ಟ್ರಂಪ್ ಬೆಂಬಲಿಗರ ಗಲಾಟೆ: ಟ್ವಿಟರ್ ಸಿಇಒ ವಿರುದ್ಧ ಹರಿಹಾಯ್ದ ಕಂಗನಾ ರನೌತ್

ಟ್ರಂಪ್ ಪರ ಪ್ರತಿಭಟನೆಯ ನಂತರ ಡೊನಾಲ್ಡ್ ಟ್ರಂಪ್ ವೈಯಕ್ತಿಕ ಖಾತೆಯನ್ನು ರದ್ದುಗೊಳಿಸಿರುವ ಟ್ವಿಟರ್​ನ್ನು ಕಂಗನಾ ರನೌತ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ರಂಪ್ ಬೆಂಬಲಿಗರ ಗಲಾಟೆ: ಟ್ವಿಟರ್ ಸಿಇಒ ವಿರುದ್ಧ ಹರಿಹಾಯ್ದ ಕಂಗನಾ ರನೌತ್
ನಟಿ ಕಂಗನಾ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2021 | 1:22 PM

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಗಲಾಟೆ ನಂತರ ಟ್ವಿಟರ್ ಡೊನಾಲ್ಡ್ ಟ್ರಂಪ್​ ವೈಯಕ್ತಿಕ ಟ್ವಿಟರ್ ಖಾತೆಯನ್ನು ಅಳಿಸಿ ಹಾಕಿತ್ತು. ಜೊತೆಗೆ, ಅವರ ಬೆಂಬಲಿಗರ ಟ್ವಿಟರ್ ಖಾತೆಗೂ ಇದೇ ದಾರಿ ತೋರಿತ್ತು. ಟ್ವಿಟರ್​ನ ಈ ನಡೆಯನ್ನು ಖಂಡಿಸುವ ಮೂಲಕ ಕಂಗನಾ ರನೌತ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

2015ರಲ್ಲಿ ಟ್ವಿಟರ್ ಸಿಇಒ ಜಾಕ್ ಡೊರ್ಸೆ, ‘ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲುತ್ತದೆ. ಸತ್ಯವನ್ನು ಹೇಳಲು ವೇದಿಕೆಯಾಗಿ ಟ್ವಿಟರ್ ಕೆಲಸ ನಿರ್ವಹಿಸುತ್ತದೆ ಎಂದು ಟ್ವೀಟ್ ಮಾಡಿದ್ದರು. ಅದರ ಸ್ಕ್ರೀನ್ ಶಾಟ್ ಹಂಚಿರುವ ಕಂಗನಾ ರನೌತ್ ‘ಇಸ್ಲಾಮಿಕ್ ದೇಶಗಳು ಮತ್ತು ಚೀನಾ ನಿಮ್ಮನ್ನು ಖರೀದಿಸಿವೆ. ಕ್ಷುಲ್ಲಕ ಲಾಭದ ಹಿಂದೆ ಬಿದ್ದಿರುವ ನೀವು ಆಗದವರ ವಿರುದ್ಧ ಅಸಹನೆ ಪ್ರದರ್ಶಿಸುತ್ತಿದ್ದೀರಿ. ಆಸೆಯ ಗುಲಾಮರಾಗಿದ್ದೀರಿ. ದಯವಿಟ್ಟು ಮತ್ತೊಮ್ಮೆ ಇಂತಹ ವಿಷಯಗಳನ್ನು ಬೋಧಿಸಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ವೈಯಕ್ತಿಕ ಖಾತೆ ರದ್ದುಪಡಿಸಿದ ಕುರಿತು ಟ್ವಿಟರ್ ಸಂಸ್ಥೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಕಂಗನಾ. ಅಂದ ಹಾಗೆ, ಕೇವಲ ಕಂಗನಾ ರನೌತ್ ಮಾತ್ರವಲ್ಲ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಜಾಗತಿಕ ದೈತ್ಯ ಟೆಕ್ ಕಂಪನಿಗಳು ಅನುಸರಿಸುವ ಕ್ರಮಗಳ ಕುರಿತು ನಿನ್ನೆ ಧ್ವನಿ ಎತ್ತಿದ್ದರು. ಭಾರತ ಜಾಗತಿಕ ಟೆಕ್ ಕಂಪನಿಗಳ ಕುರಿತು ಸ್ಪಷ್ಟ ನೀತಿ ನಿಯಮ ರೂಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಶಿವಸೇನೆ ಮುಖ್ಯಸ್ಥ ಪ್ರಿಯಾಂಕಾ ಚತುರ್ವೇದಿ, ಟ್ರಂಪ್ ಅಧಿಕಾರದಲ್ಲಿದ್ದಾಗ ಸುಮ್ಮನಿದ್ದು, ಅಧಿಕಾರ ತ್ಯಜಿಸುವ ಸಮಯದಲ್ಲಿ ಕೈಗೊಂಡ ಖಾತೆ ರದ್ದತಿ ಕುರಿತು ಚಕಾರ ಎತ್ತಿದ್ದಾರೆ.

ಕಂಗನಾ ರನೌತ್​ರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಬೇಕೆಂದು ಕೋರಿ ಮುಂಬೈ ಮೂಲದ ವಕೀಲ ಅಲಿ ಖಾಶಿಫ್ ಖಾನ್ ಬಾಂಬೆ ಹೈಕೋರ್ಟ್​ನ ಮೆಟ್ಟಿಲೇರಿದ್ದರು. ‘ಕಂಗನಾ ರನೌತ್​ರ ಟ್ವೀಟ್​ಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ’ ಎಂದು ವಾದಿಸಿದ್ದ ಅವರಿಗೆ, ಕೋರ್ಟ್, ಕಂಗನಾ ರನೌತ್​ಗೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಹಕ್ಕಿದೆ ಎಂದು ಉತ್ತರ ನೀಡಿತ್ತು.

ನಿನ್ನೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ರನ್ನು ಭೇಟಿ ಮಾಡಿರುವ ಕಂಗನಾ, ‘ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020’ನ್ನು ಪ್ರಶಂಸಿದ್ದಾರೆ. ಈ ಮಸೂದೆ ಕುರಿತು ಹಲವರಿಗೆ ಭಿನ್ನಾಭಿಪ್ರಾಯಗಳಿದ್ದರೂ ಮದುವೆಯ ಹೆಸರಲ್ಲಿ ಮೋಸ ಹೋದವರಿಗೆ ಈ ಮಸೂದೆ ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು