ಚೆನ್ನೈ: ಇಸ್ರೋದಿಂದ ವಿನೂತನ ಪ್ರಯೋಗಾರ್ಥ ತಯಾರಾಗುತ್ತಿರುವ ಎಸ್ಎಸ್ಎಲ್ವಿ ಡಿ2 ರಾಕೆಟ್ (SSLV D2 Rocket) ಇಂದು ಯಶಸ್ವಿಯಾಗಿ ಆಗಸಕ್ಕೆ ಹಾರಿದೆ. ಮೂರು ಉಪಗ್ರಗಳನ್ನು ಇದು ಭೂಮಿಯ ಕೆಳಹಂತದ ಕಕ್ಷೆಗೆ ಸೇರಿಸುತ್ತಿದೆ. ಇಸ್ರೋ ಸಂಸ್ಥೆಯೇ ನಿರ್ಮಿಸಿದ ಇಒಎಸ್-07, ಅಮೆರಿಕದ ಅಂಟಾರಿಸ್ ನಿರ್ಮಿತ ಜೇನಸ್-01 ಮತ್ತು ಸ್ಪೇಸ್ ಕಿಡ್ಸ್ ಸಂಸ್ಥೆ ನಿರ್ಮಿಸಿದ ಆಜಾದಿಸ್ಯಾಟ್ (AzaadiSAT) ಈ ಮೂರು ಉಪಗ್ರಹಗಳನ್ನು ಹೊತ್ತು ಎಸ್ಎಸ್ಎಲ್ವಿ ಮೇಲೆ ಹಾರಿದೆ. ಆದರೆ ಆಜಾದಿಸ್ಯಾಟ್ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಇದು ಬಡ ಹೆಣ್ಮಕ್ಕಳೇ ತಯಾರಿಸಿದ ಸೆಟಿಲೈಟ್ ಎನಿಸಿದೆ.
ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾ ಸಂಸ್ಥೆ (Space Kidz India) ವತಿಯಿಂದ ಆಜಾದಿಸ್ಯಾಟ್-2 ಉಪಗ್ರಹದ ತಯಾರಿಕೆ ಆಗಿದೆ. ಭಾರತದಾದ್ಯಂತ 75 ಶಾಲೆಗಳಿಂದ ಆಯ್ದ 750 ವಿದ್ಯಾರ್ಥಿನಿಯರು ಆಜಾದಿಸ್ಯಾಟ್ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲರೂ ಬಡಕುಟುಂಬದ ಹಿನ್ನೆಲೆಯವರು ಎಂಬುದು ವಿಶೇಷ. ಎನ್ಸಿಸಿಯ 75ನೇ ವರ್ಷಾಚರಣೆಯ ಗೌರವಾರ್ಥದ ಸಂಕೇತವಾಗಿ ಆಜಾದಿಸ್ಯಾಟ್ ತಯಾರಾಗಿದೆ. 75 ಶಾಲೆಗಳಿಂದ ಈ ಹೆಣ್ಮಕ್ಕಳನ್ನು ಆಜಾದಿಸ್ಯಾಟ್ ಉಪಗ್ರಹ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಇಂದು ರಾಕೆಟ್ ಉಡಾವಣೆ ಮಾಡುವಾಗ ಎನ್ಸಿಸಿಯ ಹಾಡನ್ನು ನುಡಿಸಲಾಗಿತ್ತು. ಹಾಗೆಯೇ, ಬಾಹ್ಯಾಕಾಶದಲ್ಲಿ ಮಹಿಳೆಯರು ಎಂಬುದು ವಿಶ್ವಸಂಸ್ಥೆಯ ಈ ವರ್ಷದ ಧ್ಯೇಯವಾಕ್ಯವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಶಾಲಾ ಹೆಣ್ಮಕ್ಕಳಿಗೆ ಬಾಹ್ಯಾಕಾಶ ಕ್ಷೇತ್ರದ ಮೂಲ ಅಂಶಗಳನ್ನು ಕಲಿಯುವ ಅವಕಾಶವನ್ನು ಆಜಾದಿಸ್ಯಾಟ್ ಮೂಲಕ ಕಲ್ಪಿಸಲಾಗಿದೆ.
