ಅನುಭವ ಕಥನ: ದೇವರ ನಾಡಲ್ಲಿ ಕಣ್ಮನ ಸೆಳೆದ ‘ಕೇರಳೀಯಂ’ ಸೊಬಗು

Keraleeyam 2023: ಇಂಡಿಯನ್ ಕಾಫಿ ಹೌಸ್ ನಲ್ಲಿ ಕಾಫಿ ಜತೆ ಬೀಟ್ರೂಟ್ ಕಟ್ಲೆಟ್ ಸವಿದು ಸಿನಿಮಾ, ಜಾನಪದ ಕಲೆಗಳ ಪ್ರದರ್ಶನ ನೋಡಿ ಹೊರಡುವಾಗ ಹೊತ್ತು ಕತ್ತಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿರುವ ಕಟ್ಟಡಗಳ ಸೊಬಗನ್ನು ಮೊಬೈಲ್​​ನಲ್ಲಿ ಸೆರೆಹಿಡಿದು ನಾವು ಬಂದಿದ್ದು ಕೇರಳದ ನದಿಗಳ ಬಗ್ಗೆ ವಿವರಿಸುವ ಕಲಾರೂಪವನ್ನು ನೋಡಲು. ಅದನ್ನು ಕಣ್ತುಂಬಿಕೊಂಡು ಇನ್ನೊಂದು ವೇದಿಕೆಗೆ ಬಂದಾಗ ಅಲ್ಲಿ ವೆಸ್ಟರ್ನ್ ಡ್ಯಾನ್ಸ್,ಹಾಡುಗಳ ಸಂಭ್ರಮ.

ಅನುಭವ ಕಥನ: ದೇವರ ನಾಡಲ್ಲಿ ಕಣ್ಮನ ಸೆಳೆದ ‘ಕೇರಳೀಯಂ’ ಸೊಬಗು
ಕೇರಳೀಯಂ
Follow us
ರಶ್ಮಿ ಕಲ್ಲಕಟ್ಟ
|

Updated on: Nov 16, 2023 | 3:30 PM

ನವೆಂಬರ್ 1ರಂದು ನಮ್ಮ ರಾಜ್ಯ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ ಪಕ್ಕದ ರಾಜ್ಯ ಕೇರಳದಲ್ಲಿ (Kerala) ಕೇರಳಪ್ಪಿರವಿ ಸಂಭ್ರಮ. ಈ ಬಾರಿ ಕೇರಳ ಸರ್ಕಾರ ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿ ಕೇರಳೀಯಂ (Keraleeyam) ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕೇರಳದ ಕಲೆ, ಸಂಸ್ಕೃತಿ, ಜನಜೀವನ,ಶಿಕ್ಷಣ,ತಂತ್ರಜ್ಞಾನ ಮತ್ತು ಸಾಧನೆಯನ್ನು ಬಿಂಬಿಸುವ ಈ ಕಾರ್ಯಕ್ರಮ ನವೆಂಬರ್ 1ರಿಂದ 7ರವರೆಗೆ ಅದ್ದೂರಿಯಾಗಿಯೇ ನಡೆಯಿತು. ಎರಡು ದಿನಗಳ ಕಾಲ ಕೇರಳೀಯಂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇರಳದ ಬಗ್ಗೆ ಮತ್ತಷ್ಟು ಅರಿಯುವ ಅವಕಾಶ ಸಿಕ್ಕಿದರೆ ಬಿಡುವುದುಂಟೇ? ಕೇರಳೀಯಂ ಕಾರ್ಯಕ್ರಮದ ವೈಭವದ ಬಗ್ಗೆ ವಿವರಿಸುವುದಕ್ಕಿಂತ ಹೆಚ್ಚಾಗಿ ಎರಡು ದಿನಗಳ ಕಾಲ ತಿರುವನಂತಪುರಂನಲ್ಲಿ ಇದ್ದು ಆ ಊರಿನಲ್ಲಿ ನನಗೆ ಸಿಕ್ಕಿದ ಅನುಭವಗಳು, ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯವ ನೆನಪುಗಳನ್ನು ನಿಮ್ಮ ಜತೆ ಹಂಚಿಕೊಳ್ಳುವೆ.

ಹಾಂ..ಇನ್ನೊಂದು ವಿಷಯ ತಿರುವನಂತಪುರಂನ 42 ವೇದಿಕೆಗಳಲ್ಲಿ ಈ ಕಾರ್ಯಕ್ರಮಗಳು ನಡೆದಿವೆ. ಟ್ರೇಡ್ ಫೇರ್​​ 400 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರಾಜ್ಯದ ಗ್ರಾಮೀಣ ಕಲೆ ಮತ್ತು ಕರಕುಶಲ ಕಲೆ, ದೊಡ್ಡ ಮತ್ತು ಸಣ್ಣ ವ್ಯಾಪಾರ, ಕೃಷಿ, ಆಯುರ್ವೇದ, ಆಹಾರ ಉತ್ಪನ್ನಗಳಿಗೆ ಇಲ್ಲಿ ವೇದಿಕೆಯನ್ನು ನೀಡಲಾಗಿತ್ತು. ಅಷ್ಟೇ ಅಲ್ಲ, ವಿವಿಧ ವಿಷಯಗಳಲ್ಲಿ ಸೆಮಿನಾರ್​​​ಗಳೂ ಇದ್ದವು. ಕಡಿಮೆ ಸಮಯದಲ್ಲಿ ಇಷ್ಟೊಂದು ವಿಷಯಗಳನ್ನು ನೋಡುವುದು ಅಸಾಧ್ಯವಾದ ಕಾರಣ, ನಮ್ಮ ಆಸಕ್ತಿಯ ವಿಷಯಗಳಿರುವ ವೇದಿಕೆಗಳಿಗೆ ಮಾತ್ರ ನಾವು (ವಿವಿಧ ರಾಜ್ಯದಿಂದ ಬಂದ ಪತ್ರಕರ್ತರ ತಂಡ) ಭೇಟಿ ಕೊಟ್ಟಿದ್ದು.

