Kerala Assembly Elections 2021: ನಾಮಪತ್ರ ತಿರಸ್ಕೃತ; ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಅಭ್ಯರ್ಥಿಗಳು

|

Updated on: Mar 21, 2021 | 11:31 AM

Kerala BJP Nomination: ತಲಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿದ್ದ ಕಣ್ಣೂರು ಜಿಲ್ಲಾಧ್ಯಕ್ಷ ಎನ್. ಹರಿದಾಸ್, ಗುರುವಾಯೂರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ನಿವೇದಿತಾ ಸುಬ್ರಮಣ್ಯನ್, ದೇವಿಕುಳಂನಲ್ಲಿ ಬಿಜೆಪಿ ಮೈತ್ರಿಪಕ್ಷವಾದ ಅಣ್ಣಾ ಡಿಎಂಕೆ ಪಕ್ಷದ ಅಭ್ಯರ್ಥಿ ಆರ್.ಎಂ.ಧನಲಕ್ಷ್ಮಿ ಅವರ ನಾಮಪತ್ರವನ್ನು ಶನಿವಾರ ತಿರಸ್ಕರಿಸಲಾಗಿತ್ತು.

Kerala Assembly Elections 2021: ನಾಮಪತ್ರ ತಿರಸ್ಕೃತ; ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಅಭ್ಯರ್ಥಿಗಳು
ಬಿಜೆಪಿ ಧ್ವಜ
Follow us on

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಮೂವರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಆಧಿಕಾರಿ ತಿರಸ್ಕರಿಸಿದ ಬೆನ್ನಲ್ಲೇ ಈ ಅಭ್ಯರ್ಥಿಗಳು ಭಾನುವಾರ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ತಲಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿದ್ದ ಕಣ್ಣೂರು ಜಿಲ್ಲಾಧ್ಯಕ್ಷ ಎನ್. ಹರಿದಾಸ್, ಗುರುವಾಯೂರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ನಿವೇದಿತಾ ಸುಬ್ರಮಣ್ಯನ್, ದೇವಿಕುಳಂನಲ್ಲಿ ಬಿಜೆಪಿ ಮೈತ್ರಿಪಕ್ಷವಾದ ಅಣ್ಣಾ ಡಿಎಂಕೆ ಪಕ್ಷದ ಅಭ್ಯರ್ಥಿ ಆರ್.ಎಂ.ಧನಲಕ್ಷ್ಮಿ ಅವರ ನಾಮಪತ್ರವನ್ನು ಶನಿವಾರ ತಿರಸ್ಕರಿಸಲಾಗಿತ್ತು.

ನಾಮಪತ್ರ ಪರಿಶೀಲನೆ ನಡೆಸುವ ವೇಳೆ ಸರಿಯಾದ ಮಾಹಿತಿ ನಮೂದಿಸಿರಲಿಲ್ಲ ಎಂದು ಹೇಳಿ ಚುನಾವಣಾ ಅಧಿಕಾರಿ ಅದನ್ನು ತಿರಸ್ಕರಿಸಿದ್ದರು. ಆದರೆ ಸಿಪಿಎಂ ಒತ್ತಡ ಹೇರಿದ ಕಾರಣ ಚುನಾವಣಾ ಅಧಿಕಾರಿ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಹೈಕೋರ್ಟ್ ನಲ್ಲಿ ಬಿಜೆಪಿಯ ಹಿರಿಯ ನ್ಯಾಯವಾದಿಗಳಾದ ರಾಮ್ ಕುಮಾರ್ ಮತ್ತು ಹರಿಕುಮಾರ್ ವಾದಿಸಲಿದ್ದಾರೆ.

ನಾಮಪತ್ರದಲ್ಲಿ ಸಹಿ ಇರಲಿಲ್ಲ
ಗುರುವಾಯೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ಅವರ ಹೆಸರಿನ ನಾಮನಿರ್ದೇಶನ ಪತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸಹಿ ಇಲ್ಲ ಎಂದು ಹೇಳಿ ಚುನಾವಣಾ ಅಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಡಮ್ಮಿ ಅಭ್ಯರ್ಥಿಯ ನಾಮಪತ್ರವೂ ಅಪೂರ್ಣವಾಗಿದೆ. ಬಿಜೆಪಿ ನಾಮಪತ್ರ ತಿರಸ್ಕರಿಸಲ್ಪಟ್ಟ ಕಾರಣ ಎನ್​ಡಿಎಗೆ ಗುರುವಾಯೂರಿನಲ್ಲಿ ಅಭ್ಯರ್ಥಿ ಇಲ್ಲದಂತಾಗಿದೆ. ಸಿಪಿಎಂ ಅಭ್ಯರ್ಥಿ ಎನ್.ಕೆ ಅಕ್ಬರ್, ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಕೆ.ಎನ್.ಎ ಖಾದರ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ.