ಇದನ್ನೂ ಓದಿ: SSLV-d2 Launch: 3 ಸೆಟಿಲೈಟ್ ಹೊತ್ತು ನಭಕ್ಕೆ ಹಾರಿದ ಎಸ್ಎಸ್ಎಲ್ವಿ ರಾಕೆಟ್
ಆಜಾದಿ ಸ್ಯಾಟ್ ವಿಶೇಷತೆ:
ಆಜಾದಿ ಸ್ಯಾಟ್ ಉಪಗ್ರಹ ಒಟ್ಟು 8.7 ಕಿಲೋ ತೂಕ ಹೊಂದಿದೆ. ಇದರಲ್ಲಿ ತಲಾ 50 ಗ್ರಾಂ ತೂಕದ 75 ಬೇರೆ ಬೇರೆ ಪೇಲೋಡ್ಗಳಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಈ ಪೇಲೋಡ್ಗಳನ್ನು ಅಭಿವೃದ್ಧಿಪಡಿಸಿದರೆ ಸ್ಪೇಸ್ ಕಿಡ್ಸ್ ಇಂಡಿಯಾ ಸಂಸ್ಥೆಯು ಈ 75 ಪೇಲೋಡ್ಗಳನ್ನು ಏಕೀಕೃತಗೊಳಿಸುವ ಕೆಲಸ ಮಾಡಿದೆ. ಈ ಸೆಟಿಲೈಟ್ ಹವ್ಯಾಸಿ ರೇಡಿಯೋ ಸಂವಹನ ಸಾಮರ್ಥ್ಯಗಳನ್ನು ಹೊಂದಿದೆ. ಬಾಹ್ಯಾಕಾಶದಲ್ಲಿ ವಿಕಿರಣಗಳ ಮಟ್ಟದ ಮಾಪನ ಮಾಡುತ್ತದೆ.
ಇತರ ಸೆಟಿಲೈಟ್ಗಳು
ಇಂದು ಎಸ್ಎಸ್ಎಲ್ವಿ ರಾಕೆಟ್ ಜೊತೆ ಉಡಾವಣೆ ಆದ ಇತರ ಸೆಟಿಲೈಟ್ಗಳೆಂದರೆ ಇಒಎಸ್-07 ಮತ್ತು ಜೇನಸ್-1. ಇದರಲ್ಲಿ ಇಒಎಸ್-07 ಇಸ್ರೋದಿಂದಲೇ ನಿರ್ಮಿತವಾದ ಉಪಗ್ರಹ. ಜೇನಸ್-01 ಅಮೆರಿಕದ ಅಂಟಾರಿಸ್ ಸಂಸ್ಥೆ ತಯಾರಿಸಿದೆ. ಇಒಎಸ್ ಉಪಗ್ರಹ 153 ಕಿಲೋ ತೂಕ ಹೊಂದಿದ್ದು, ಈ ಮೂರು ಸೆಟಿಲೈಟ್ ಪೈಕಿ ಅದೇ ಗರಿಷ್ಠ ಭಾರ ಹೊಂದಿರುವುದು. ಜೇನಸ್ ಉಪಗ್ರಹ 10 ಕಿಲೋನಷ್ಟು ಪೇಲೋಡ್ ಹೊಂದಿದೆ.
ಎಸ್ಎಸ್ಎಲ್ವಿ ರಾಕೆಟ್ಟು ಈ ಮೂರು ಉಪಗ್ರಹಗಳನ್ನು ಭೂಮಿಯಿಂದ ಸುಮಾರು 450 ಕಿಮೀ ಎತ್ತರದ ಕಕ್ಷೆಯೊಂದಕ್ಕೆ ಹೊತ್ತೊಯ್ದು ಬಿಡಲಿದೆ.
Published On - 9:59 am, Fri, 10 February 23