ಕೇರಳದ ತಿರುವನಂತಪುರಂ ಜಿಲ್ಲೆಯ ಶಾರ್ಕ್ಕರ ದೇವಿ ದೇವಸ್ಥಾನದ ಆವರಣದಲ್ಲಿ ಆರ್‌ಎಸ್‌ಎಸ್ ಶಸ್ತ್ರಾಸ್ತ್ರ ತರಬೇತಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ತರಬೇತಿ ಶಿಬಿರದ ವಿರುದ್ಧ ಇಬ್ಬರು ಭಕ್ತರು ಅರ್ಜಿ ಸಲ್ಲಿಸಿದ್ದರು. ಆರ್‌ಎಸ್‌ಎಸ್ ದೇವಸ್ಥಾನವನ್ನು ಅಕ್ರಮವಾಗಿ ಬಳಸುತ್ತಿದೆ ಎಂದು ದೂರಿದ್ದರು, ಈ ದೇವಾಲಯದ ನಿರ್ವಹಣೆಯ ಜವಾಬ್ದಾರಿಯು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮೇಲಿದೆ.
ಇಬ್ಬರು ಭಕ್ತರ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಥವಾ ಅದರ ಸದಸ್ಯರು ದೇವಸ್ಥಾನದ ಆವರಣವನ್ನು ಅನಧಿಕೃತವಾಗಿ ಬಳಸುವುದನ್ನು ಮತ್ತು ಅನಧಿಕೃತವಾಗಿ ವಶಪಡಿಸಿಕೊಳ್ಳುವುದನ್ನು ತಡೆಯಲು ಆದೇಶ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ತನ್ನ ಹಿಂದಿನ ಆದೇಶವನ್ನು ಅನುಸರಿಸಿ ಅಗತ್ಯ ನೆರವು ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಮಂಡಳಿಯು ಆರ್‌ಎಸ್‌ಎಸ್ ತನ್ನ ಧಾರ್ಮಿಕ ಸ್ಥಳಗಳಲ್ಲಿ ಶಾಖೆಗಳನ್ನು ಸ್ಥಾಪಿಸುವುದನ್ನು ಮತ್ತು ತರಬೇತಿ ನಡೆಸುವುದನ್ನು ನಿಷೇಧಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಆರ್‌ಎಸ್‌ಎಸ್ ಸದಸ್ಯರು ದೇವಸ್ಥಾನದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಆರ್ಎಸ್ಎಸ್ಗೆ ಜಮೀನು ಹಸ್ತಾಂತರಕ್ಕೆ ತಡೆ, ಸದನದಲ್ಲಿ ಮಾಹಿತಿ ನೀಡಿದ ಕೃಷ್ಣಬೈರೇಗೌಡ
ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್ ಕುಮಾರ್ ಅವರಿದ್ದ ಪೀಠ ಇತ್ತೀಚಿನ ಆದೇಶದಲ್ಲಿ, ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ವಹಿಸುತ್ತಿರುವ ದೇವಾಲಯದ ಆವರಣದಲ್ಲಿ ಸಾಮೂಹಿಕ ಅಭ್ಯಾಸ ಅಥವಾ ಆಯುಧ ಅಭ್ಯಾಸವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಕೇರಳದ ದೇವಾಲಯಗಳನ್ನು ನಿರ್ವಹಿಸುವ ಮಂಡಳಿಯು ಮೇ 18 ರಂದು ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ಅಧಿಕಾರಿಗಳಿಗೆ ಕೇಳಿಕೊಂಡಿದೆ. ಹಿಂದಿನ ಆದೇಶದಲ್ಲಿ, ಮಂಡಳಿಯ ಅಡಿಯಲ್ಲಿ ಧಾರ್ಮಿಕ ಸ್ಥಳ ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ನ ಶಾಖಾ ಅಥವಾ ಗುಂಪು ಅಭ್ಯಾಸ ಮಾಡುವುದನ್ನು ನಿಷೇಧಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:24 am, Tue, 12 September 23