ವರದಕ್ಷಿಣೆ ಪಡೆದಿಲ್ಲ ಎಂಬ ಘೋಷಣಾ ಪತ್ರ ಸಲ್ಲಿಸಿ; ಕೇರಳದ ಎಲ್ಲ ಸರ್ಕಾರಿ ಪುರುಷ ಉದ್ಯೋಗಿಗಳಿಗೆ ಸುತ್ತೋಲೆ ಮೂಲಕ ಸೂಚನೆ

| Updated By: Lakshmi Hegde

Updated on: Jul 25, 2021 | 5:02 PM

ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. 5 ವರ್ಷಗಳಿಗೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ನೀಡಬಹುದು. 15,000 ರೂ.ವರೆಗೂ ದಂಡ ವಿಧಿಸಬಹುದು ಎಂದೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ವರದಕ್ಷಿಣೆ ಪಡೆದಿಲ್ಲ ಎಂಬ ಘೋಷಣಾ ಪತ್ರ ಸಲ್ಲಿಸಿ; ಕೇರಳದ ಎಲ್ಲ ಸರ್ಕಾರಿ ಪುರುಷ ಉದ್ಯೋಗಿಗಳಿಗೆ ಸುತ್ತೋಲೆ ಮೂಲಕ ಸೂಚನೆ
ಪ್ರಾತಿನಿಧಿಕ ಚಿತ್ರ
Follow us on

ಕೇರಳ ಸರ್ಕಾರಿ ಉದ್ಯೋಗದಲ್ಲಿರುವ ಪುರುಷ ಉದ್ಯೋಗಿಗಳು, ತಾವು ಮದುವೆಯಾದ ವರ್ಷ, ದಿನಾಂಕ ಮತ್ತು ಮದುವೆ ಸಂದರ್ಭದಲ್ಲಿ ವಧುವಿನ ಕುಟುಂಬದಿಂದ ಯಾವುದೇ ರೀತಿಯ ವರದಕ್ಷಿಣೆ ಪಡೆದಿಲ್ಲ ಎಂಬ ಘೋಷಣಾ ಪತ್ರ (Declaration)ವನ್ನು ಸಲ್ಲಿಸಬೇಕು. ಆ ಲಿಖಿತ ಘೋಷಣಾ ಪತ್ರದ ಮೇಲೆ ಉದ್ಯೋಗಿಯ ತಂದೆ, ಪತ್ನಿ ಮತ್ತು ಪತ್ನಿಯ ಅಪ್ಪ (ಮಾವ)ನ ಸಹಿ ಇರಬೇಕು. ಇನ್ನೊಂದು ತಿಂಗಳೊಳಗೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ಪುರುಷ ಉದ್ಯೋಗಿಯೂ ದಾಖಲೆ ಸಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

ಇಂಥ ಒಂದು ಸುತ್ತೋಲೆಯನ್ನು ಕೇರಳ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿದೆ. ಇದರ ನಿರ್ದೇಶಕರಾದ ಟಿ.ವಿ.ಅನುಪಮಾ ಅವರ ಹೆಸರು, ಸಹಿ ಇರುವ ಸುತ್ತೋಲೆಯಲ್ಲಿ, ಸರ್ಕಾರಿ ಪುರುಷ ಉದ್ಯೋಗಿಗಳು ನೀಡುವ, ವರದಕ್ಷಿಣೆ ಪಡೆದಿಲ್ಲ ಮತ್ತು ವರದಕ್ಷಿಣೆ ಕೇಳಿಲ್ಲ ಎಂಬ ಘೋಷಣಾ ಪತ್ರವನ್ನು ಸಂಗ್ರಹಿಸುವಂತೆ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಹಾಗೇ, ಆಯಾ ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿಗಳ ಹೆಗಲಿಗೆ ಈ ಜವಾಬ್ದಾರಿ ವಹಿಸಲಾಗಿದೆ.

ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. 5 ವರ್ಷಗಳಿಗೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ನೀಡಬಹುದು. 15,000 ರೂ.ವರೆಗೂ ದಂಡ ವಿಧಿಸಬಹುದು ಎಂದೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳ ಸಂಬಂಧ ಹಲವು ಯುವತಿಯರು ಮೃತಪಟ್ಟ ವರದಿಯಾದ ಬೆನ್ನಲ್ಲೇ ಇತ್ತೀಚೆಗೆ ಕೇರಳ ಸರ್ಕಾರ, ವರದಕ್ಷಿಣೆ ನಿಷೇಧ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಅದರಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರೇ, ವರದಕ್ಷಿಣೆ ನಿಷೇಧ ಮುಖ್ಯ ಅಧಿಕಾರಿಯೂ ಆಗಿರುತ್ತಾರೆ.

ಇದನ್ನೂ ಓದಿ: Virender Sehwag: ಟೀಮ್ ಇಂಡಿಯಾದ ಇಬ್ಬರು ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದ ಸೆಹ್ವಾಗ್

Kerala male Government employees to submit no dowry declarations By one month