ತಿರುವನಂತಪುರಂ ನವೆಂಬರ್ 17: ಕೇರಳದ (Kerala) ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ (K Surendran) ಆರೋಪಿಸಿದಂತೆ ನಕಲಿ ಗುರುತಿನ ಚೀಟಿ ಪ್ರಕರಣ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗವು ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಕೇಳಿದೆ ಎಂದು ಕೇರಳದ ಮುಖ್ಯ ಚುನಾವಣಾ ಅಧಿಕಾರಿ ಸಂಜಯ್ ಕೌಲ್ (Sanjay Kaul) ಶುಕ್ರವಾರ ಹೇಳಿದ್ದಾರೆ. ‘ಪತ್ರಿಕೆಯಿಂದ ಆರೋಪದ ಬಗ್ಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದಿಂದ ದೂರು ದಾಖಲಾಗಿದೆ. ಯುವ ಕಾಂಗ್ರೆಸ್ ಚುನಾವಣೆಯ ಅಂಗವಾಗಿ ಇಂತಹ ಬೋಗಸ್ ಕಾರ್ಡ್‌ಗಳನ್ನು ಮುದ್ರಿಸಲಾಗಿದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ನಿಜವಾಗಿದ್ದರೆ, ಯಾರು ಇದನ್ನು ಮಾಡಿದ್ದಾರೆ ಎಂದು ತಿಳಿಯಲು ತನಿಖೆ ನಡೆಸಲಾಗುವುದು ಎಂದು ಕೌಲ್ ಹೇಳಿದರು.
ಈ ಬಗ್ಗೆ ಚುನಾವಣಾ ಆಯೋಗ ಯೂತ್ ಕಾಂಗ್ರೆಸ್‌ನಿಂದ ವಿವರಣೆ ಕೇಳಿದೆ ಎಂದು ಅವರು ಹೇಳಿದರು. ಹೊಲೊಗ್ರಾಮ್‌ನಂತಹ ದೃಢೀಕರಣ ವೈಶಿಷ್ಟ್ಯಗಳೊಂದಿಗೆ ಹೊಸ ಮತದಾರರ ಗುರುತಿನ ಚೀಟಿಗಳನ್ನು ರಚಿಸುವುದು ಅಸಾಧ್ಯವೆಂದು ಮುಖ್ಯ ಚುನಾವಣಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಗೆ ಕಾಂಗ್ರೆಸ್ 1.25 ಲಕ್ಷ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿದೆ ಎಂದು ಸುರೇಂದ್ರನ್ ಆರೋಪಿಸಿದ್ದರು. ಈ ಕಾರ್ಡ್‌ಗಳನ್ನು ಯುವ ಕಾಂಗ್ರೆಸ್‌ನ ಸಾಂಸ್ಥಿಕ ಚುನಾವಣೆಗೆ ಬಳಸಲಾಗಿದ್ದರೂ, ಇದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.
ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಲಾಗಿದೆ. ಇದರ ಹಿಂದೆ ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕರ ಕೈವಾಡವಿದೆ. ಘಟನೆಗೆ ಸಂಬಂಧಿಸಿದಂತೆ ಡಿಜಿಪಿ ಮತ್ತು ಕೇಂದ್ರ ಏಜೆನ್ಸಿಗಳಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾಯಕರು ಈ ವಿಷಯವನ್ನು ಮರೆಮಾಚುತ್ತಿದ್ದಾರೆ ಎಂದು ಸುರೇಂದ್ರನ್ ಆರೋಪಿಸಿದರು.
ಪಾಲಕ್ಕಾಡ್ ಶಾಸಕ ಶಾಫಿ ಪರಂಪೀಲ್ ಅವರು ಆರೋಪಗಳನ್ನು ನಿರಾಕರಿಸಿದ್ದು, ಇದು ರಾಜಕೀಯವಾಗಿ ಪ್ರಸ್ತುತವಾಗಲು ಸುರೇಂದ್ರನ್ ಅವರ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ತಜ್ಞರೊಂದಿಗೆ ಸಮಾಲೋಚಿಸಿದ ನಂತರ ನಾಯಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸುತ್ತಿದ್ದೇನೆ ಎಂದು ಶಾಫಿ ತಿಳಿಸಿದ್ದಾರೆ.
ಇದನ್ನೂ ಓದಿ: ಮರಣದಂಡನೆ ವಿರುದ್ಧ ಕೇರಳದ ನರ್ಸ್‌ನ ಮೇಲ್ಮನವಿ ವಜಾಗೊಳಿಸಿದ ಯೆಮೆನ್ ನ್ಯಾಯಾಲಯ
ನವೆಂಬರ್ 14 ರಂದು ಇಂಡಿಯನ್ ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿ ರಾಹುಲ್ ಮಾಂಕೂಟ್ಟತ್ತಿಲ್ ಆಯ್ಕೆಯಾಗಿದ್ದು, ಅಬಿನ್ ವರ್ಕಿ ಎರಡನೇ ಸ್ಥಾನ ಪಡೆದರು. ಶಾಫಿ ಪರಂಬಿಲ್ ನೇತೃತ್ವದ ಹಿಂದಿನ ರಾಜ್ಯ ಸಮಿತಿಯಲ್ಲಿ ರಾಹುಲ್ ಮತ್ತು ಅಬಿನ್ ಇಬ್ಬರೂ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸುರೇಂದ್ರನ್ ಎತ್ತಿರುವ ಆರೋಪಗಳನ್ನು ರಾಹುಲ್ ಮತ್ತು ಅಬಿನ್ ತಳ್ಳಿ ಹಾಕಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