ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: 5 ಜಿಲ್ಲೆಗಳಲ್ಲಿ ಇಂದು ಮತದಾನ

| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2020 | 5:02 PM

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೊದಲ ಹಂತದಲ್ಲಿ ತಿರುವನಂತಪುರಂ, ಕೊಲ್ಲಂ ಇಡುಕ್ಕಿ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: 5 ಜಿಲ್ಲೆಗಳಲ್ಲಿ ಇಂದು ಮತದಾನ
ಸಾಂದರ್ಭಿಕ ಚಿತ್ರ
Follow us on

ತಿರುವನಂತಪುರಂ: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೊದಲ ಹಂತದಲ್ಲಿ ತಿರುವನಂತಪುರಂ, ಕೊಲ್ಲಂ ಇಡುಕ್ಕಿ, ಪತ್ತನಂತಿಟ್ಟ, ಆಲಪ್ಪುಳ ಈ ಐದು ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯಲಿದೆ. ಪ್ರಚಾರ ಕಾರ್ಯಕ್ರಮ ಭಾನುವಾರವೇ ಮುಗಿದಿದ್ದು, ಸೋಮವಾರ ಮನೆಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.

ಈ ಚುನಾವಣೆಯಲ್ಲಿ 24,584 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 88,26. 620 ಮತದಾರರು ಇದ್ದಾರೆ. 5 ಜಿಲ್ಲೆಗಳಲ್ಲಿ 46,68,209 ಮಹಿಳೆಯರಿಗೆ, 41,58,341 ಪುರುಷರಿಗೆ ಮತ್ತು 70 ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು ಇದೆ.

ತಿರುವನಂತಪುರಂನಲ್ಲಿ ಅತೀ ಹೆಚ್ಚು ಮತ್ತು ಇಡುಕ್ಕಿಯಲ್ಲಿ ಅತೀ ಕಡಿಮೆ ಮತದಾರರರು ಇದ್ದಾರೆ. 11.225 ಮತಗಟ್ಟೆಗಳಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾವಾರು ಲೆಕ್ಕಾಚಾರ

ತಿರುವನಂತಪುರಂ: ಕಳೆದ ಬಾರಿ ಕಾರ್ಪೊರೇಷನ್, ಜಿಲ್ಲಾ ಪಂಚಾಯತ್, ಬ್ಲಾಕ್ ಪಂಚಾಯತ್, ಮುನ್ಸಿಪಾಲಿಟಿ ಮತ್ತು ಗ್ರಾಮ ಪಂಚಾಯತ್​​ಗಳಲ್ಲಿ ಎಲ್​​ಡಿಎಫ್ ಗೆದ್ದು ಬೀಗಿತ್ತು. 2015ರಲ್ಲಿ ಜಿಲ್ಲಾ ಪಂಚಾಯತ್​ನ 20 ಸೀಟುಗಳಲ್ಲಿ 20 ಸೀಟುಗಳಲ್ಲಿ ಎಲ್​​ಡಿಎಫ್ ಗೆದ್ದಿತ್ತು. 5 ಡಿವಿಷನ್​​ಗಳಲ್ಲಿ ಕಾಂಗ್ರೆಸ್ ಮತ್ತು 1 ಸೀಟು ಬಿಜೆಪಿ ಗೆದ್ದಿತ್ತು. ಕಾರ್ಪೊರೇಷನ್ ಚುನಾವಣೆಯಲ್ಲಿ 100 ಸೀಟುಗಳಲ್ಲಿ 41 ವಾರ್ಡ್​ಗಳನ್ನು ಗೆದ್ದು ಎಲ್​ಡಿಎಫ್ ಅಧಿಕಾರ ಉಳಿಸಿಕೊಂಡಿತ್ತು. ಅದೇ ಹೊತ್ತಲ್ಲಿ ಬಿಜೆಪಿ 35 ವಾರ್ಡ್​ಗಳಲ್ಲಿ ಮತ್ತು ಯುಡಿಎಫ್ 20 ಸೀಟುಗಳನ್ನು ಗೆದ್ದುಕೊಂಡಿತ್ತು. ನಾಲ್ಕು ಮುನ್ಸಿಪಾಲಿಟಿಗಳಲ್ಲಿ ಗೆಲುವು ಸಾಧಿಸಿದ ಎಲ್​​ಡಿಎಫ್ 11 ಬ್ಲಾಕ್ ಪಂಚಾಯತ್​ಗಳಲ್ಲಿ 9 ಮತ್ತು 73 ಗ್ರಾಮ ಪಂಚಾಯತ್​ಗಳಲ್ಲಿ 52 ಸೀಟು ಗೆದ್ದಿತ್ತು.