ದಿ ಫೋರ್ಥ್ ಎಸ್ಟೇಟ್ ಆಂಡ್ ಬಿಯಾಂಡ್

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾಂಪ್ರದಾಯಿಕ ಮತ್ತು ಹೊಸ ಮಾಧ್ಯಮ ಅಭ್ಯಾಸಗಳನ್ನು ಮರು ವ್ಯಾಖ್ಯಾನಿಸುವ ಉದ್ದೇಶದಿಂದ ಟ್ಯಾಗೋರ್ ಥಿಯೇಟರ್ ಆವರಣದಲ್ಲಿ ಏರ್ಪಡಿಸಲಾದ ‘ದಿ ಫೋರ್ತ್ ಎಸ್ಟೇಟ್ ಅಂಡ್ ಬಿಯಾಂಡ್’ ಎಂಬ ಶೀರ್ಷಿಕೆಯ ಈ ಪ್ರದರ್ಶನದಲ್ಲಿ ಮಾಧ್ಯಮಗಳ ಪ್ರಗತಿ, ಮಹತ್ವದ ಸುದ್ದಿ ಘಟನೆಗಳು ಮತ್ತು ಕೇರಳದ ವಿಶಿಷ್ಟ ಬೆಳವಣಿಗೆಗಳನ್ನು ತೋರಿಸಲಾಗಿತ್ತು. ಅಂತರರಾಷ್ಟ್ರೀಯ ಛಾಯಾಚಿತ್ರಗಳು ಮತ್ತು ಮಾಧ್ಯಮ ಉಪಕರಣಗಳ ಪ್ರದರ್ಶನ, ಹಳೆಯ-ಶೈಲಿಯ ಟೈಪ್‌ರೈಟರ್‌ಗಳು ಮತ್ತು ಕ್ಯಾಮೆರಾಗಳಿಂದ ಹಿಡಿದು AI ಮತ್ತು VR ಸಿಸ್ಟಮ್‌ಗಳವರೆಗೆ ಇಲ್ಲಿ ಎಲ್ಲವನ್ನೂ ಕಾಣಬಹುದಾಗಿತ್ತು. ಮಲಯಾಳಂ ಪತ್ರಿಕೆಗಳ ಆರಂಭಿಕ ಸಂಚಿಕೆಗಳಾದ ರಾಜ್ಯಸಮಾಚಾರಂ, ಪಶ್ಚಿಮೋದಯಂ, ಭಾಷಾಪೋಷಿಣಿ, ವಿದ್ಯಾವಿಲಾಸಿನಿ, ಜ್ಞಾನನಿಷ್ಕಂ, ಓವಿ ವಿಜಯನ್, ಆರ್ ಶಂಕರ್ ಮತ್ತು ಅರವಿಂದನ್ ಅವರಂತಹ ಪ್ರಸಿದ್ಧ ಕಲಾವಿದರ ಕಾರ್ಟೂನ್‌ಗಳನ್ನು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕೇರಳದ ಸುದ್ದಿ ಪ್ರಸಾರ, ಹೆಸರಾಂತ ಛಾಯಾಗ್ರಾಹಕ ನಿಕುಟ್ ಅವರ ಚಿತ್ರಗಳನ್ನು ಒಳಗೊಂಡ ವಿಶೇಷ ಪ್ರದರ್ಶನ, ಕೇರಳ ರಾಜ್ಯಕ್ಕೆ ಸಂಬಂಧಿಸಿದ ಅಪರೂಪದ ವೃತ್ತಪತ್ರಿಕೆ ತುಣುಕುಗಳು ಮತ್ತು 23 ಮುಖ್ಯಮಂತ್ರಿಗಳ ಪ್ರಮಾಣ ವಚನದ ದಾಖಲೆ, ಇತಿಹಾಸದಲ್ಲಿನ ಪ್ರಸಿದ್ಧ ಘೋಷಣೆಗಳು, ಕಾಮಿಕ್ ಪುಸ್ತಕ ಡಿಜಿಟಲ್ ಕಲೆ, NFT ಕಲೆ ಮತ್ತು ಇತರ ಹಲವು ವೈಶಿಷ್ಟ್ಯಗಳು ಇಲ್ಲಿ ಕಾಣಲು ಸಿಕ್ಕಿದ್ದು ಹೊಸ ಅನುಭವ. ಪಕ್ಕದಲ್ಲೇ ಇದ್ದ ನಾರಾಯಣ ಭಟ್ಟತ್ತಿರಿ ಕ್ಯಾಲಿಗ್ರಫಿ ಪ್ರದರ್ಶನ ಮಳಿಗೆ, ಪೇಟಿಂಗ್ ಪ್ರದರ್ಶನ ಮಳಿಗೆಗಳಲ್ಲಿ ಸುತ್ತಾಡಿದಾಗ ಸಮಯ ಮಧ್ಯಾಹ್ನ 2 ಗಂಟೆ.

