಚ್ಚತೀವು ಸಮಸ್ಯೆಗೆ (Katchatheevu controversy) ಕಾಂಗ್ರೆಸ್ ಹೊಣೆ ಎಂದು ಎಂಡಿಎಂಕೆ ಸಂಸ್ಥಾಪಕ ವೈಕೊ ಆರೋಪಿಸಿದ್ದಾರೆ. ಕಾಂಗ್ರೆಸ್ ನಿರಾಸಕ್ತಿಯಿಂದ ತಮಿಳುನಾಡಿನ ರಾಮನಾಥಪುರಂ ಬಳಿಯ ಕಚ್ಚತೀವು ಪ್ರದೇಶವನ್ನು ಭಾರತ ಕಳೆದುಕೊಂಡಿದೆ. ಆದ್ರೆ, ಈ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ದೂಷಿಸಿ ತನ್ನ ಅಸ್ತಿತ್ವವನ್ನು ಕಾಪಾಡಲು ಇಂಡಿಯಾ ಫ್ರಂಟ್ ಪ್ರಯತ್ನಿಸುತ್ತಿದೆ ಎಂದು ಮೈಕೋ ಕಾಂಗ್ರೆಸ್ ವಿರುದ್ಧವೇ ಕಿಡಿಕಾರಿದ್ದಾರೆ. ವೈಕೊ ಇಂಡಿಯಾ ಫ್ರಂಟ್‌ನ ಭಾಗವಾಗಿದ್ದಾರೆ. ಆದಾಗ್ಯೂ ಕಚ್ಚತೀವು ವಿಷಯದಲ್ಲಿ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿದ್ದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಕಚ್ಚತೀವು ವಿಚಾರದಲ್ಲಿ ಮೋದಿ ವಿರುದ್ಧ ಡಿಎಂಕೆ ನಾಯಕರು ಆರೋಪಿಸಿರುವ ಸಮಯದಲ್ಲೇ ವೈಕೊ ಅವರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ವೈಕೊ ಅವರ ಪುತ್ರ ದುರೈ ವೈಕೋ ತಿರುಚ್ಚಿ ಲೋಕಸಭಾ ಕ್ಷೇತ್ರದಿಂದ ಇಂಡಿಯಾ ಫ್ರಂಟ್ ಅಭ್ಯರ್ಥಿಯಾಗಿದ್ದಾರೆ. ಈ ಹೊತ್ತಿನಲ್ಲಿ ವೈಕೋ ಇಂತಹ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಅನುಮಾನ ತಮಿಳುನಾಡಿನ ನಾಯಕರಲ್ಲಿ ಮೂಡಿದೆ.
ಕಚ್ಚತೀವು ದ್ವೀಪದ ವಿವಾದದ ಕುರಿತು ಕಾಂಗ್ರೆಸ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು. ತಮಿಳುನಾಡಿನ ಬಗ್ಗೆ ಅಷ್ಟು ಕಾಳಜಿ ಇದ್ದರೆ, ಶ್ರೀಲಂಕಾದಿಂದ ದ್ವೀಪವನ್ನು ಹಿಂದಕ್ಕೆ ತೆಗೆದುಕೊಳ್ಳುವ ಧೈರ್ಯ ಮಾಡುತ್ತಾರೆಯೇ ಎಂದು ಸವಾಲು ಹಾಕಿದ್ದರು.
ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ, ಈ ಕುರಿತು ಗಂಭೀರ ಚರ್ಚೆ ನಡೆಯುವಂತೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಡಿಎಂಕೆಗಳ ನಿಲುವನ್ನು ಪ್ರಶ್ನಿಸಿದ್ದಾರೆ. ಕಚ್ಚತೀವು ದ್ವೀಪವನ್ನು ಭಾರತದ ಬಳಿಯೇ ಉಳಿಸಿಕೊಳ್ಳುವ ವಿಚಾರದಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಉದಾಸೀನ ತೋರಿದ್ದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದನ್ನು ದಾಖಲೆಗಳು ತೋರಿಸುತ್ತವೆ. ದ್ವೀಪವನ್ನು ಹಗುರಾಗಿ ಪರಿಗಣಿಸಿದ ಅವರು ಅದರ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ತೀರ್ಮಾನಿಸಿದರು. ಇದಕ್ಕೆ ಅಂದಿನ ಅಟಾರ್ನಿ ಜನರಲ್ ವಿರೋಧ ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯ ಭಿನ್ನವಾಗಿತ್ತು. ಅವರು ಐತಿಹಾಸಿಕ ಮಾಲೀಕತ್ವ ಹಕ್ಕು ಇರುವ ಕಾರಣ ಅದನ್ನು ಕಾನೂನಾತ್ಮಕವಾಗಿ ಗೆಲ್ಲಬಹುದು ಎಂಬ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದರು.