ಪತ್ತನಂತಿಟ್ಟ
ಯುಡಿಎಫ್ ಮತ್ತು ಎಲ್​​ಡಿಎಫ್ ನಡುವೆ ತೀವ್ರ ಪೈಪೋಟಿ ಇರುವ ಜಿಲ್ಲೆ ಪತ್ತನಂತಿಟ್ಟ. ಆದರೆ ಈ ಬಾರಿ ಯಾರು ಹೆಚ್ಚು ಸೀಟು ಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆಲಪ್ಪುಳ
ಎಡಪಕ್ಷ ಪ್ರಾಬಲ್ಯವಿರುವ ಜಿಲ್ಲೆಯಾಗಿದೆ ಆಲಪ್ಪುಳ. ಜಿಲ್ಲಾ ಪಂಚಾಯತ್ ಸೇರಿದಂತೆ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಎಲ್​​ಡಿಎಫ್ ಅಧಿಕಾರದಲ್ಲಿದೆ. ಮುನ್ಸಿಪಾಲಿಟಿಯಲ್ಲಿ ಮಾತ್ರ ಯುಡಿಎಫ್ ಅಧಿಕಾರದಲ್ಲಿದೆ. 12 ಬ್ಲಾಕ್ ಪಂಚಾಯತ್, 6 ನಗರ ಸಭೆ ಮತ್ತು 72 ಪಂಚಾಯತ್​ಗಳು ಇಲ್ಲಿವೆ.

ಜಿಲ್ಲಾ ಪಂಚಾಯತ್, 2 ನಗರಸಭೆ, 10 ಬ್ಲಾಕ್ ಪಂಚಾಯತ್, 46 ಪಂಚಾಯತ್​ನಲ್ಲಿ ಎಲ್​ಡಿಎಫ್ ಮತ್ತು 4 ನಗರಸಭೆ , 26 ಗ್ರಾಮ ಪಂಚಾಯತ್, 2 ಬ್ಲಾಕ್ ಪಂಚಾಯತ್ ಗಳಲ್ಲಿ ಯುಡಿಎಫ್ ಅಧಿಕಾರದಲ್ಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದ್ದೂ ಆಮೇಲೆ ನಷ್ಟವಾಗಿತ್ತು.  ಜಿಲ್ಲಾ ಪಂಚಾಯತ್​ನ 23 ಸೀಟುಗಳಲ್ಲಿ 17 ಸೀಟುಗಳನ್ನು ಎಲ್​ಡಿಎಫ್ ಮತ್ತು 6 ಸೀಟುಗಳಲ್ಲಿ ಯುಡಿಎಫ್ ಗೆದ್ದಿತ್ತು. 6 ನಗರಸಭೆಗಳಲ್ಲಿನ 215 ಸೀಟುಗಳಲ್ಲಿ 90 ಸೀಟು ಯುಡಿಎಫ್ ಗೆದ್ದಾಗ 88 ಸೀಟುಗಳಲ್ಲಿ ಎಲ್​​ಡಿಎಫ್ ಗೆದ್ದುಕೊಂಡಿತ್ತು.

ಇಡುಕ್ಕಿ
ಎರಡು ನಗರಸಭೆ, 8 ಬ್ಲಾಕ್ ಪಂಚಾಯತ್, 52 ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್​ಗಳು ಇಡುಕ್ಕಿ ಜಿಲ್ಲೆಯಲ್ಲಿದೆ. ಇಲ್ಲಿನ 8 ಬ್ಲಾಕ್ ಪಂಚಾಯತ್ ಚುನಾವಣೆ ಎಲ್​ಡಿಎಫ್ ಮತ್ತು ಯುಡಿಎಫ್​ಗೆ ನಿರ್ಣಾಯಕ ಪಾತ್ರವಹಿಸಲಿದೆ.

ಕೊಲ್ಲಂ
ಎನ್​ಡಿಎ ಮತ್ತು ಯುಡಿಎಫ್ ಈ ಬಾರಿಯೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸದಲ್ಲಿದೆ ಎಲ್​​ಡಿಎಫ್. ಇತ್ತಿಕ್ಕರ ಬ್ಲಾಕ್ ಪಂಚಾಯತ್​ನಲ್ಲಿ ಕಳೆದ ಬಾರಿ 13 ಸೀಟುಗಳಲ್ಲಿ 12 ಸೀಟು ಗೆದ್ದು ಅಧಿಕಾರಕ್ಕೇರಿದ ಎಲ್ ಡಿಎಫ್ ಗೆ ಈ ಬಾರಿ ಅಷ್ಟು ಸುಲಭದಲ್ಲಿ ಸೀಟು ಗೆಲ್ಲಲು ಸಾಧ್ಯವಾಗುವುದಿಲ್ಲ ಅಂತಾರೆ ರಾಜಕೀಯ ವಿಶ್ಲೇಷಕರು. ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್​ಗಳಲ್ಲಿ ಈ ಬಾರಿ ಎಲ್​​ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೋವಿಡ್ ರೋಗಿಗಳು ಪಿಪಿಇ ಕಿಟ್ ಧರಿಸಿಯೇ ಬರಬೇಕು