ಊಟ ಮುಗಿಸಿದ ನಂತರ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್ ಬಿಂದು ಅವರಲ್ಲಿ ಚಿಟ್ ಚಾಟ್ ನಡೆಸಿದ್ದು, ಅವರ ಮಾತಿನ ಮುಖ್ಯಾಂಶ ಮಾತ್ರ ಇಲ್ಲಿ ದಾಖಲಿಸುತ್ತಿದ್ದೇನೆ. ‘ಕೇರಳ ಪ್ರಗತಿ ಸಾಧಿಸುತ್ತಿದೆ. ಎಲ್ಲರಿಗೂ ಶಿಕ್ಷಣ ಎಲ್ಲರಿಗೂ ಸಾಮಾಜಿಕ ನ್ಯಾಯ ಲಭಿಸುವಂತೆ ಮಾಡುವುದೇ ನಮ್ಮ ಉದ್ದೇಶ. ಡಿಜಿಟಲೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಬದಲಾಗುತ್ತಿರುವ ಕೇರಳವನ್ನು ನಾವಿಲ್ಲಿ ಕಾಣಬಹುದು. ಹಿಂದುಳಿದ ವರ್ಗ, ಎಸ್ ಸಿ/ಎಸ್ ಟಿ, ಮೀನುಗಾರರು ಯಾರೂ ಇಲ್ಲಿ ಅವಕಾಶ ವಂಚಿತರು ಆಗಬಾರದು. ಎಲ್ಲರಿಗೂ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ದೊರಕಿಸುವುದಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಸಚಿವೆ ಬಿಂದು ಹೇಳಿದ್ದಾರೆ.

ಇದಾದ ನಂತರ ಸ್ಥಳೀಯ ಸ್ವಯಂ ಸರ್ಕಾರ ಮತ್ತು ಅಬಕಾರಿ ಸಚಿವ ಎಂ ಬಿ ರಾಜೇಶ್ ಅವರನ್ನು ಭೇಟಿಯಾಗುವ ಅವಕಾಶ ಅನಿರೀಕ್ಷಿತವಾಗಿತ್ತು. ಆದರೂ ಸಿಕ್ಕಿದ ಅವಕಾಶದಲ್ಲಿ ‘ನವಕೇರಳ’ ಗುರಿ ಬಗ್ಗೆ ಕೇಳಿದಾಗ, “ನಾವು ಸಾಮಾಜಿಕ ಭದ್ರತೆಗಾಗಿ ವರ್ಷಕ್ಕೆ ಸುಮಾರು 10,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ನವೆಂಬರ್ 1, 2025 ರ ವೇಳೆಗೆ ತೀವ್ರ ಬಡತನವನ್ನು ತೊಡೆದುಹಾಕುವ ಗುರಿಯನ್ನು ಹೊಂದಿದ್ದೇವೆ. ನೀತಿ ಆಯೋಗ್‌ನ ರಾಷ್ಟ್ರೀಯ ಶಾಲಾ ಗುಣಮಟ್ಟ ಸೂಚ್ಯಂಕದ ಪ್ರಕಾರ ಕೇರಳವು ಅತ್ಯುತ್ತಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಕೋವಿಡ್ ಸಾಂಕ್ರಾಮಿಕವನ್ನು ಸಮರ್ಥ ರೀತಿಯಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾದ ಅದರ ಉನ್ನತ-ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನೂ ನಾವು ಖಾತರಿ ಪಡಿಸುತ್ತೇವೆ. ಹಣಕಾಸಿನ ಅಂತರವನ್ನು ಕಡಿಮೆ ಮಾಡಲು ಮತ್ತು ಕಲ್ಯಾಣ ಯೋಜನೆಗಳಿಗೆ ಹಣವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ತೆರಿಗ ಹೆಚ್ಚಿಸಬೇಕಾಗಿತ್ತು. ಇದು ನಮ್ಮ ಗಮನಾರ್ಹ ಸಾಧನೆಯಾಗಿದೆ. ಕುಟುಂಬಶ್ರೀ ಮೂಲಕ ಮಹಿಳೆಯರ ಸಬಲೀಕರಣ ಆಗಿದೆ, ರಾಜ್ಯವನ್ನು ಮಾಲಿನ್ಯ ಮುಕ್ತವಾಗಿಸಲು, ಬಡತನವನ್ನು ತೊಡೆದುಹಾಕಲು ಮತ್ತು ಎಲ್ಲ ಸ್ತರದವರಿಗೂ ಉತ್ತಮ ಜೀವನಸಾಗಿಸುವಂತೆ ಅನುಕೂಲ ಕಲ್ಪಿಸಲು ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಸಚಿವರನ್ನು ಭೇಟಿಯಾದ ನಂತರ ಇಂಡಿಯನ್ ಕಾಫಿ ಹೌಸ್ ನಲ್ಲಿ ಕಾಫಿ ಜತೆ ಬೀಟ್ರೂಟ್ ಕಟ್ಲೆಟ್ ಸವಿದು ಸಿನಿಮಾ, ಜಾನಪದ ಕಲೆಗಳ ಪ್ರದರ್ಶನ ನೋಡಿ ಹೊರಡುವಾಗ ಹೊತ್ತು ಕತ್ತಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿರುವ ಕಟ್ಟಡಗಳ ಸೊಬಗನ್ನು ಮೊಬೈಲ್​​ನಲ್ಲಿ ಸೆರೆಹಿಡಿದು ನಾವು ಬಂದಿದ್ದು ಕೇರಳದ ನದಿಗಳ ಬಗ್ಗೆ ವಿವರಿಸುವ ಕಲಾರೂಪವನ್ನು ನೋಡಲು. ಅದನ್ನು ಕಣ್ತುಂಬಿಕೊಂಡು ಇನ್ನೊಂದು ವೇದಿಕೆಗೆ ಬಂದಾಗ ಅಲ್ಲಿ ವೆಸ್ಟರ್ನ್ ಡ್ಯಾನ್ಸ್,ಹಾಡುಗಳ ಸಂಭ್ರಮ. ಇನ್ನೊಂದಷ್ಟು ದೂರ ಬಂದರೆ ಲೈಟ್ ಶೋ. ಪುಡ್ ಫೆಸ್ಟಿವಲ್ ಎಂದು ಸೂಚನಾಫಲಕವಿದ್ದ ತಿಂಡಿ ಬೀದಿಗಳಲ್ಲಿ ಕಿಕ್ಕಿರಿದ ಜನಸಂದಣಿ, ಜತೆಗೆ ಪಿರಿಪಿರಿ ಮಳೆ. ಕೇರಳದ ಸಾಂಪ್ರದಾಯಿಕ ಆಹಾರಗಳು, ಕೇರಳ ಸ್ಪೆಷಲ್ ಬಾಳೆಕಾಯಿ ಚಿಪ್ಸ್, ಅಡ, ವಡ, ಕರಿದ ತಿಂಡಿ ಒಂದೆಡೆಯಾದರೆ, ಇಡ್ಲಿ,ದೋಸೆ,ಪುಟ್ಟು,ಅಪ್ಪಂ, ಪೊರೋಟಾ,ಬೀಫ್, ಮಟನ್, ಚಿಕನ್ ಘಮ ಇನ್ನೊಂದೆದೆ. ಅಲ್ಲಿ ಸ್ವಲ್ಪ ತಿಂಡಿಗಳನ್ನು ಸವಿದು ಆ ದಿನದ ಸುತ್ತಾಟ ಮುಗಿಸಿದ್ದಾಯ್ತು.