ಅಂದಿನ ಪ್ರಧಾನಿ ನೆಹರೂ ಅವರು 1961ರ ಮೇ 10 ರಂದು ಆ ಸಮಸ್ಯೆಯನ್ನು ಅಸಮಂಜಸವೆಂದು ತಳ್ಳಿಹಾಕಿದರು. ಆ ಪುಟ್ಟ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಅನಿರ್ದಿಷ್ಟಾವಧಿಗೆ ಬಾಕಿ ಉಳಿದಿರುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಈ ವಿಚಾರವನ್ನು ಎತ್ತುವುದು ಇಷ್ಟವಿಲ್ಲ ಎಂದು ನೆಹರೂ ಬರೆದಿರುವ ದಾಖಲೆಗಳಿವೆ ಎಂದು ಅಣ್ಣಾಮಲೈ ಹೇಳಿದ್ದರು.
1991ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ, ಕಚ್ಚತೀವು ದ್ವೀಪ ವಾಪಸ್ ಪಡೆಯಬೇಕೆಂಬ ವಿಚಾರಕ್ಕೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವಿಚಾರವಾಗಿ ಜಯಲಲಿತಾ ಮತ್ತು ಕರುಣಾನಿಧಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಇದಾಗಿ 2013ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಭಾರತ ಸರ್ಕಾರ, ಅದು ಭಾರತದ್ಧೇ ಭಾಗವಾಗಿದ್ದು ಅದನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಆ ದ್ವೀಪಕ್ಕೆ ಸಂಬಂಧಿಸಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಸಿಲೋನ್ ನಡುವೆ ವಿವಾದ ಇತ್ತು ಎಂದು ತಿಳಿಸಿತ್ತು. ಇನ್ನೊಂದೆಡೆ, 2022ರ ಡಿಸೆಂಬರ್‌ನಲ್ಲಿ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಕಚ್ಚತೀವು ಭಾರತ ಮತ್ತು ಶ್ರೀಲಂಕಾದ ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆಯ ಶ್ರೀಲಂಕಾ ಭಾಗದಲ್ಲಿದೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಹೇಳಿತ್ತು. ಈ ನಡುವೆ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಸುದ್ದಿಗೋಷ್ಠಿ ನಡೆಸಿ ಎರಡನೇ ಹಂತದ ದಾಖಲೆಗಳನ್ನು ನಿನ್ನೆ (ಏಪ್ರಿಲ್ 2) ಬಿಡುಗಡೆ ಮಾಡಿದ್ದರು.
ಕಚ್ಚತೀವು ದ್ವೀಪ ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿದೆ. ಭಾರತದ ಕರಾವಳಿಯಿಂದ ರಾಮೇಶ್ವರಂನ ಈಶಾನ್ಯ ದಿಕ್ಕಿನಲ್ಲಿದೆ. 285 ಎಕರೆ ವಿಸ್ತಾರವುಳ್ಳ ಈ ದ್ವೀಪವು ಕುಡಿಯಲು ನೀರಿಲ್ಲದ ಕಾರಣ ಜನ ವಸತಿಗೆ ಯೋಗ್ಯವಾಗಿಲ್ಲ. 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ದ್ವೀಪ ನಿರ್ಮಾಣವಾಯಿತು. ಇದು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತ್ತು. ಉಲ್ಲೇಖಗಳ ಪ್ರಕಾರ ಈ ದ್ವೀಪವು ರಾಮನಾಥಪುರದ ಸೇತುಪತಿ ರಾಜನ ಅಡಿಯಲ್ಲಿ ಶಿವಗಂಗಾ ಸಂಸ್ಥಾನದ ಭಾಗವಾಗಿತ್ತು ಎನ್ನಲಾಗಿದೆ.
Published On - 11:06 pm, Wed, 3 April 24