ಕೋವಿಡ್ ರೋಗಿಗಳು, ಕ್ವಾರಂಟೈನ್​​ನಲ್ಲಿರುವವರು ಮತದಾನದ ದಿನ ಸಂಜೆ 3 ಗಂಟೆಯ ನಂತರ ಮತಗಟ್ಟೆಗೆ ಬಂದು ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಈ ರೀತಿಯ ಮತದಾರರು ಡೆಸಿಗ್ನೇಟೆಡ್ ಹೆಲ್ತ್ ಆಫೀಸರ್ ಬಳಿ ಫಾರಂ ನಂ.19 ಸಿಯಲ್ಲಿ ದಾಖಲೆಪತ್ರಗಳನ್ನು ಲಗತ್ತಿಸಿರಬೇಕು. ಸಂಜೆ ಆರು ಗಂಟೆಗಿಂತ ಮುನ್ನ ಮತಗಟ್ಟೆಗೆ ತಲುಪಬೇಕು. ಅಲ್ಲಿಯವರೆಗೆ ಸರದಿ ಸಾಲಿನಲ್ಲಿದ್ದ ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಿದ ನಂತರವೇ ಇವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುವುದು.

ವಿಶೇಷ ಮತದಾರರು ಎಂದು ಗುರುತಿಸಿರುವ ಕೋವಿಡ್ ರೋಗಿಗಳು ಮತಗಟ್ಟೆಗೆ ಬರುವ ಮುನ್ನ ಮತಗಟ್ಟೆ ಅಧಿಕಾರಿಗಳು ಮತ್ತು ಏಜೆಂಟರು ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಬೇಕು. ಮತದಾರರು ಕೈವಗಸು ಧರಿಸದೆ ಮತಯಂತ್ರ ಮುಟ್ಟುವಂತಿಲ್ಲ. ಕೋವಿಡ್ ಸೋಂಕಿತರು ಸಹಿ ಹಾಕಲು ಪ್ರತ್ಯೇಕ ಪೆನ್ ಬಳಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳನ್ನು ಆರೋಗ್ಯ ಇಲಾಖೆ ಮತಗಟ್ಟೆಗೆ ತಲುಪಿಸುತ್ತದೆ. ಸರ್ಕಾರದ ಅಧೀನದಲ್ಲಿ ಇಲ್ಲದೇ ಇರುವ ಸಂಸ್ಥೆ, ಖಾಸಗಿ ಆಸ್ಪತ್ರೆ ಅಥವಾ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ತಮ್ಮದೇ ಖರ್ಚಿನಲ್ಲಿ ಪಿಪಿಇ ಕಿಟ್ ಧರಿಸಿಬೇಕು. ಪ್ರತ್ಯೇಕ ವಾಹನದಲ್ಲಿ ಬರಬೇಕು ಮತ್ತು ವಾಹನ ಚಾಲಕ ಕೂಡಾ ಪಿಪಿಇ ಕಿಟ್ ಧರಿಸಬೇಕು. ಮತದಾನದ ವೇಳೆ ಅಲ್ಲಿರುವ ಅಧಿಕಾರಿಗಳು ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಜರ್, ಕೈಗವಸು ಧರಿಸುವುದು ಕಡ್ಡಾಯ.

– ರಶ್ಮಿ ಕೆ.

ಕೇರಳ ಚುನಾವಣೆ: 11 ವರ್ಷಗಳ ಹಿಂದೆ ಯೋಧನನ್ನು ರಕ್ಷಿಸುವಾಗ ಕೈ ಕಳೆದುಕೊಂಡ ಯುವತಿ ಈಗ ಬಿಜೆಪಿ ಅಭ್ಯರ್ಥಿ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ರಹಸ್ಯ ಮೈತ್ರಿ: ಪಿಣರಾಯಿ ವಿಜಯನ್ ಆರೋಪ

Published On - 8:20 pm, Mon, 7 December 20