ಮರುದಿನ ಕ್ರಾಫ್ಟ್ ವಿಲೇಜ್ ಎಂಬ ಅದ್ಭುತ ಜಾಗಕ್ಕೆ ಹೋಗಿದ್ದೆವು. ಕೋವಳಂನಿಂದ ಸುಮಾರು 5 ಕಿಮೀದೂರದಲ್ಲಿರುವ ಈ ಕ್ರಾಫ್ಟ್ ವಿಲೇಜ್ ಕರಕುಶಲ ವಸ್ತುಗಳ ತಯಾರಿಕೆ, ಕಲಿಕೆ, ಪ್ರದರ್ಶನ ಮತ್ತು ಮಾರಾಟ ಕೇಂದ್ರ.ಅಲ್ಲಿಂದ ಮತ್ತೆ ಕೇರಳೀಯಂ ನಡೆಯುವ ತಿರುವನಂತಪುರಂ ಪಟ್ಟಣಕ್ಕೆ ಬಂದು ನೇರ ಹೊಕ್ಕಿದ್ದು ಪುಸ್ತಕ ಪ್ರದರ್ಶನ ಮಳಿಗೆಗೆ. ಕೇರಳದ ಬಹುತೇಕ ಎಲ್ಲ ಪುಸ್ತಕ ಪ್ರಕಾಶಕರು ಇಲ್ಲಿ ಪುಸ್ತಕ ಮಾರಾಟ ಮಾಡುತ್ತಿದ್ದು, ಪುಸ್ತಕ ಪ್ರೇಮಿಗಳು ಇದನ್ನು ಮಿಸ್ ಮಾಡುವಂತಿರಲಿಲ್ಲ. ಒಂದಷ್ಟು ಪುಸ್ತಕಗಳನ್ನು ಕೊಂಡು ಹತ್ತಿರದಲ್ಲೇ ಇರುವ ಪಾಳಯಂ ಪಳ್ಳಿ ಎಂದು ಕರೆಯಲ್ಪಡುವ ಸೇಂಟ್ ಜಾಸೆಫ್ ಕೆಥಿಡ್ರಲ್​​​, ಅನಂತಪುರಿಯ ಅನಂತ ಪದ್ಮನಾಭ ಸ್ವಾಮಿ ದೇಗುಲಕ್ಕೂ ಭೇಟಿ ಕೊಟ್ಟು ಅಲ್ಲಿನ ರಸ್ತೆಬದಿ ತಿಂಡಿಗಳನ್ನೂ ಸವಿದು ಮಾನವೀಯಂ ವೀಥಿಯ ಸೊಬಗು ನೋಡಿ ಕಣ್ತುಂಬಿಕೊಂಡೆವು.

