ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮ ವಿರುದ್ಧ ಸಿಡಿದೆದ್ದ ರೈತರು; ಪೊಲೀಸರಿಂದ ಅಶ್ರುವಾಯು ಪ್ರಯೋಗ

|

Updated on: Jan 10, 2021 | 3:59 PM

ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಇಂದು ನಡೆಯಲು ನಿಗದಿಯಾಗಿದ್ದ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದ ವೇದಿಕೆಯನ್ನು ಪ್ರತಿಭಟನಾನಿರತ ರೈತರು ಧ್ವಂಸ ಮಾಡಿದ್ದು, ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮ ವಿರುದ್ಧ ಸಿಡಿದೆದ್ದ ರೈತರು; ಪೊಲೀಸರಿಂದ ಅಶ್ರುವಾಯು ಪ್ರಯೋಗ
ಪ್ರತಿಭಟನಾಕಾರರು ಹೆಲಿಪ್ಯಾಡ್ ಹಾನಿಮಾಡಿರುವುದು
Follow us on

ನವದೆಹಲಿ: ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದ ವೇದಿಕೆಗೆ ಪ್ರತಿಭಟನಾ ನಿರತ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ಪ್ರಯೋಜನದ ಬಗ್ಗೆ ವಿವರಿಸಲು ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿತ್ತು. ರೈತರ ಆಕ್ರೋಶ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ಕಾರ್ಯಕ್ರಮ ರದ್ದು ಮಾಡಿದ್ದಾರೆ.

ಕಪ್ಪು ಧ್ವಜ ಹಿಡಿದು ಬ್ಯಾರಿಕೇಡ್​ಗಳನ್ನು ದಾಟಿ ರೈತರು ಕಾರ್ಯಕ್ರಮದ ವೇದಿಕೆಗೆ ನುಗ್ಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಮುಖ್ಯಮಂತ್ರಿ ಖಟ್ಟರ್ ಅವರ ಹೆಲಿಕಾಪ್ಟರ್ ಇಳಿಯಲು ತಾತ್ಕಾಲಿಕ ಹೆಲಿಪ್ಯಾಡ್​​ನ್ನು  ಅಲ್ಲಿ ನಿರ್ಮಿಸಲಾಗಿತ್ತು. ಪ್ರತಿಭಟನಾನಿರತ ರೈತರು ಹೆಲಿಪ್ಯಾಡ್ ಗೂ ಮುತ್ತಿಗೆ ಹಾಕಿದಾಗ ಪೊಲೀಸರು ಅವರನ್ನು ಚದುರಿಸಲು ಜಲಫಿರಂಗಿ ಬಳಸಿದ್ದರು. ರೈತರ ಪ್ರತಿಭಟನೆಯಿಂದಾಗಿ ಕಾರ್ಯಕ್ರಮ ರದ್ದು ಮಾಡಬೇಕಾಗಿ ಬಂತು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಗುರ್ ನಾಮ್ ಸಿಂಗ್ ಚರುನಿ ಮತ್ತು ಬಿಜೆಪಿ ನಾಯಕ ರಮಣ್ ಮಲ್ಲಿಕ್ ಹೇಳಿದ್ದಾರೆ.

ಈ ರೀತಿಯ ಸಭೆಗಳನ್ನು ಆಯೋಜಿಸುವ ಮೂಲಕ ಖಟ್ಟರ್ ಅವರು ರೈತರನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಚರುನಿ) ರೈತರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಿರಿ ಎಂದು ಒತ್ತಾಯಿಸಿ ಕಳೆದ 45 ದಿನಗಳಿಂದ ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನಾನಿರತರಾಗಿರುವಾಗ ಮಹಾಪಂಚಾಯತ್ ಕಾರ್ಯಕ್ರಮವನ್ನು ಆಯೋಜಿಸುವ ಅಗತ್ಯವೇನಿತ್ತು ಎಂದು ರೈತರು ಪ್ರಶ್ನಿಸಿದ್ದಾರೆ.

ರೈತರ ವಿರುದ್ಧ ಪೊಲೀಸರು ಜಲಫಿರಂಗಿ, ಅಶ್ರುವಾಯ ಪ್ರಯೋಗ ಮಾಡಿದ್ದಕ್ಕೆ ಕಾಂಗ್ರೆಸ್ ನೇತಾರ ರಣದೀಪ್ ಸಿಂಗ್ ಸುರ್ಜೇವಾಲ, ಖಟ್ಟರ್ ವಿರುದ್ಧ ಕಿಡಿಕಾರಿದ್ದಾರೆ.

 

ಗೌರವಾನ್ವಿತ ಮನೋಹರ್ ಲಾಲ್ ಜೀ, ಕೈಮ್ಲಾ ಗ್ರಾಮದಲ್ಲಿ ಕಿಸಾನ್ ಮಹಾಪಂಚಾಯತ್ ಎಂಬ ತೋರಿಕೆಯ ಕಾರ್ಯಕ್ರಮವನ್ನು ನಿಲ್ಲಿಸಿ. ನಮಗೆ ಆಹಾರ ನೀಡುವ ಜನರ ಭಾವನೆಗಳೊಂದಿಗೆ ಆಟವಾಡಬೇಡಿ. ದಯವಿಟ್ಟು ಕಾನೂನು ವ್ಯವಸ್ಥೆಯಲ್ಲಿ ಅಧಿಕ ಪ್ರಸಂಗಿತನ ನಿಲ್ಲಿಸಿ ಎಂದು ಟ್ವೀಟಿಸಿದ್ದಾರೆ.

ಕೃಷಿ ಕಾನೂನು ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ

 

Published On - 3:53 pm, Sun, 10 January 21