ತಲಶ್ಶೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಹರಿದಾಸ್ ಅವರ ನಾಮಪತ್ರವೂ ಶನಿವಾರ ತಿರಸ್ಕರಿಸಲ್ಪಟ್ಟಿತ್ತು. ಚುನಾವಣಾ ಚಿಹ್ನೆ ನೀಡಲು ರಾಜ್ಯದ ಪ್ರತಿನಿಧಿಗೆ ಹೊಣೆ ವಹಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ನೀಡುವ ಫಾರಂ ಎನಲ್ಲಿ ಸಹಿ ಇಲ್ಲದೇ ಇರುವ ಕಾರಣ ಇವರ ನಾಮಪತ್ರ ತಿರಸ್ಕರಿಸಲ್ಪಟ್ಟಿತ್ತು. ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಬಿಜೆಪಿ ಹೇಳಿದೆ. ಫಾರಂ ಎನಲ್ಲಿ ಮುದ್ರೆ ಇದ್ದರೂ ಸಹಿ ಇಲ್ಲ. ಡಮ್ಮಿಯಾಗಿ ಬಿಜೆಪಿ ಘಟಕ ಅಧ್ಯಕ್ಷ ಕೆ.ಲಿಜೇಶ್ ನಾಮಪತ್ರ ಸಲ್ಲಿಸಿದ್ದರೂ ಫಾರಂ ಎ ಇಬ್ಬರಿಗೂ ಒಂದೇ ಆಗಿರುವ ಕಾರಣ ನಾಮಪತ್ರವನ್ನು ಚುನಾವಣಾ ಅಧಿಕಾರಿ ಸ್ವೀಕರಿಸಿರಲಿಲ್ಲ.

ಇಡುಕ್ಕಿ ದೇವಿಕುಳಂ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕು ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲ್ಪಟ್ಟಿದೆ. ಎನ್​​ಡಿಎ ಮೈತ್ರಿಕೂಟದ , ಎಐಎಡಿಎಂ ಅಭ್ಯರ್ಥಿ ಧನಲಕ್ಷ್ಮಿ, ಡಮ್ಮಿ ಅಭ್ಯರ್ಥಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ ಪೊನ್​ಪಾಂಡಿ,
ಬಿಎಸ್​ಪಿ ಅಭ್ಯರ್ಥಿ ತಂಗಚ್ಚನ್ ಅವರ ನಾಮಪತ್ರವನ್ನು ಶನಿವಾರ ಚುನಾವಣಾ ಅಧಿಕಾರಿ ತಿರಸ್ಕರಿಸಿದ್ದರು.

ಮಲಪ್ಪುರಂ ಕೊಂಡೊಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಎಲ್ ಡಿಎಫ್ ಸ್ವತಂತ್ರ ಅಭ್ಯರ್ಥಿ ಕೆ.ಪಿ.ಸುಲೈಮಾನ್ ಹಾಜಿ ಅವರ ನಾಮಪತ್ರವೂ ತಿರಸ್ಕರಿಸಲ್ಪಟ್ಟಿದೆ. ಸಂಗಾತಿಯ ಹೆಸರು, ಆಸ್ತಿ ವಿವರಗಳನ್ನು ಸರಿಯಾಗಿ ನಮೂದಿಸಿಲ್ಲ ಎಂಬ ಕಾರಣದಿಂದ ನಾಮಪತ್ರ ತಿರಸ್ಕರಿಸಲ್ಪಟ್ಟಿತ್ತು.

140  ವಿಧಾನಸಭಾ ಸೀಟುಗಳಿರುವ ಕೇರಳದಲ್ಲಿ ಏಪ್ರಿಲ್ 6ಕ್ಕೆ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

 ಇದನ್ನೂ ಓದಿ: Kerala Assembly Elections 2021: ಕಲ್ಯಾಣ ಪಿಂಚಣಿ 2500 ರೂ, ಗೃಹಿಣಿಯರಿಗೂ ಸಿಗಲಿದೆ ಪಿಂಚಣಿ: ಚುನಾವಣೆ ಪ್ರಣಾಳಿಕೆ ಪ್ರಕಟಿಸಿದ ಎಲ್​ಡಿಎಫ್

Kerala Assembly Elections 2021: ಕೇರಳದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು 35 ಸೀಟುಗಳು ಸಾಕು: ಕೆ.ಸುರೇಂದ್ರನ್