ಅಚ್ಚುಕಟ್ಟಾಗಿ ಮಾಡಿದ ಈ ಕಾರ್ಯಕ್ರಮದದ ಬಗ್ಗೆ ಅಚ್ಚರಿಯಿಂದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರದ ಸಹಾಯಕ ಮಾಹಿತಿ ಅಧಿಕಾರಿ ಎಂ. ಅಮಿಯಾ, ಇದು ನಮ್ಮ ಮೊದಲ ಕಾರ್ಯಕ್ರಮ. ಪ್ರತೀ ವರ್ಷವೂ ಇದನ್ನು ನಡೆಸಲು ನಾವು ತೀರ್ಮಾನಿಸಿದ್ದೇವೆ. ಕೇರಳೀಯಂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ನಾವು ಚಿಂತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನೊಂದಷ್ಟು ಹೊತ್ತು ಅಲ್ಲಿರಬೇಕಿತ್ತು ಎಂದು ಮನಸ್ಸು ಬಯಸಿದರೂ ಸಮಯದ ಅಭಾವ, ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ತಿರುವನಂತಪುರಂಗೆ ಗುಡ್ ಬೈ ಹೇಳಲೇ ಬೇಕಾಗಿ ಬಂತು. ಅಲ್ಲಲ್ಲಿ ಕಂಡ ನಗು ಮುಖಗಳು, ಈ ಎರಡು ದಿನದ ಭೇಟಿಯಲ್ಲಿ ಜತೆಯಾದ ಬೇರೆ ರಾಜ್ಯಗಳ ಪತ್ರಕರ್ತರು, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳ ಆತ್ಮೀಯ ಆತಿಥ್ಯ ಈ ಭೇಟಿಯ ನೆನಪನ್ನು ಮತ್ತಷ್ಟು ಸುಮಧುರವಾಗಿಸಿತ್ತು. ಹೇಗಿತ್ತು ಅಲ್ಲಿನ ಅನುಭವ ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರ ಹೀಗೆ ಹೇಳಬಹುದು “So beautiful, so elegant, just looking like a wow”

ಮತ್ತಷ್ಟು ವಿಶೇಷ ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